ತುಮಕೂರು : ಕರೋನಾ ಭೀತಿಯ ನಡುವೆ ಗ್ರಾಹಕರಿಗೆ ಕರೆಂಟ್ ಶಾಕ್!!

ತುಮಕೂರು :

       ಕರೋನಾದಿಂದ ಈಗಾಗಲೆ ಆತಂಕಕ್ಕೊಳಗಾಗಿರುವ ಜನತೆ ತಮ್ಮ ಮನೆಗಳಿಗೆ ರವಾನೆಯಾಗುತ್ತಿರುವ ವಿದ್ಯುತ್ ಬಿಲ್ ನೋಡಿ ಹೌಹಾರುತ್ತಿದ್ದಾರೆ. ದಿಢೀರ್ ಏರಿಕೆಯಾಗಿರುವ ದರ ನೋಡಿ ಗಾಬರಿಯಾಗುತ್ತಿದ್ದಾರೆ. ಲಾಕ್ ಡೌನ್‍ಗೊಳಗಾಗಿ ಹಲವು ಸಂಕಷ್ಟಕ್ಕೊಳಗಾಗಿದ್ದ ಜನರಿಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನೀಡುತ್ತಿರುವ ದುಬಾರಿ ಬಿಲ್ ಗ್ರಾಹಕರನ್ನು ಮತ್ತಷ್ಟು ಸಂಕಟಕ್ಕೆ ಗುರಿ ಮಾಡಿದ್ದು ಕರೋನ ಸಂಕಷ್ಟದಲ್ಲಿರುವ ಜನರಿಗೆ ಗಾಯದ ಮೇಲೆ ಮತ್ತೊಂದು ಬರೆ ಎಳೆದಂತಾಗಿದೆ.

      ನೂರಾರು ರೂ.ಗಳ ಒಳಗೆ ಇರುತ್ತಿದ್ದ ಬಿಲ್ ಮೊತ್ತ ಹಲವೆಡೆ ಸಾವಿರ ರೂ.ಗಳನ್ನು ದಾಟಿದೆ. ಮೂರರಿಂದ ನಾಲ್ಕು ಪಟ್ಟು ಬಿಲ್ ದರ ಹೆಚ್ಚಳಗೊಂಡಿದ್ದು ಯಾರದ್ದೋ ಬಿಲ್ ನಮಗೆ ನೀಡಿದ್ದಾರೆಯೇ ಎಂದು ಅನುಮಾನಗೊಂಡು ಪ್ರಶ್ನಿಸುವಂತಾಗಿದೆ. ಗೃಹ ಬಳಕೆ ವಿದ್ಯುತ್‍ನ್ನು ಕಮರ್ಷಿಯಲ್ ಗೆ ಪರಿವರ್ತನೆ ಮಾಡಿದ್ದಾರೆಯೇ ಎಂದು ಸಹ ಕೆಲವರು ಕೇಳುತ್ತಿದ್ದಾರೆ. ಇಲಾಖೆಯಿಂದ ಈ ಬಗ್ಗೆ ಸಮರ್ಪಕ ಮಾಹಿತಿಯೂ ಸಿಗದೆ ಜನ ಗೊಂದಲದಲ್ಲಿ ಮುಳುಗಿ ಹೋಗಿದ್ದು, ಬೆಸ್ಕಾಂ ಅಧಿಕಾರಿಗಳ ವಿರುದ್ದ ಗರಂ ಆಗಿದ್ದಾರೆ.

      ಲಾಕ್ ಡೌನ್ ಸಂದರ್ಭದಲ್ಲಿ ಜನರ ಸಂಕಟ ನಿಭಾಯಿಸಲು ಸರ್ಕಾರ-ವಿವಿಧ ಇಲಾಖೆಗಳು ಹಲವು ರಿಯಾಯಿತಿಗಳು, ಪ್ಯಾಕೇಜ್ ಗಳನ್ನು ಘೋಷಿಸುತ್ತಿವೆ. ಆರ್ಥಿಕ ಸಂಕಷ್ಟ ಅರಿತು ಬ್ಯಾಂಕುಗಳಲ್ಲಿನ ಮಾಸಿಕ ಸಾಲದ ಕಂತು ಅವಧಿಯನ್ನು 3 ತಿಂಗಳ ಕಾಲ ಮುಂದೂಡಲಾಗಿದೆ. 2 ತಿಂಗಳ ಪಡಿತರವನ್ನು ಮುಂಗಡವಾಗಿ ನೀಡಿ ಬಡವರಿಗೆ ಧೈರ್ಯ ತುಂಬಲಾಗಿದೆ. ಹೊರಗಡೆ ಹೋಗಲಾಗದೆ, ದುಡಿಯಲಾಗದೆ ಕೈ ಬರಿದಾಗುತ್ತಿರುವ ಈ ಸಮಯದಲ್ಲಿ ಜನತೆಯ ಸಹಾಯಕ್ಕೆ ಬರಬೇಕಾದ ಇಲಾಖೆ ಯದ್ವಾ ತದ್ವಾ ಬಿಲ್ ನೀಡುತ್ತಿರುವುದು ಹಗಲು ದರೋಡೆಯಲ್ಲವೇ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.

      ಲಾಕ್ ಡೌನ್ ಪರಿಣಾಮ ಮನೆ ಮನೆಗೆ ಹೋಗಿ ರೀಡರ್ ಓದಲಾಗದು. ಹೀಗಾಗಿ ಮಾರ್ಚ್ ಹಾಗು ಏಪ್ರಿಲ್ ತಿಂಗಳ ಬಿಲ್ ಒಟ್ಟಿಗೆ ನೀಡಲಾಗುತ್ತಿದ್ದು, ಪ್ರತಿ ಮನೆಯ ಸರಾಸರಿ ವಿದ್ಯುತ್ ಬಳಕೆ ಆಧರಿಸಿ ಮೊತ್ತ ನಮೂದಿಸಲಾಗಿದೆ. ತಪ್ಪು ಲೆಕ್ಕಾಚಾರಗಳಿಲ್ಲ ಎಂದು ವಿದ್ಯುತ್ ಇಲಾಖೆ ಸಮಜಾಯಿಷಿ ಕೊಟ್ಟರೂ ಅದನ್ನು ನಂಬುವ ಸ್ಥಿತಿ ಇಲ್ಲ. ಬಹಳಷ್ಟು ಜನ ಯುಗಾದಿ ಸಂದರ್ಭದಲ್ಲಿ ತಮ್ಮ ಊರುಗಳಿಗೆ ತೆರಳಿದ್ದರು. ಮೊದಲ ಹಾಗೂ ಎರಡನೇ ಹಂತದ ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲಿ ಇಲ್ಲದವರಿಗೂ ಯದ್ವಾ ತದ್ವಾ ಬಿಲ್ ಬರೆ ಎ¼ಯಲಾಗಿದೆ.

      ವಾಸ್ತವವಾಗಿ ಸ್ಲ್ಯಾಬ್ ಆಧಾರದ ಮೇಲೆ ಬೆಸ್ಕಾಂ ವಿದ್ಯುತ್ ಬಳಕೆಯ ಮೊತ್ತ ನಿರ್ಧರಿಸುತ್ತದೆ. ಸಾಮಾನ್ಯ ಗ್ರಾಹಕರು ಬಳಕೆ ಮಾಡುವ ಯೂನಿಟ್‍ಗಳ ಆಧಾರದ ಮೇಲೆ ನಾನಾ ಸ್ಲ್ಯಾಬ್ ಗಳನ್ನು ನಿಗದಿ ಮಾಡಲಾಗಿದೆ. ಗ್ರಾಹಕರು ಬಳಕೆ ಮಾಡುವ ಮೊದಲ 30 ಯೂನಿಟ್ ಗೆ ಪ್ರತಿ ಯೂನಿಟ್ ಗೆ 3.75 ರೂ. ನಿಗದಿ ಮಾಡಲಾಗಿದೆ. ಮುಂದೆ 70 ಯೂನಿಟ್ ಗೆ 5.20 ರು. 100 ರಿಂದ 200 ಯೂನಿಟ್ ಗೆ 6.75 ರೂ. 200 ಯೂನಿಟ್ ನಂತರ ಪ್ರತಿ ಯೂನಿಟ್ ಗೆ 7.80 ರೂ. ದರ ನಿಗದಿಪಡಿಸಿದೆ. ಇದರ ಜೊತೆಗೆ ಶೇಕಡಾವಾರು. ತೆರಿಗೆ ವಿಧಿಸಲಾಗುತ್ತದೆ.

Draft Uttar Pradesh Electricity Regulatory Commission (Terms and ...

      ಲಾಕ್ ಡೌನೆ ಸಂದರ್ಭದಲ್ಲಿ ಆಗಿರುವ ಯಡವಟ್ಟುಗಳಿಗೆ ಈ ಸ್ಲ್ಯಾಬ್ ಆಧಾರದ ಬಿಲ್ ನಿರ್ಧಾರವೂ ಒಂದು ಕಾರಣ. 2 ತಿಂಗಳಿಗೆ ಲೆಕ್ಕ ಹಾಕಿ ಬಿಲ್ ಸಿದ್ದಪಡಿಸಿರುವುದರಿಂದ ಹೆಚ್ಚುವರಿ ಯೂನಿಟ್‍ಗಳ ಲೆಕ್ಕದ ಹೊರೆಯನ್ನು ಗ್ರಾಹಕರ ಮೇಲೆಯೆ ಹಾಕಲಾಗಿದೆ. ಇಲಾಖೆ ಮಾಡಿರುವ ಯಡವಟ್ಟಿಗೆ ಗ್ರಾಹಕರು ಪರಿತಪಿಸುವಂತಾಗಿದೆ. ಇದರ ಜೊತೆಗೆ ತೆರಿಗೆಯ ಹೊರೆ ಬೇರೆ. ಹೋಗಲಿ ಸರಾಸರಿ ಲೆಕ್ಕ ಪರಿಶೀಲಿಸಿ ಮೊತ್ತ ನಿಗದಿಪಡಿಸಿದ್ದಾರೆಯೇ ಎಂದರೆ ಅದೂ ಇಲ್ಲ. ಮಾಸಿಕ 250 ರೂ. ವಿದ್ಯುತ್ ಬಿಲ್ ಪಾವತಿಸುತ್ತಿದ್ದ ಒಬ್ಬ ಸಾಮಾನ್ಯ ಮನುಷ್ಯನೊಬ್ಬನಿಗೆ ಈಗ 1100 ರೂ. ಬಿಲ್ ಬಂದಿದೆ ಎಂದರೆ ಇದೊಂದು ಅವೈಜ್ಞಾನಿಕ ಬಿಲ್ ಅಲ್ಲದೆ ಮತ್ತೇನು? ಅದ್ಯಾವ ಮಾನದಂಡ ಪಾಲಿಸಿ ಹೀಗೆ ಬಿಲ್ ನೀಡಲಾಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಇದು ಒಂದು ಸಣ್ಣ ಉದಾಹರಣೆ ಅಷ್ಟೆ. ಕೆಲವರಿಗೆ 10,000 ರೂ. ಗಳವರೆಗೂ ಬಿಲ್ ಬಂದಿದೆಯಂತೆ.

