ಪಾಲಿಕೆ: ವಿಡಿಯೋ ಕಾನ್ಫರೆನ್ಸ್ ಮೂಲಕ ಬಜೆಟ್‍ಗೆ ಸಿದ್ಧತೆ

ತುಮಕೂರು

    ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಹಾಗೂ ಪ್ರಸ್ತುತ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಗಿರುವುದರಿಂದ ತುಮಕೂರು ಮಹಾನಗರ ಪಾಲಿಕೆಯು ಈ ಬಾರಿ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಈ ಸಾಲಿನ ಬಜೆಟ್ ಸಭೆಯನ್ನು ನಡೆಸುವ ಮಹತ್ವದ ತೀರ್ಮಾನ ಕೈಗೊಂಡಿದ್ದು, ಪಾಲಿಕೆಯ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲಾಗಲಿದೆ.

    ಪಾಲಿಕೆಯ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಸಭೆಯು ಗುರುವಾರ ಸಮಿತಿ ಅಧ್ಯಕ್ಷ ಟಿ.ಎಂ.ಮಹೇಶ್ ಅವರ ಅಧ್ಯಕ್ಷತೆಯಲ್ಲಿ ತುಮಕೂರು ಮಹಾನಗರ ಪಾಲಿಕೆ ಕಚೇರಿಯ ಸಭಾಂಗಣದಲ್ಲಿ ನಡೆದಿದ್ದು, 2019-20 ನೇ ಸಾಲಿನ ಪರಿಷ್ಕøತ ಹಾಗೂ 2020-21 ನೇ ಸಾಲಿನ ಆಯವ್ಯಯ ಅಂದಾಜು ಕರಡು ಪಟ್ಟಿಯನ್ನು ಅನುಮೋದಿಸಿರುವ ಹಿನ್ನೆಲೆಯಲ್ಲಿ ಪಾಲಿಕೆಯ ಬಜೆಟ್ ಸಭೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿ ಅಲ್ಲಿ ಇದಕ್ಕೆ ಅನುಮೋದನೆ ಪಡೆಯಲು ನಿರ್ಧರಿಸಲಾಗಿದೆ.

     ಸ್ಥಾಯಿ ಸಮಿತಿಯ ಈ ಸಭೆಯಲ್ಲಿ ಮೇಯರ್ ಫರೀದಾಬೇಗಂ, ಉಪಮೇಯರ್ ಶಶಿಕಲಾ ಗಂಗಹನುಮಯ್ಯ ಅವರು ಉಪಸ್ಥಿತರಿದ್ದು, ಸ್ಥಾಯಿ ಸಮಿತಿಯ ಸದಸ್ಯರುಗಳು ಭಾಗವಹಿಸಿದ್ದರು. ಬಜೆಟ್ ಬಗ್ಗೆ ಸಾಕಷ್ಟು ಚರ್ಚೆ ನಡೆದು ಅಂತಿಮವಾಗಿ ಈ ತೀರ್ಮಾನಕ್ಕೆ ಬರಲಾಗಿದೆ.

ದಿನಾಂಕ ನಿಗದಿಯಾಗಿಲ್ಲ

      ಪಾಲಿಕೆಯ ಬಜೆಟ್ ಸಭೆಯನ್ನು ನಡೆಸಲು ಇನ್ನೂ ದಿನಾಂಕ ನಿಗದಿಯಾಗಿಲ್ಲ. ಆದರೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲು ಉದ್ದೇಶಿಸಲಾಗಿದೆ. ಲಾಕ್ ಡೌನ್ ಮೇ 3 ರ ವರೆಗೆ ಇದ್ದು, ಆ ಬಳಿಕ ಮುಂದಿನ ನಿರ್ಧಾರವನ್ನು ಸರ್ಕಾರ ಪ್ರಕಟಿಸ ಬೇಕಾಗಿದೆ. ಆದರೂ ಸಹ ಎಲ್ಲೆಡೆ ಪ್ರತಿಯೊಬ್ಬರೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕೆಂಬುದು ಅನಿವಾರ್ಯವಾಗಿದೆ. ಅಲ್ಲದೆ ತುಮಕೂರು ನಗರದಲ್ಲೇ ಕೊರೊನಾ ಪ್ರಕರಣ ಕಂಡುಬಂದಿದ್ದು, ನಗರದ ಬಹುತೇಕ ಪ್ರದೇಶ ಬಫರ್ ಜೋನ್ ನಲ್ಲಿರುವುದರಿಂದ ಪಾಲಿಕೆ ಸಭೆಯಲ್ಲೂ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲೇ ಬೇಕಾಗುತ್ತದೆ. ಇವೆಲ್ಲ ಕಾರಣಗಳಿಂದ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಈ ಬಾರಿ ಬಜೆಟ್ ಸಭೆ ನಡೆಸಲು ಪಾಲಿಕೆ ಅಧಿಕಾರಿಗಳು ತಾಂತ್ರಿಕ ಸಿದ್ಧತೆಗಳಲ್ಲಿ ತೊಡಗಿದ್ದಾರೆ.

