ತುಮಕೂರು:
ತುಮಕೂರು ನಗರದಲ್ಲಿ ಸೀಲ್‍ಡೌನ್ ಆಗಿರುವ ಪಿ.ಹೆಚ್.ಕಾಲೋನಿ ಮತ್ತು ಹೌಸಿಂಗ್ ಬೋರ್ಡ್ ಗಳಲ್ಲಿನ ನಾಗರೀಕರಿಗೆ ಅಗತ್ಯ ಸೌಲಭ್ಯಗಳನ್ನು ನೀಡಬೇಕು ಹಾಗೂ ಸೀಲ್‍ಡೌನ್ ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಮಾಜಿ ಶಾಸಕ ಡಾ|| ರಫೀಕ್ ಅಹ್ಮದ್ ಅವರು ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ಜಿಲ್ಲಾಡಳಿತ, ಪೋಲಿಸ್ ಇಲಾಖೆ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ, ಸ್ವಯಂ ಸೇವಕರು, ಕರೋನಾ ವಾರಿಯರ್ಸ್ ಹಾಗೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸೇವೆಸಲ್ಲಿಸಿರುವವರು ಎಲ್ಲರೂ ಕರೋನಾ ನಿಯಂತ್ರಿಸುವಲ್ಲಿ ಸಫಲರಾಗಿರುವುದು ಶ್ಲಾಘನೀಯ. ಇವರಿಗೆಲ್ಲಾ ಅಭಿನಂದನೆ ಸಲ್ಲಿಸಿದರು.
ತುಮಕೂರು ನಗರದ ಪಿ.ಹೆಚ್.ಕಾಲೋನಿ ಪ್ರದೇಶದ ಒಂದು ಭಾಗವನ್ನು ಸೀಲ್‍ಡೌನ್ ಮಾಡಿ ಇಂದಿಗೆ 14 ದಿನಗಳು ಕಳೆದಿವೆ. ಈ 14 ದಿನಗಳ ಪ್ರಾರಂಭದಲ್ಲಿ ಗುಜರಾತ್ ಮೂಲದ ಒಬ್ಬ ವ್ಯಕ್ತಿಗೆ ಕರೋನಾ ಸೋಂಕು ಪತ್ತೆಯಾಗಿರುವುದು ಬಿಟ್ಟರೆ ಈ ಪ್ರದೇಶದಲ್ಲಿ ವಾಸವಿರುವ ಇನ್ಯಾವುದೇ ವ್ಯಕ್ತಿಗೆ ಸೋಂಕು ಕಂಡುಬಂದಿಲ್ಲ. ಈ ಪ್ರದೇಶದಲ್ಲಿ ಹಿಂದುಳಿದವರು, ಅತಿ ಕಡುಬಡವರು ವಾಸಿಸುತ್ತಿದ್ದಾರೆ. ಇದರಲ್ಲಿ ಬಹುತೇಕ ದಿನಗೂಲಿ ಕೆಲಸ ಮಾಡುವ ಕಾರ್ಮಿಕರಿದ್ದಾರೆ. ಇವರ ಆರ್ಥಿಕ ಪರಿಸ್ಥಿತಿಯೂ ಕೂಡ ಶೋಚನೀಯವಾಗಿದೆ.
ಕಳೆದ 14 ದಿನಗಳಿಂದ ಈ ಭಾಗದಲ್ಲಿ ಸರ್ಕಾರದ ವತಿಯಿಂದ ಯಾವುದೇ ರೀತಿಯ ಮೂಲಭೂತ ಸೌಲಭ್ಯಗಳನ್ನು (ದಿನಾಂಕ:- 30.04.2020 ರವರೆಗೆ ಹಾಲು ಹಾಗೂ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ, ಗೋಧಿ ಹೊರತಾಗಿ) ಒದಗಿಸಿರುವುದಿಲ್ಲ. ಮೊದಲನೇ ಹಂತದ ಜನತಾಕಫ್ರ್ಯೂ ಆರಂಭವಾದಾಗಿನಿಂದ ಸುಮಾರು 45 ದಿನಗಳಿಂದ ಯಾವುದೇ ರೀತಿಯ ಕೆಲಸಗಳಿಲ್ಲದೇ ಇವರ ಆರ್ಥಿಕ ಪರಿಸ್ಥಿತಿ ಇನ್ನಷ್ಟು ದುಸ್ಥಿತಿಗೆ ತಲುಪಿದೆ. ಪ್ರತಿನಿತ್ಯ ಅಗತ್ಯವಿರುವ ಹಾಲು, ತರಕಾರಿ, ಆಹಾರ ಸಾಮಗ್ರಿ, ಔಷಧಿಗಳನ್ನು ಖರೀದಿಸಲು ಇವರಿಗೆ ಸಾಧ್ಯವಾಗುತ್ತಿಲ್ಲ ಎಂದರು.
ಕೆಲ ಸಂಘ ಸಂಸ್ಥೆಗಳು, ಸ್ವಯಂ ಸೇವಕರು ಹಾಗೂ ಜನಪ್ರತಿನಿಧಿಗಳು ಸ್ವಲ್ಪಮಟ್ಟಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿದ್ದರೂ ಕೂಡ ಸಿಲ್‍ಡೌನ್ ಅವಧಿ ಮುಗಿಯುವವರೆಗೆ ಇದು ಸಾಕಾಗುವುದಿಲ್ಲ. ಕಳೆದ 14 ದಿನಗಳಿಂದ ಈ ಭಾಗದಲ್ಲಿ ಯಾವುದೇ ಹೊಸ ಪ್ರಕರಣ ದಾಖಲಾಗದೇ ಇರುವುದರಿಂದ ಹಾಗೂ ಇಲ್ಲಿ ವಾಸಿಸುತ್ತಿರುವ ನಾಗರೀಕರ ಪರಿಸ್ಥಿತಿ ಹದಗೆಟ್ಟಿರುವುದರಿಂದ ಈ ಭಾಗದಲ್ಲಿನ ಮನೆಗಳಿಗೆ ಪ್ರತಿನಿತ್ಯ ಅಗತ್ಯವಿರುವ ಸಾಮಗ್ರಿಗಳನ್ನು ಸರ್ಕಾರದ ವತಿಯಿಂದ ನೀಡಬೇಕೆಂದು ಅಥವಾ ತಾವು ಸಿಲ್‍ಡೌನ್ ಸೀಮಿತಗೊಳಿಸಿರುವ ಅವಧಿಯನ್ನು ಕಡಿತಗೊಳಿಸಿ ಈ ಭಾಗದಲ್ಲಿರುವ ಜನರಿಗೆ ತಮ್ಮ ತಮ್ಮ ಕೆಲಸಗಳಿಗೆ ಹೋಗಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
