ಲಕ್ನೊ:
ದೇಶದಲ್ಲಿ ಕೊರೋನಾ ವೈರಸ್ ಹರಡಲು ತಬ್ಲಿಘಿಗಳೆ ಕಾರಣ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಸೋಂಕಿಗೆ ಒಳಗಾಗುವುದು ಅಪರಾಧವಲ್ಲ ಆದರೆ ಅದು ತಮಗೆ ಬಂದಿದೆ ಎಂದು ಮರೆಮಾಚುವುದು ಖಂಡಿತ ಅಪರಾಧ ಎಂದು ಹೇಳಿದ್ದಾರೆ.
ಕೊರೋನಾ ಹಬ್ಬಿಸಿ ಅಪರಾಧವೆಸಗಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಹ ಎಚ್ಚರಿಕೆ ನೀಡಿದರು. ನಿನ್ನೆ ಸುದ್ದಿವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೋನಾ ಸೋಂಕು ಹಬ್ಬಿಸುವಲ್ಲಿ ತಬ್ಲಿಘಿ ಜಮಾತ್ ಪಾತ್ರ ಅತ್ಯಂತ ಖಂಡನೀಯ. ಸೋಂಕು ದೇಹಕ್ಕೆ ತಾಗಿಸಿಕೊಳ್ಳುವುದು ಅಪರಾಧವಲ್ಲ. ಆದರೆ ಈ ರೋಗವನ್ನು ಬೇರೊಬ್ಬರಿಗೆ ಹರಡುವುದು ಖಂಡಿತವಾಗಿಯೂ ತಪ್ಪು. ತಬ್ಲಿಘಿ ಜಮಾತ್ ಗೆ ಸಂಬಂಧಪಟ್ಟವರು ಈ ಬಹುದೊಡ್ಡ ಅಪರಾಧವನ್ನು ಮಾಡಿದ್ದಾರೆ ಎಂದರು.
ಉತ್ತರ ಪ್ರದೇಶ ಮತ್ತು ಬೇರೆ ಕಡೆಗಳಲ್ಲಿ ಕೊರೋನಾ ವೈರಸ್ ಹಬ್ಬಲು ತಬ್ಲಿಘಿ ಜಮಾತ್ ಕಾರಣವೆಂದು ತಿಳಿದುಬಂದಿದೆ. ತಬ್ಲಿಘಿ ಸದಸ್ಯರು ಆರಂಭದಲ್ಲಿ ಮರೆಮಾಚದೆ ವೈರಸ್ ಹಬ್ಬುವುದನ್ನು ತಡೆದಿದ್ದರೆ ಖಂಡಿತವಾಗಿಯೂ ಇಷ್ಟು ವ್ಯಾಪಕವಾಗಿ ಹರಡುತ್ತಿರಲಿಲ್ಲ ಎಂದರು.ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ಕಳೆದ ಮಾರ್ಚ್ ಆರಂಭದಲ್ಲಿ ತಬ್ಲಿಘಿ ಜಮಾತ್ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಇದಕ್ಕೆ ಪ್ರಪಂಚದ ಹಲವು ದೇಶಗಳಿಂದ ಬಂದಿದ್ದ ತಬ್ಲಿಘಿ ಸದಸ್ಯರಿಂದ ಕೊರೋನಾ ವ್ಯಾಪಕವಾಗಿ ಹಬ್ಬಿತ್ತು.