ಕಮಾಂಡ್ ಸೆಂಟರ್ ಬಳಕೆ

     ಪಾಲಿಕೆ ಕಚೇರಿ ಪಕ್ಕದ ಶ್ರೀಕೃಷ್ಣರಾಜೇಂದ್ರ ಪುರಭವನ ಕಟ್ಟಡದೊಳಗೆ ಕಮಾಂಡ್ ಸೆಂಟರ್ ಇದೆ. ಇಡೀ ನಗರದಲ್ಲಿ ಅಳವಡಿಸಲ್ಪಟ್ಟಿರುವ ಸಿ.ಸಿ. ಟಿ.ವಿ. ದೃಶ್ಯಾವಳಿಗಳನ್ನು ಸಮಗ್ರವಾಗಿ ಇಲ್ಲಿ ವೀಕ್ಷಿಸುವ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸಲಾಗಿದೆ. ಈ ಕಮಾಂಡ್ ಸೆಂಟರ್ ಅನ್ನು ಪ್ರಸ್ತುತ ವಿಡಿಯೋ ಕಾನ್ಫರೆನ್ಸ್‍ಗೆ ಬಳಸಿಕೊಳ್ಳಲು ಯೋಜಿಸಲಾಗಿದೆ.

      ಲಭ್ಯ ಮಾಹಿತಿಗಳ ಪ್ರಕಾರ, ನಿರ್ದಿಷ್ಟ ಸಂಖ್ಯೆಯ ಸದಸ್ಯರು, ಅಧಿಕಾರಿಗಳು ಕಮಾಂಡ್ ಸೆಂಟರ್‍ನಲ್ಲಿ ಕುಳಿತುಕೊಳ್ಳಲಿದ್ದು, ಇಲ್ಲೇ ಬಜೆಟ್ ವಾಚನ ನಡೆಯಲಿದೆ. ಮಿಕ್ಕ ಸದಸ್ಯರುಗಳು ಮಹಾನಗರ ಪಾಲಿಕೆ ಕಚೇರಿಯ ಸಭಾಂಗಣದೊಳಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಕುಳಿತುಕೊಳ್ಳುತ್ತಾರೆ. ಅಲ್ಲಿ ಇವರ ಲ್ಯಾಪ್ ಟಾಪ್ ನಲ್ಲಿ ಬಜೆಟ್ ವಿವರ ಬರುತ್ತಿರುತ್ತದೆ. ವೇದಿಕೆಯ ಪರದೆಯ ಮೇಲೆ ಕಮಾಂಡ್ ಸೆಂಟರ್ ನಲ್ಲಿ ಬಜೆಟ್ ಮಂಡಿಸುವುದು ನೇರಪ್ರಸಾರ ಆಗುತ್ತದೆ. ಅದೇ ರೀತಿ ಕಮಾಂಡ್ ಸೆಂಟರ್ ಒಳಗಿನ ಪರದೆ ಮೇಲೆ ಈ ಸಭಾಂಗಣದ ದೃಶ್ಯ ನೇರಪ್ರಸಾರ ಆಗುತ್ತಿರುತ್ತದೆ. ಎರಡೂ ಕಡೆಗಳಲ್ಲಿ ತೀರಾ ಅನಿವಾರ್ಯವಾಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿರುತ್ತಾರೆ. ಸ್ಥಳಾಭಾವದ ಕಾರಣ ಮಾಧ್ಯಮ ಪ್ರತಿನಿಧಿಗಳಿಗೂ ಸಭಾಂಗಣದೊಳಗೆ ಅವಕಾಶ ಸಿಗುವುದಿಲ್ಲ ಎನ್ನಲಾಗುತ್ತಿದೆ.

      ಬಜೆಟ್ ಮಂಡನೆ ಸ್ಥಳದಲ್ಲಿ ಮೇಯರ್ ಫರೀದಾಬೇಗಂ, ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಬಜೆಟ್ ಮಂಡಿಸಲಿರುವ ತೆರಿಗೆ ನಿರ್ಧರಣೆ, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಎಂ.ಮಹೇಶ್, ಪಾಲಿಕೆ ಆಯುಕ್ತ ಟಿ.ಭೂಬಾಲನ್, ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿಗಳು ಹಾಗೂ ತುಮಕೂರು ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು, ತುಮಕೂರು ನಗರದ ಶಾಸಕ ಜಿ.ಬಿ. ಜ್ಯೋತಿಗಣೇಶ್, ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು, ಪಾಲಿಕೆಯ ವಿರೋಧ ಪಕ್ಷದ ನಾಯಕ ಸಿ.ಎನ್.ರಮೇಶ್ ಅವರು ಇರಲಿದ್ದಾರೆ. ಮಿಕ್ಕ ಮೂರು ಸ್ಥಾಯಿ ಸಮಿತಿಗಳ ಅಧ್ಯಕ್ಷರುಗಳಾದ ಟಿ.ಕೆ.ನರಸಿಂಹಮೂರ್ತಿ, ಎಚ್.ಮಲ್ಲಿಕಾರ್ಜುನಯ್ಯ ಮತ್ತು ಚಂದ್ರಕಲಾ ಅವರುಗಳಿಗೂ ಇಲ್ಲೇ ಸ್ಥಳಾವಕಾಶ ಕಲ್ಪಿಸುವ ನಿರೀಕ್ಷೆ ಇದೆ. ಇನ್ನುಳಿದ ಎಲ್ಲ ಸದಸ್ಯರುಗಳಿಗೆ ಪಾಲಿಕೆ ಸಭಾಂಗಣದೊಳಗೆ ಸಾಮಾಜಿಕ ಅಂತರದೊಂದಿಗೆ ಆಸನ ವ್ಯವಸ್ಥೆಯನ್ನು ಮಾಡಲುದ್ದೇಶಿಸಲಾಗಿದೆ.

      ಬಜೆಟ್ ಮಂಡಿಸುವ ಕಮಾಂಡ್ ಸೆಂಟರ್ ಮತ್ತು ಪಾಲಿಕೆ ಸಭಾಂಗಣದೊಳಗೆ ಪರದೆ ಇದ್ದು. ಅದರಲ್ಲಿ ಪರಸ್ಪರರಿಗೆ ಎರಡೂ ಸ್ಥಳಗಳು ಕಾಣಲಿವೆ. ಬಜೆಟ್ ವಿವರವು ಪ್ರತಿ ಸದಸ್ಯರ ಮೇಜಿನಲ್ಲಿರುವ ಲ್ಯಾಪ್ ಟಾಪ್ ನಲ್ಲಿ ಲಭ್ಯವಾಗಲಿದೆ. ಬಜೆಟ್ ಮಂಡನೆ ಬಳಿಕ ಸದಸ್ಯರುಗಳು ಚರ್ಚೆ ಮಾಡಬಯಸಿದರೆ, ಅದು ಕಮಾಂಡ್ ಸೆಂಟರ್ ಪರದೆಯಲ್ಲಿ ಮೂಡಿಬರಲಿದೆ. ಇಲ್ಲಿಂದ ನೀಡುವ ಉತ್ತರ ಸಭಾಂಗಣದ ಪರದೆಯಲ್ಲಿ ಕಾಣುತ್ತದೆ. ಪರಸ್ಪರ ಸಂಭಾಷಣೆ ಮಾಡಲು ಅವಕಾಶವಿರುತ್ತದೆಂದು ಮೂಲಗಳು ತಿಳಿಸಿವೆ.

ಆಯುಕ್ತರು ಬರೆದಿದ್ದ ಪತ್ರ

      ಈಗಾಗಲೆ 2020-21 ನೇ ಸಾಲಿನ ಆರ್ಥಿಕ ವರ್ಷದ ಮೊದಲನೇ ತಿಂಗಳು ಕಳೆಯುತ್ತಿರುವುದಿಂದ ಕೂಡಲೇ ಈ ಸಾಲಿನ ಬಜೆಟ್‍ಗೆ ಅನುಮೋದನೆ ಸಿಗಬೇಕಾಗಿದೆ. ಇಲ್ಲದಿದ್ದರೆ ಪಾಲಿಕೆಯ ಆಡಳಿತದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆಂದು ತಿಳಿಸಿ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಅವರು ಪಾಲಿಕೆಯ ಮೇಯರ್ ಫರೀದಾಬೇಗಂ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಎಂ.ಮಹೇಶ್ ಅವರಿಗೆ ಎರಡು ಬಾರಿ ಪತ್ರ ಬರೆದಿದ್ದುದನ್ನು ಇಲ್ಲಿ ಸ್ಮರಿಸಬಹುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link