ಕನ್ನಡ ಅನುಷ್ಠಾನವನ್ನು ಸರ್ಕಾರಿ ಇಲಾಖೆಗಳು ಗಾಳಿಗೆ ತೂರಿವೆ ..!

ಬೆಂಗಳೂರು:

   ಆಡಳಿತದ ಎಲ್ಲಾ ಹಂತದಲ್ಲಿ ಪರಿಪೂರ್ಣವಾಗಿ ಕನ್ನಡ  ಬಳಕೆಯಾಗಬೇಕು ಎನ್ನುವುದು ಸರ್ಕಾರದ ಆಶಯವಾಗಿದ್ದರೂ  ಸರ್ಕಾರಿ ಇಲಾಖೆಗಳೇ ಕನ್ನಡ   ಅನುಷ್ಠಾನವನ್ನು ಗಾಳಿಗೆ ತೂರಿರುವುದು ಸರಿಯಾದ ಕ್ರಮವಲ್ಲ  ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರು ಬೇಸರ ವ್ಯಕ್ತಪಡಿಸಿದ್ದಾರೆ. 

    ಕಳೆದ 2 ತಿಂಗಳಿಂದ ಆಡಳಿತದ ಕೇಂದ್ರ ಸ್ಥಾನವಾದ ವಿಧಾನಸೌಧ, ವಿಕಾಸಸೌಧ ಮತ್ತು  ಬಹುಮಹಡಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಹಿರಿಯ ಮತ್ತು ಕಿರಿಯ   ಅಧಿಕಾರಿಗಳು ಆಂಗ್ಲ ಭಾಷೆಯಲ್ಲಿ ಸುತ್ತೋಲೆ, ಆದೇಶಗಳನ್ನು ಹೊರಡಿಸಿದ್ದಾರೆ. ಅಲ್ಲದೆ  ಬಿಬಿಎಂಪಿ, ಪೊಲೀಸ್ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ,  ಪಶು ಸಂಗೋಪನೆ  ಮತ್ತು ಮೀನುಗಾರಿಕೆ ಇಲಾಖೆ, ಸಾರಿಗೆ ಇಲಾಖೆ, ಪಂಚಾಯತ್ ರಾಜ್ ಮತ್ತು  ಗ್ರಾಮೀಣಾಭಿವೃದ್ಧಿ ಇಲಾಖೆ, ವಿಶೇಷವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ  ಸೇರಿದಂತೆ ಹಲವು ಇಲಾಖೆಗಳು ಸರ್ಕಾರದ ಕನ್ನಡ ಅನುಷ್ಠಾನದ ಆದೇಶವನ್ನು ಗಾಳಿಗೆ  ತೂರಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ಮತ್ತು ಇಲಾಖೆಗಳಿಗೆ ನಿರ್ದೇಶನ ನೀಡುವಂತೆ  ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

   ಜನಸಾಮಾನ್ಯರಿಗೆ ಅರ್ಥವಾಗುವಂತೆ ಕನ್ನಡದಲ್ಲಿ ವ್ಯವಹರಿಸುವ ಮತ್ತು ಪತ್ರವ್ಯವಹಾರ  ನಡೆಸುವುದು ಇಲಾಖಾ ಮುಖ್ಯಸ್ಥರ ಜವಾಬ್ದಾರಿಯಾಗಿದೆ. ಆದಾಗ್ಯೂ ತಮ್ಮ ಜವಾಬ್ದಾರಿ ಮರೆತು  ಕನ್ನಡ ಭಾಷಾ ಅನುಷ್ಠಾನ ನೀತಿಯನ್ನು ಅನುಸರಿಸದ ಅಧಿಕಾರಿಗಳ ವಿರುದ್ಧ ಕ್ರಮ  ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಬರೆದಿರುವ ಪತ್ರದಲ್ಲಿ   ಸೂಚಿಸಿದ್ದಾರೆ.ಎಂತಹ ಕಠಿಣ ಪರಿಸ್ಥಿತಿಯಲ್ಲೂ  ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕು.

    ಆಡಳಿತದ ಎಲ್ಲ ಹಂತದಲ್ಲೂ ಶೇ.  100ಕ್ಕೆ 100ರಷ್ಟು ಕನ್ನಡ ಅನುಷ್ಠಾನವಾಗಬೇಕು ಎಂದಿರುವ ಕನ್ನಡ ಅಭಿವೃದ್ಧಿ  ಪ್ರಾಧಿಕಾರದ ಅಧ್ಯಕ್ಷರು, ಆಡಳಿತದ ದೈನಂದಿನ ವ್ಯವಹಾರಗಳಲ್ಲಿ ನೆರೆರಾಜ್ಯಗಳಾದ ಕೇರಳ,  ತಮಿಳುನಾಡು, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ  ಆಯಾ ರಾಜ್ಯಭಾಷೆಯಲ್ಲಿಯೇ ಆಡಳಿತ  ನಡೆಸಲು ಸಾಧ್ಯವಾಗಿದ್ದು, ಕರ್ನಾಟಕದಲ್ಲಿ ಇದು ನಿಯಮ ಜಾರಿ ಮಾಡಲು  ಸಾಧ್ಯವಾಗುವುದಿಲ್ಲವೇ ಎಂದು ಪ್ರಶ್ನಿಸಿರುವ ನಾಗಾಭರಣ ಅವರು, ಸರ್ಕಾರದ ಉನ್ನತ ಮಟ್ಟದ  ಅಧಿಕಾರಿಗಳು ಮನಸ್ಸು ಮಾಡಿದರೆ ಕನ್ನಡ ಅನುಷ್ಠಾನ ಕೆಲಸ ಕಷ್ಟವೇನಲ್ಲ. ಇದರಲ್ಲಿ  ಬಹುಮುಖ್ಯವಾಗಿ ಅಧಿಕಾರಿಗಳ ಇಚ್ಚಾಶಕ್ತಿ ಮುಖ್ಯವಾಗಿದ್ದು, ಅಧಿಕಾರಿಗಳು ಭಾಷಾಭಿಮಾನ  ಬೆಳೆಸಿಕೊಂಡು ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link