ನವದೆಹಲಿ:
ಪ್ರಧಾನಮಂತ್ರಿ ನರೇಂದ್ರ ಮೋದಿ ಪಂಚಾಯತ್ ರಾಜ್ ದಿನದ ಅಂಗವಾಗಿ ಇ- ಗ್ರಾಮ್ ಸ್ವರಾಜ್ ಮತ್ತು ಸ್ವಾಮಿತ್ವ ಯೋಜನೆಗೆ ಚಾಲನೆ ನೀಡಿ ಶುಭಾಶಯ ಕೋರಿದರು. ಇದೇ ವೇಳೆ ಕೋವಿಡ್ ನಿಯಂತ್ರಣಕ್ಕಾಗಿ ಚಿಕ್ಕಬಳ್ಳಾಪುರದಲ್ಲಿ ತೆಗೆದುಕೊಳ್ಲಲಾಗಿರುವ ಕ್ರಮದ ಕುರಿತು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಂಚಾಯತ್ ರಾಜ್ ದಿನಾಚರಣೆ ಅಂಗವಾಗಿ ದೇಶದ ಪಂಚಾಯತ್ ಪ್ರತಿನಿಧಿಗಳೊಂದಿಗೆ ವಿಡಿಯೋ ಸಂವಾದ ನಡೆಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಪುರಸ್ಕೃತ ಪಂಚಾಯತ್ ಗಳು ಮತ್ತು ಜನಪ್ರತಿನಿಧಿಗಳನ್ನು ಹಾಗೂ ಆ ಗ್ರಾಮದ ನಿವಾಸಿಗಳನ್ನು ಅಭಿನಂದಿಸಿದರು. ಸಾರ್ವಜನಿಕರು ಪ್ರಶಸ್ತಿ ಪುರಸ್ಕೃತ ಪಂಚಾಯತ್ ಗಳ ಮಾಹಿತಿಯನ್ನು ಜಾಲತಾಣದಿಂದ ಪಡೆಯಬಹುದಾಗಿದೆ ಎಂದರು.
ತಮ್ಮ ತಮ್ಮ ಗ್ರಾಮ ಪಂಚಾಯತ್ ಗಳಲ್ಲಿ ಯಾವ ಯಾವ ಕೆಲಸ ನಡೆಯುತ್ತಿದೆ, ಎಷ್ಟು ಪ್ರಗತಿಯಲ್ಲಿದೆ ಎಂಬುದನ್ನು ಮೊಬೈಲ್ ನಲ್ಲೇ ತಿಳಿಯಬಹುದಾಗಿದೆ ಎಂದು ಪ್ರಧಾನಿ ವಿವರಿಸಿದರು.ಇ – ಗ್ರಾಮ್ ಸ್ವರಾಜ್ ಮೂಲಕ ಎಲ್ಲರೂ ಗ್ರಾಮಗಳಲ್ಲಿ ಸ್ವತ್ತಿನ ಸ್ಥಿತಿ ತಿಳಿಯಬಹುದಾಗಿದೆ. ಸ್ವಾಮಿತ್ವ ಯೋಜನೆ ಎಲ್ಲವನ್ನೂ ಸರಿಪಡಿಸುವ ಪ್ರಯತ್ನವಾಗಿದೆ. ಡ್ರೋನ್ ಮೂಲಕ ಇಡೀ ಗ್ರಾಮದ ಸ್ವತ್ತಿನ ಮ್ಯಾಪಿಂಗ್ ಆಗಲಿದೆ, ಈ ಮೂಲಕ ಸಂಪತ್ತಿನ ಮಾಲೀಕರಿಗೆ ಸಂಪತ್ತಿನ ಸ್ವಾಮ್ಯತ್ವ ಪತ್ರ – ಟೈಟಲ್ ಡೀಡ್ ನೀಡಲಾಗುತ್ತದೆ. ಇದರಿಂದ ಜಗಳ, ಕದನ ಇಲ್ಲವಾಗಿ ಗ್ರಾಮಗಳ ಅಭಿವೃದ್ಧಿಯಾಗುತ್ತದೆ. ನಗರಗಳಂತೆಯೇ ಗ್ರಾಮಗಳಲ್ಲೂ ಬ್ಯಾಂಕ್ ಗಳಿಂದ ಸುಲಭವಾಗಿ ಹಣ ಪಡೆಯಬಹುದಾಗಿದೆ. ಇದರಿಂದ ಹೆಚ್ಚಿನ ಪ್ರಗತಿ ಸಾಧ್ಯವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ದೇಶವನ್ನು ರಕ್ಷಿಸಲು ಮತ್ತು ದೇಶ ಅಭಿವೃದ್ಧಿ ಪಥದಲ್ಲಿ ನಡೆಯಲು ಅಗತ್ಯ ಕ್ರಮಗಳೊಂದಿಗೆ ಮುನ್ನಡೆಯುತ್ತಿರುವುದಾಗಿ ಪ್ರಧಾನಿ ಹೇಳಿದರು
ಬಳಿಕ ಗ್ರಾಮ ಪಂಚಾಯತ್ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದ ಅವರು, ಚಿಕ್ಕಬಳ್ಳಾಪುರದ ಪಂಚಾಯತ್ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಮಪಂಚಾಯತ್ ಅಧ್ಯಕ್ಷ ನವೀನ್ ಕುಮಾರ್ ಗ್ರಾಮದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಮತ್ತು ಸರ್ಕಾರದ ಯೋಜನೆಗಳ ಫಲಾನುಭವಿಗಳ ವಿವರಗಳನ್ನು ನೀಡಿದರು. ಗ್ರಾಮಪಂಚಾಯತ್ ಕಾರ್ಯಗಳ ವಿವರ ಪಡೆದು, ಯೋಜನೆ ಉತ್ತಮವಾಗಿ ರೂಪಿಸಿರುವುದಾಗಿ ಪ್ರಧಾನಿ ಶ್ಲಾಘಿಸಿದರು.
