ಹುಳಿಯಾರು
ಹುಳಿಯಾರು ಹೋಬಳಿಯಲ್ಲಿ ಅವಧಿ ಮೀರಿದ ಬಿಯರ್ ಮಾರಾಟವಾಗುತ್ತಿದ್ದರೂ ಅಬಕಾರಿ ಇಲಾಖೆಯವರು ಜಾಣ ಕುರುಡು ಪ್ರದರ್ಶಿಸುತ್ತಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.ಲಾಕ್ಡೌನ್ನಿಂದಾಗಿ ಕಳೆದ ಒಂದು ತಿಂಗಳಿಂದ ಮದ್ಯದ ಅಂಗಡಿಗಳನ್ನೂ ಮುಚ್ಚಿಸಲಾಗಿದೆ. ಪರಿಣಾಮ ಮದ್ಯ ವ್ಯಸನಿಗಳು ಮದ್ಯ ಸಿಗದೆ ಅಕ್ಷರಶಃ ಕಂಗಾಲಾಗಿದ್ದಾರೆ.
ಮದ್ಯದಂಗಡಿ ಇಂದು ತೆಗೆಯಬಹುದು, ನಾಳೆ ತೆಗೆಯಬಹುದು ಎಂದು ಕಾದೂ ಕಾದೂ ಹೈರಾಣಾಗಿದ್ದಾರೆ. ಸ್ನೇಹಿತರನ್ನು, ಬಾರ್ ಮಾಲೀಕರನ್ನು ಎಷ್ಟಾದರೂ ಪರ್ವಾಗಿಲ್ಲ ನಮಗೆ ಬೇಕೆಬೇಕು ಎಲ್ಲಿ ಸಿಗುತ್ತೆ ಹೇಳಿ ಎಂದು ಪೀಡಿಸುತ್ತಿದ್ದಾರೆ.
ಮದ್ಯ ವ್ಯಸನಿಗಳ ಈ ಪರಿಸ್ಥಿತಿಯ ಲಾಭ ಪಡೆದ ಕೆಲವರು ಹುಳಿಯಾರು ಹೋಬಳಿಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಇಳಿದಿದ್ದಾರೆ. ಒಂದು ಕ್ವಾರ್ಟರ್ಗೆ ನೂರು ನೂರಿಪ್ಪತ್ತು ರೂ. ಬೆಲೆಯ ಮದ್ಯವನ್ನು ಐನೂರು, ಆರುನೂರು ರೂ.ಗಳಿಗೆ ಮಾರಾಟ ಮಾಡುತ್ತಿದ್ದಾರೆ. ಅಷ್ಟೆ ಅಲ್ಲದೆ ಅವಧಿ ಮೀರಿದ ಬಿಯರ್ ಸಹ ತಂದು ಐದನೂರು ರೂ.ಗಳಿಗೆ ಮಾರಾಟ ಮಾಡಿ ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ.
ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುತ್ತಿರುವುದು ಪ್ರಮುಖ ವಿಷಯವಲ್ಲ. ಎಲ್ಲಾ ಮದ್ಯದ ಅಂಗಡಿಗಳನ್ನು ಮುಚ್ಚಿದ್ದರೂ ಇವರಿಗೆ ಮದ್ಯದ ಬಾಟಲಿಗಳು ಹೇಗೆ ಸಿಕ್ಕವು ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಇದಕ್ಕೆ ಬಾರ್ ಮಾಲೀಕರೂ ಶಾಮೀಲಾಗಿರುವ ಅನುಮಾನಗಳು ಮೂಡಿವೆ. ಇನ್ನು ಅವಧಿ ಮೀರಿದ ಅಂದರೆ 2018 ರ ಸಾಲಿನ ಬಿಯರ್ಗಳು ಈಗ ಹೊರ ಬಂದಿರುವುದು ಪಾನಪ್ರಿಯರನ್ನೇ ಬೆಚ್ಚಿ ಬೀಳಿಸಿದೆ. ಈ ದಂಧೆಗೆ ಅಬಕಾರಿ ಇಲಾಖೆಯವರ ಸಾತ್ ಇಲ್ಲದೆ ನಡೆಸುವುದು ಅಸಾಧ್ಯ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಲಾಕ್ಡೌನ್ನಿಂದ ಆರ್ಥಿಕ ಮುಗ್ಗಟ್ಟು ಸೃಷ್ಟಿಯಾಗಿರುವ ಈ ಸಂದರ್ಭದಲ್ಲಿ ಮನ ಬಂದ ಬೆಲೆಗೆ ಮದ್ಯ ಮಾರಿ ಬಡಕುಟುಂಬಗಳನ್ನು ಬೀದಿಗೆ ತಳ್ಳುತ್ತಿದ್ದಾರೆ. ಅಲ್ಲದೆ ಬಿಯರ್ಗಳ ಬಳಕೆ ಅವಧಿ ಮೀರಿರುವ ಸತ್ಯ ಬಚ್ಚಿಟ್ಟು ಕುಡುಕರ ಆರೋಗ್ಯವನ್ನು ಹಾಳು ಮಾಡುತ್ತಿದ್ದಾರೆ. ಇಂತಹ ಅಕ್ರಮ ದಂಧೆ ಕೋರರನ್ನು ಪತ್ತೆ ಹಚ್ಚುವುದು ಅಬಕಾರಿ ಇಲಾಖೆಗೆ ಅಸಾಧ್ಯದ ಮಾತಲ್ಲ. ಆದರೆ ಅವರು ಜಾಣ ಕುರುಡು, ಜಾಣ ಕಿವುಡು ಪ್ರದರ್ಶಿಸಿ ಜಾಣ ಮೌನಕ್ಕೆ ಜಾರಿದ್ದಾರೆ.
ಪರಿಸ್ಥಿತಿಯ ಲಾಭ ಪಡೆಯುವವರು ಎಷ್ಟೇ ಪ್ರಭಾವ ಶಾಲಿಗಳಾಗಿದ್ದರೂ ಬಗ್ಗು ಬಡಿಯ ಬೇಕಿದ್ದು ಈ ನಿಟ್ಟಿನಲ್ಲಿ ಲಾಕ್ಡೌನ್ ತೆರವಾಗುವ ತನಕ ಕಾಯದೆ ಬಾರ್ಗಳ ಬಾಗಿಲು ತೆಗಿಸಿ ಸ್ಟಾಕ್ ಚೆಕ್ ಮಾಡುವ ತುರ್ತು ಕಾರ್ಯಚರಣೆ ಮಾಡಬೇಕಿದೆ. ಅವಧಿ ಮೀರಿರುವ ಬಿಯರ್ ಬಾಟಲ್ಗಳ ಮೇಲೆ ಇರುವ ಬ್ಯಾಚ್ ನಂಬರ್ ಮೇಲೆ ಇವು ಮದ್ಯದಂಗಡಿಯವೊ ಅಥವಾ ಸೀಝ್ ಮಾಡಿದ್ದ ಮದ್ಯವೋ ಎಂಬ ಸತ್ಯಾಸತ್ಯತೆ ಅರಿತು ಕ್ರಮ ಕೈಗೊಳ್ಳಬಹುದಾಗಿದೆ. ಇನ್ನಾದರೂ ಅಧಿಕಾರಿಗಳು ಇತ್ತ ಗಮನ ಹರಿಸುವರೆ ಎಂಬುದನ್ನು ಕಾದು ನೋಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








