ಡ್ರೋನ್ ಕಣ್ಣಲ್ಲಿ “ಲಾಕ್‍ಡೌನ್ ತುಮಕೂರು ನಗರ”

ತುಮಕೂರು

    ಸದಾ ಕಾಲ ಜನ-ವಾಹನ ಸಂಚಾರಗಳಿಂದ ಗಿಜಿಗಿಡುತ್ತಿದ್ದ ತುಮಕೂರು ನಗರವು ಈಗಿನ ಲಾಕ್ ಡೌನ್ ಸಂದರ್ಭದಲ್ಲಿ ಹೇಗಿರಬಹುದೆಂದು ಊಹಿಸುತ್ತಿರುವಿರಾ? ಶಬ್ದಮಾಲಿನ್ಯ, ವಾಯುಮಾಲಿನ್ಯ, ಪರಿಸರ ಮಾಲಿನ್ಯ ಮೊದಲಾದ ಯಾವ ಮಾಲಿನ್ಯವೂ ಇರದಿರುವ ಈಗಿನ “ಲಾಕ್ ಡೌನ್ ತುಮಕೂರು ನಗರ”ದ ದೃಶ್ಯಾವಳಿಯನ್ನು ನೋಡಬಯಸುವಿರಾ? ಹಾಗಿದ್ದರೆ ಈಗಲೇ ಯೂ-ಟ್ಯೂಬ್‍ನಲ್ಲಿ ವೀಕ್ಷಿಸಿ.

    ಕೊರೊನಾ ಕಾರಣದಿಂದ ಲಾಕ್ ಡೌನ್‍ಗೆ ಒಳಪಟ್ಟಿರುವ ತುಮಕೂರು ನಗರದಲ್ಲಿ ಸಾಮಾನ್ಯ ಜನಜೀವನ ಸಂಪೂರ್ಣ ಸ್ಥಗಿತಗೊಂಡಿದೆ. ಜನಸಂಚಾರ, ವಾಹನ ಸಂಚಾರ ಸಂಪೂರ್ಣ ನಿರ್ಬಂಧಕ್ಕೊಳಗಾಗಿದೆ. ಅಂಗಡಿ-ಮುಂಗಟ್ಟುಗಳು, ಶಾಲಾ ಕಾಲೇಜುಗಳು, ಎಲ್ಲ ಕಚೇರಿಗಳು, ಬಸ್ ನಿಲ್ದಾಣಗಳು ಮುಚ್ಚಲ್ಪಟ್ಟಿವೆ. ರಸ್ತೆ-ರಸ್ತೆಗಳೆಲ್ಲ ಖಾಲಿ-ಖಾಲಿಯಾಗಿವೆ. ನಾಲ್ಕು ಲಕ್ಷ ಜನಸಂಖ್ಯೆಯಿರುವ ಇಡೀ ನಗರ ದಿನಗಟ್ಟಲೆ ಬಿಕೋ ಎನ್ನುತ್ತಿದೆ.

      ಹಿಂದೆಂದೂ ಕಾಣದಿರುವ ಇಂತಹುದೊಂದು ಸನ್ನಿವೇಶ ಇನ್ನೂ ಲಾಕ್ ಡೌನ್ ಅವಧಿಯಾಗಿರುವ ಮೇ 3 ರ ವರೆಗೆ ಮುಂದುವರೆಯಲಿದೆ. ಈ ಸಂದರ್ಭದಲ್ಲಿ ರಸ್ತೆ-ರಸ್ತೆಗಳೆಲ್ಲ ಖಾಲಿ-ಖಾಲಿಯಾಗಿರುವ ಅಪೂರ್ವ ದೃಶ್ಯವನ್ನು ಡ್ರೋನ್ ಕ್ಯಾಮರಾದಲ್ಲಿ ಸೆರೆಹಿಡಿದು, ಶಾಶ್ವತವಾಗಿ ದಾಖಲಿಸುವ ಒಂದು ವಿನೂತನ ಪ್ರಯತ್ನವನ್ನು ತುಮಕೂರು ಸ್ಮಾರ್ಟ್‍ಸಿಟಿ ಕಂಪನಿಯು ಮಾಡಿದೆ. ಒಟ್ಟು 3 ನಿಮಿಷ 35 ಸೆಕೆಂಡ್ ಅವಧಿಯ ಸದರಿ ವಿಡಿಯೋ ದೃಶ್ಯಾವಳಿಯನ್ನು ಯೂ-ಟ್ಯೂಬ್‍ಗೆ ಅಪ್‍ಲೋಡ್ ಮಾಡುವ ಮೂಲಕ ಸಾರ್ವಜನಿಕ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

    ತುಮಕೂರು ನಗರದ ಬಿ.ಎಚ್.ರಸ್ತೆ, ಬಸ್ ನಿಲ್ದಾಣ, ಬೆಂಗಳೂರು-ಪುಣೆ ಹೆದ್ದಾರಿ, ಉಪ್ಪಾರಹಳ್ಳಿ ಮೇಲ್ಸೇತುವೆ, ತುಮಕೂರು ನಗರದ ಪಾರಂಪರಿಕ ಕಟ್ಟಡವಾದ ಶ್ರೀಕೃಷ್ಣರಾಜೇಂದ್ರ ಟೌನ್ ಹಾಲ್, ಬಿ.ಜಿ.ಎಸ್.ವೃತ್ತ, ಎಸ್.ಎಸ್.ವೃತ್ತ, ಅಮಾನಿಕೆರೆ, ಜೆ.ಸಿ.ರಸ್ತೆ, ಕೋಟೆ ಆಂಜನೇಯ ಪ್ರತಿಮೆ, ಎಸ್.ಐ.ಟಿ. ಕಾಲೇಜು, ತುಮಕೂರು ವಿ.ವಿ., ಸರ್ಕಾರಿ ಜೂನಿಯರ್ ಕಾಲೇಜು ಮೈದಾನ, ಸಿದ್ಧಗಂಗಾ ಮಠ ಹೀಗೆ ನಗರದ ಅನೇಕ ಪ್ರಮುಖ ಸ್ಥಳಗಳ ದೃಶ್ಯಗಳನ್ನು ಅತಿ ಎತ್ತರದಿಂದ ಡ್ರೋನ್ ಕ್ಯಾಮರದಲ್ಲಿ ಸುಂದರವಾಗಿ ಸೆರೆಹಿಡಿಯಲಾಗಿದೆ.

    ಸದಾ ಗಿಜಿಗಿಡುತ್ತಿದ್ದ ತುಮಕೂರಿನ ಇವೆಲ್ಲ ಸ್ಥಳಗಳು ಇದೀಗ ಅದೆಷ್ಟು ನಿರ್ಜನವಾಗಿವೆಯೆಂಬುದನ್ನು ಈ ದೃಶ್ಯಾವಳಿಯಲ್ಲಿ ಕಾಣಬಹುದಾಗಿದೆ.ಈ ವಿಡಿಯೋ ದೃಶ್ಯಾವಳಿ ಪ್ರಸ್ತುತ ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ವಾಟ್ಸಾಪ್‍ಗಳಲ್ಲಿ ವೈರಲ್ ಆಗಿದ್ದು, ಅಸಂಖ್ಯಾತ ಜನರ ಗಮನವನ್ನು ಸೆಳೆಯುತ್ತಿದೆ. ಈ ವಿಡಿಯೋವನ್ನು ಯೂ-ಟ್ಯೂಬ್‍ಗೆ ಅಪ್‍ಲೋಡ್ ಮಾಡಿರುವುದರಿಂದ, ಇದು ಶಾಶ್ವತವಾಗಿ ಸಾರ್ವಜನಿಕರಿಗೆ ದೊರೆಯುವಂತಾಗಿದೆ.

    ಲಾಕ್ ಡೌನ್‍ಗೆ ಮೊದಲು ರಾಜಧಾನಿ ಬೆಂಗಳೂರು ಹೇಗಿತ್ತೆಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಲಾಕ್ ಡೌನ್ ಬಳಿಕ ಇಡೀ ಬೆಂಗಳೂರು ಬಿಕೊ ಎನ್ನುತ್ತಿದ್ದು, ಬೆಂಗಳೂರು ಈಗ ಹೇಗೆ ಕಾಣುತ್ತಿದೆಯೆಂಬುದನ್ನು ಅಲ್ಲಿನ ಬಿ.ಬಿ.ಎಂ.ಪಿ. ಯು ಡ್ರೋನ್ ಮೂಲಕ ದಾಖಲೀಕರಣಗೊಳಿಸುವ ಪ್ರಯತ್ನವನ್ನು ಈಗಾಗಲೇ ಮಾಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಸಿದ್ಧಿ ಪಡೆದಿದೆ. ಪ್ರಸ್ತುತ ಆ ಸಾಲಿನಲ್ಲಿ ತುಮಕೂರು ಸ್ಮಾರ್ಟ್‍ಸಿಟಿ ಕಂಪನಿಯೂ ಹೆಜ್ಜೆಯಿಟ್ಟಿದೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap