ಹೆಚ್ಚಿನ ಬೆಲೆಗೆ ದಿನಸಿ ಮಾರಿದರೂ ಕೇಳುವವರಿಲ್ಲ!

ಹುಳಿಯಾರು
       ಹುಳಿಯಾರು ಪಟ್ಟಣದಲ್ಲಿ ವ್ಯಾಪಾರಿಗಳು ದಿನಸಿ ಪದಾರ್ಥಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರೂ ಇವರನ್ನು ಹೇಳುವವರು, ಕೇಳುವವರು ಯಾರೂ ಇಲ್ಲವೆ ಎನ್ನುವ  ಪ್ರಶ್ನೆ ಸಾರ್ವಜನಿಕರದಾಗಿದೆ. 
     
        ಲಾಕ್‍ಡೌನ್‍ನಿಂದಾಗಿ ಉದ್ಯೋಗ ಇಲ್ಲದೆ ಜೀವನ ನಡೆಸುವುದೇ ಜನರಿಗೆ ಕಷ್ಟಕರವಾಗಿದೆ. ಈ ಸಮಯದಲ್ಲಿ ಮಾನವೀಯ ನೆಲೆಗಟ್ಟಿನಲ್ಲಿ ವ್ಯಾಪಾರ ಮಾಡಬೇಕಾದ ವರ್ತಕರು ದಿನಸಿ, ಇನ್ನಿತರ ದಿನಬಳಕೆಯ ಪದಾರ್ಥಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಅಕ್ಕಿ, ಬೇಳೆ, ಅಡುಗೆ ಎಣ್ಣೆ ಸೇರಿದಂತೆ ದಿನಸಿ ಪದಾರ್ಥಗಳ ಬೆಲೆಯನ್ನು ಶೇ. 10 ರಷ್ಟು ಹೆಚ್ಚಿಸಿದ್ದು ಒಂದೊಂದು ಅಂಗಡಿಯಲ್ಲಿ ಒಂದೊಂದು ಬೆಲೆ ನಿಗದಿ ಮಾಡಿ ಮಾರುತ್ತಿದ್ದಾರೆ ಎಂಬುದು ಗ್ರಾಹಕರ ದೂರಾಗಿದೆ.
     
       ಸಾಮಾಜಿಕ ಅಂತರ ಕಾಪಾಡಿ ಸರತಿ ಸಾಲಿನಲ್ಲಿ ಬಿಸಿಲಿನಲ್ಲಿ ನಿಂತ ಗ್ರಾಹಕ ಪದಾರ್ಥ ಸಿಕ್ಕಿದ್ದೇ ನಮ್ಮ ಭಾಗ್ಯ ಎಂದು ಬೆಲೆ ಏರಿಕೆಯ ಬಗ್ಗೆ ಪ್ರಶ್ನಿಸಿದೆ  ಖರೀದಿಸುತ್ತಿದ್ದಾನೆ. ಗ್ರಾಹಕನ ಈ ಅನಿವಾರ್ಯತೆಯ ಲಾಭವನ್ನು ವರ್ತಕರು ಪಡೆಯುತ್ತಿದ್ದರೂ, ಅಧಿಕಾರಿಗಳು ಅಂಕುಶ ಹಾಕದಾಗಿದ್ದಾರೆ. ಪರಿಣಾಮ ಕೂಲಿ ವಂಚಿತ ಬಡವರು, ಕಾರ್ಮಿಕರು, ರೈತರು ದವಸ ಧಾನ್ಯಗಳನ್ನು ಹೆಚ್ಚಿನ ಬೆಲೆಗೆ ಖರೀದಿಸಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ.
     
      ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಬೇಕಾದ ಅಧಿಕಾರಿಗಳು ದಿನಸಿ ಮಾರಾಟಕ್ಕೆ ಯಾವುದೇ ಮಾರ್ಗಸೂಚಿ ಸಿದ್ಧಪಡಿಸಿಲ್ಲ. ಅಕ್ಕಪಕ್ಕದ ತಾಲ್ಲೂಕುಗಳಲ್ಲಿ ತಾಲ್ಲೂಕು ಆಡಳಿತದಿಂದಲೇ ದರ ಪಟ್ಟಿ ಸಿದ್ದಪಡಿಸಿ ಅದರಂತೆ ಮಾರಲು ವರ್ತಕರಿಗೆ ಕಟ್ಟುನಿಟ್ಟಿನ ಆದೇಶ ಮಾಡಲಾಗಿದೆ. ಆದರೆ ಇಲ್ಲಿ ಮಾತ್ರ ವ್ಯಾಪಾರಿಗಳಿಗೆ ಹೇಳುವವರು, ಕೇಳುವವರು ಯಾರೂ ಇಲ್ಲದಾಗಿದ್ದು ಮನಸ್ಸೋ ಇಚ್ಛೆಗೆ ಬೆಲೆ ಪಡೆಯುತ್ತಿದ್ದಾರೆ ಎಂಬುದು ಸಾರ್ವಜನಿಕರು ಆರೋಪವಾಗಿದೆ.
   
     ಆಹಾರ ಪದಾರ್ಥಗಳ ಬೆಲೆಯನ್ನು ಹೆಚ್ಚಿಸದಂತೆ ವರ್ತಕರಿಗೆ ಅಧಿಕಾರಿಗಳು ಇನ್ನಾದರೂ ಕಠಿಣ ಸೂಚನೆ ನೀಡಬೇಕಿದೆ. ತಾಲ್ಲೂಕಿನಾದ್ಯಂತ ಚಾಲ್ತಿಯಲ್ಲಿರುವ ದಿನಸಿ ಪದಾರ್ಥಗಳ ತರಹೇವಾರಿ ಬೆಲೆಗಳನ್ನು ತಹಬಂದಿಗೆ ತಂದು, ಏಕರೂಪ ಬೆಲೆ ನಿಗದಿ ಮಾಡಬೇಕಿದೆ. ಈ ನಿಯಮ ಉಲ್ಲಂಘಿಸಿದರೆ ಪರವಾನಗಿ ರದ್ದು ಮಾಡುವ ಎಚ್ಚರಿಕೆ ನೀಡಬೇಕಿದೆ ಎಂಬುದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap