ತುಮಕೂರು :
ಮೇ 17 ರ ವರೆಗೆ ಕೊರೊನಾ ಲಾಕ್ ಡೌನ್ ಇದೆಯಾದರೂ, ತುಮಕೂರು ನಗರದಲ್ಲಿ ಜಿಲ್ಲಾಡಳಿತವು ಕೆಲವೊಂದು ವಿನಾಯಿತಿ ನೀಡಿರುವ ಹಿನ್ನೆಲೆಯಲ್ಲಿ ಶುಕ್ರವಾರ (ಮೇ 8) ನಗರಾದ್ಯಂತ ಬಹುತೇಕ ಎಲ್ಲ ರೀತಿಯ ಅಂಗಡಿಗಳು ತೆರೆಯಲ್ಪಟ್ಟಿದ್ದು, ಸಾಮಾನ್ಯ ಜನಜೀವನ ಬಹುತೇಕ ಸಹಜತೆಯತ್ತ ಸಾಗುವಂತೆ ಕಾಣಿಸಿತು.
ತುಮಕೂರು ನಗರದ ಪ್ರಮುಖ ವಾಣಿಜ್ಯ ಪ್ರದೇಶಗಳಾದ ಬಿ.ಎಚ್.ರಸ್ತೆ (ರಾಷ್ಟ್ರೀಯ ಹೆದ್ದಾರಿ-206), ಎಂ.ಜಿ. ರಸ್ತೆ, ಜನರಲ್ ಕಾರಿಯಪ್ಪ ರಸ್ತೆ, ಜೆ.ಸಿ.ರಸ್ತೆ, ಅಶೋಕ ರಸ್ತೆ, ಗುಂಚಿವೃತ್ತ, ವಿವೇಕಾನಂದ ರಸ್ತೆ, ಹೊರಪೇಟೆ, ಮಂಡಿಪೇಟೆ, ಹೊಸ ಮಂಡಿಪೇಟೆ, ಸೋಮೇಶ್ವರ ಪುರಂ ಮುಖ್ಯರಸ್ತೆ, ಎಸ್.ಐ.ಟಿ. ಮುಖ್ಯರಸ್ತೆ ಮೊದಲಾದೆಡೆ ಕಳೆದ 40 ಕ್ಕೂ ಹೆಚ್ಚು ದಿನಗಳ ಸುದೀರ್ಘ ಲಾಕ್‍ಡೌನ್ ಬಳಿಕ ಶುಕ್ರವಾರ ಮೊದಲ ಬಾರಿಗೆ ಬಹುತೇಕ ಎಲ್ಲ ವಿಧದ ಮಳಿಗೆಗಳು ತೆರೆಯಲ್ಪಟ್ಟವು.
ನಗರದಾದ್ಯಂತ ಜನ ಸಂಚಾರ ಮತ್ತು ಬೈಕ್, ಕಾರು ಮೊದಲಾದ ಖಾಸಗಿ ವಾಹನಗಳು ಮತ್ತು ಸರಕು ಸಾಗಣೆ ವಾಹನಗಳ ಸಂಚಾರ ಸ್ವಲ್ಪ ಅಧಿಕವಾಗಿಯೇ ಕಾಣಿಸಿತು.
ಸಿಗ್ನಲ್ ಲೈಟ್ ಚಾಲನೆ :
ಲಾಕ್ ಡೌನ್ ಘೋಷಣೆಯಾದ ಬಳಿಕ ಜನ-ವಾಹನ ಸಂಚಾರ ನಿರ್ಬಂಧಗೊಂಡಿದ್ದ ಕಾರಣ ನಗರಾದ್ಯಂತ ಸಿಗ್ನಲ್ ಲೈಟ್‍ಗಳನ್ನು ಪೊಲೀಸರು ಸ್ಥಗಿತಗೊಳಿಸಿದ್ದರು. ಆದರೆ ಶುಕ್ರವಾರ ಲಾಕ್ ಡೌನ್ ನಿಯಮಕ್ಕೆ ವಿನಾಯಿತಿ ಪ್ರಕಟಿಸಿದ ಬೆನ್ನಲ್ಲೇ, ನಗರಾದ್ಯಂತ ಎಲ್ಲ ಸಿಗ್ನಲ್ ಲೈಟ್‍ಗಳನ್ನು ಚಾಲನೆ ಮಾಡಲಾಗಿದ್ದು, ಎಲ್ಲ ಸಿಗ್ನಲ್‍ಗಳಲ್ಲೂ ದೊಡ್ಡ ಪ್ರಮಾಣದಲ್ಲೇ ವಾಹನಗಳು ನಿಲುಗಡೆಗೊಳ್ಳುತ್ತಿದ್ದುದು ಕಂಡುಬಂದಿತು.
ನಗರದ ಹೃದಯ ಭಾಗವಾದ ಮಹಾತ್ಮಗಾಂಧಿ ರಸ್ತೆಯ ಬಹುತೇಕ ಮಳಿಗೆಗಳು ತೆರೆಯಲ್ಪಟ್ಟಿದ್ದವು. ಇದೇ ರೀತಿ ಗುಂಚಿ ವೃತ್ತ (ರಾಮಪ್ಪ ವೃತ್ತ)ದಲ್ಲೂ ಎಲ್ಲ ಗಿರವಿ -ಜ್ಯೂಯಲರಿ ಮಳಿಗೆಗಳು ತೆರೆದಿದ್ದವು. ಜೆ.ಸಿ.ರಸ್ತೆಯಲ್ಲಿ ಉದ್ದಕ್ಕೂ ಎಲ್ಲ ಮಳಿಗೆಗಳು ತೆರೆದಿದ್ದವು. ಮಂಡಿಪೇಟೆ ಮತ್ತು ಹೊಸ ಮಂಡಿಪೇಟೆ ರಸ್ತೆಗಳು ಜನ-ವಾಹನ ಸಂಚಾರದಿಂದ ಗಿಜಿ-ಗಿಜಿ ಎನ್ನುತ್ತಿದ್ದವು. ಎಲ್ಲೆಡೆ ಹೂ-ಹಣ್ಣು ಮೊದಲಾದ ಬೀದಿ ಬದಿ ವ್ಯಾಪಾರವೂ ಚಾಲನೆಗೊಂಡಿದ್ದವು.
ಈವರೆಗೆ ಲಾಕ್ ಡೌನ್ ಅವಧಿಯಲ್ಲಿ ಜೀವನಾವಶ್ಯಕ ವಸ್ತುಗಳ ಮಳಿಗೆಗಳಾದ ದಿನಸಿ ಅಂಗಡಿ, ಅಡುಗೆ ಎಣ್ಣೆ ಮಳಿಗೆ, ಹೂವು-ಹಣ್ಣು-ತರಕಾರಿ ಮಳಿಗೆಗಳು, ಮೀನು-ಮಾಂಸದ ಮಳಿಗೆಗಳು, ಔಷಧ ಮಳಿಗೆ, ಚಿಕಿತ್ಸಾಲಯ, ಆಸ್ಪತ್ರೆಗಳು, ರೈತೋಪಯೋಗಿ ಕೃಷಿ ಸಂಬಂಧಿತ ಮಳಿಗೆಗಳು ಮಾತ್ರ ತೆರೆದಿದ್ದವು. ನಂತರದಲ್ಲಿ ಕೋಳಿ ಅಂಗಡಿಗಳು, ಬೇಕರಿಗಳು ಹಾಗೂ ಇತರೆ ಅಂಗಡಿಗಳು ತೆರೆಯಲ್ಪಟ್ಟವು. ಆದರೆ ಸಾರ್ವಜನಿಕರಿಂದ ತೀವ್ರ ಒತ್ತಡ ಮತ್ತು ಬೇಡಿಕೆ ವ್ಯಕ್ತಗೊಂಡ ಹಿನ್ನೆಲೆಯಲ್ಲಿ ಈಗ ಎಲ್ಲ ರೀತಿಯ ಇನ್ನಿತರ ಮಳಿಗೆಗಳೂ ತೆರೆಯಲ್ಪಟ್ಟಿವೆ. ಜ್ಯೂಯಲರಿ ಮಳಿಗೆಗಳು, ಬಟ್ಟೆ ಅಂಗಡಿಗಳು, ಟೈಲರಿಂಗ್ ಮಳಿಗೆಗಳು, ಚಪ್ಪಲಿ ಅಂಗಡಿಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳ ಅಂಗಡಿಗಳು, ಮೊಬೈಲ್ ಮಳಿಗೆಗಳು, ಕಬ್ಬಿಣ ಮತ್ತು ಪೈಯಿಂಟಿಂಗ್ ಪರಿಕರಗಳ ಅಂಗಡಿಗಳು, ಗಿರವಿ ಅಂಗಡಿಗಳು, ಹೋಟೆಲ್‍ಗಳು, ವಾಹನ ಮಾರಾಟ/ರಿಪೇರಿ ಮಾಡುವ ಶೋ ರೂಂಗಳು, ಮೆಕ್ಯಾನಿಕ್ ಅಂಗಡಿಗಳು ಮೊದಲಾದ ವಾಣಿಜ್ಯ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾದವು. ಇವೆಲ್ಲದರ ಜೊತೆಗೆ ನಗರಾದ್ಯಂತ ಮದ್ಯದ ಅಂಗಡಿಗಳೂ ತೆರೆಯಲ್ಪಟ್ಟಿವು.
ಸ್ವಚ್ಛಗೊಳಿಸುವತ್ತ ಗಮನ:
ಸುದೀರ್ಘ 40 ಕ್ಕೂ ಹೆಚ್ಚು ದಿನಗಳ ಲಾಕ್ ಡೌನ್ ನಿಂದ ಇಂದಷ್ಟೇ ಬಾಗಿಲು ತೆರೆದ ಬಹುತೇಕ ಮಳಿಗೆಗಳವರು ತಮ್ಮ ತಮ್ಮ ಮಳಿಗೆಗಳನ್ನು ಸ್ವಚ್ಛಗೊಳಿಸುವತ್ತ ಬಹುಹೊತ್ತು ಶ್ರಮಿಸುತ್ತಿದ್ದುದು ಅನೇಕ ಕಡೆ ಕಂಡುಬಂದಿತು. ಕೆಲವು ಅಂಗಡಿಗಳು ತೆರೆದವಾದರೂ ಗ್ರಾಹಕರ ಸಂಖ್ಯೆ ವಿರಳವಾಗಿಯೇ ಇತ್ತು. ಮಂಡಿಪೇಟೆ ಸೇರಿ ಕೆಲವು ಪ್ರದೇಶಗಳಲ್ಲಿ ಜನಸಂದಣಿ ಹೆಚ್ಚಿತ್ತು.
ಎಲ್ಲೆಲ್ಲೂ ಗ್ರಾಹಕರ ಕೊರತೆ :
ಶುಕ್ರವಾರ ನಗರಾದ್ಯಂತ ಎಲ್ಲ ರೀತಿಯ ಮಳಿಗೆಗಳು ಪ್ರಾರಂಭಗೊಂಡಿತಾದರೂ, ಗ್ರಾಹಕರ ಕೊರತೆ ಎಲ್ಲ ರಸ್ತೆಗಳ ಮಳಿಗೆಗಳಲ್ಲೂ ಕಂಡುಬಂದಿತು. ಇದಕ್ಕೆ ಮೊದಲನೇ ದಿನವೆಂಬ ಕಾರಣವೂ ಇರಬಹುದೆಂದು ಹೇಳಲಾಗುತ್ತಿದೆ. ಅಲ್ಲದೆ ಇನ್ನೂ ಸಾರಿಗೆ ಸಂಚಾರ (ಬಸ್) ಇಲ್ಲದಿರುವುದರಿಂದ ಹೊರಗಿನವರು ಬರಲಾಗದಿರುವುದೂ ಇನ್ನೊಂದು ಕಾರಣವೆಂದು ಊಹಿಸಲಾಗುತ್ತಿದೆ.
ಗಿಜಿ-ಗಿಜಿ ಎನ್ನುತ್ತಿದ್ದ ಮಂಡಿಪೇಟೆ :
ಆದರೆ ಇದಕ್ಕೆ ತದ್ವಿರುದ್ಧವೆಂಬಂತೆ ನಗರದ ಮಂಡಿಪೇಟೆ ಮತ್ತು ಹೊಸ ಮಂಡಿಪೇಟೆ ಹಾಗೂ ಜೆ.ಸಿ. ರಸ್ತೆಯಲ್ಲಿ ದಿನಸಿ ಮಳಿಗೆಗಳ ಜೊತೆಗೆ ಇನ್ನಿತರೆ ಮಳಿಗೆಗಳೂ ಶುಕ್ರವಾರ ಆರಂಭವಾದ ಕಾರಣ, ಆ ಇಡೀ ರಸ್ತೆಗಳು ಜನ-ವಾಹನಗಳ ಸಂಚಾರದಿಂದ ಮಧ್ಯಾಹ್ನದ ಸುಡು ಬಿಸಿಲಿನಲ್ಲೂ ಗಿಜಿ-ಗಿಜಿ ಎನ್ನುವಂತಿತ್ತು. ಸರಕು ಸಾಗಣೆ ವಾಹನಗಳಿಂದ ಸರಕುಗಳನ್ನು ಇಳಿಸುವ ಹಾಗೂ ತುಂಬಿಸುವ ಕೆಲಸ ಬಿರುಸಾಗಿ ನಡೆದಿತ್ತು. ಗ್ರಾಹಕರು ದ್ವಿಚಕ್ರವಾಹನಗಳಲ್ಲಿ ದೊಡ್ಡ ಸಂಖ್ಯೆಯಲ್ಲೇ ಬಂದಿದ್ದರು.