      ಲಾಕ್ ಡೌನ್ ಸಂದರ್ಭದಲ್ಲಿ ಮನೆ ಮಂದಿಯೆಲ್ಲ ಮನೆಯಲ್ಲೆ ಉಳಿದಿದ್ದಾರೆ. ಫ್ಯಾನ್ ಓಡಿಸಿದ್ದಾರೆ. ಮಿಕ್ಸಿಯಲ್ಲಿ ರುಬ್ಬಿಕೊಂಡು ಥರಾವರಿ ಅಡಿಗೆ ಮಾಡಿಕೊಂಡು ತಿಂದಿದ್ದಾರೆ. ಟಿ.ವಿ. ನೋಡಿದ್ದಾರೆ. ಕರೆಂಟ್ ಉರಿದಿದೆ. ಹೀಗಾಗಿ ವಿದ್ಯುತ್ ಬಿಲ್ ಹೆಚ್ಚಳವಾಗದೆ ಇನ್ನೇನು ಎಂದು ಇಲಾಖೆಯ ಕೆಲವರು ಸಬೂಬು ಹೇಳುತ್ತಾರೆ. ಇವರ ಮಾತನ್ನು ಒಪ್ಪಿಕೊಳ್ಳೋಣ. ಆದರೆ ಮನೆಯಲ್ಲೇ ವಾಸ ಇಲ್ಲದವರ ಮನೆಗೂ ಅದು ಹೇಗೆ ಸಾವಿರಾರು ರೂ.ಗಳ ಬಿಲ್ ಬರಲು ಸಾಧ್ಯವಾಯಿತು..?

      ಸರಾಸರಿ ಶುಲ್ಕ ವಿಧಿಸುವ ಹೆಸರಲ್ಲಿ ಮನಸೋ ಇಚ್ಚೆ ದರದ ಬರೆ ಹಾಕಲಾಗುತ್ತಿದೆ. ನಿಗದಿಗಿಂತ ಹೆಚ್ಚಿನ ದರ ವಸೂಲಿ ಮಾಡಲಾಗುತ್ತಿದೆ. ಒಂದು ರೀತಿಯ ಬಡ್ಡಿ, ಚಕ್ರ ಬಡ್ಡಿಯ ತಂತ್ರಗಾರಿಕೆ ಇದರಲ್ಲಿ ಅಡಗಿದೆ. ಲಾಕ್ ಡೌನ್ ಆರ್ಥಿಕ ಸಂಕಷ್ಟ ಪರಿಸ್ಥಿತಿಯಲ್ಲಿಯೂ ಹೀಗೆ ಬೇಕಾಬಿಟ್ಟಿ ದರದ ಬರೆ ಎಳೆಯುತ್ತಿರುವುದು ಏಕೆ ಎಂದು ಜನ ಸಾಮಾನ್ಯರು ತಮ್ಮ ಅಸಮಧಾನ ಹೊರ ಹಾಕುತ್ತಿದ್ದಾರೆ. ನಿಗದಿತ ಸಮಯದಲ್ಲಿ ಬಿಲ್ ಪಾವತಿಸದಿದ್ದರೆ ದಂಡ ವಿಧಿಸುತ್ತಾರೆ. ವಿದ್ಯುತ್ ಸಂಪರ್ಕವನ್ನೇ ಕಟ್ ಮಾಡುತ್ತಾರೆ. ಆಗೆಲ್ಲ ಜನರಿಂದ ಸಂಗ್ರಹ ಮಾಡಿಕೊಂಡು ಬರುತ್ತಿರುವ ಇಲಾಖೆ ಈಗ 2 ತಿಂಗಳ ಸಬೂಬು ಹೇಳಿಕೊಂಡು ಹಗಲು ದರೋಡೆ ಮಾಡಲು ಹೊರಟಿದೆ ಎಂಬ ಆಕ್ರೋಶದ ಮಾತುಗಳು ಗ್ರಾಹಕರಿಂದ ವ್ಯಕ್ತವಾಗುತ್ತಿವೆ. ಕೆಲವು ಉದ್ಯಮ ವ್ಯವಹಾರಗಳಿಗೆ ಅನುಮತಿ ಕೊಡುವಾಗ ಲಕ್ಷಾಂತರ ರೂ.ಗಳನ್ನು ಠೇವಣಿಯಾಗಿ ನೀಡಬೇಕು. ವಾಣಿಜ್ಯ ಘಟಕಗಳು ಸ್ಥಗಿತಗೊಂಡಾಗ ಸದರಿ ಠೇವಣಿ ಮೊತ್ತವನ್ನು ವಾಪಸ್ ನೀಡಬೇಕು. ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಉದ್ಯಮಗಳು ಬಾಗಿಲು ಮುಚ್ಚಿದಾಗ ಈ ಠೇವಣಿ ಹಣವನ್ನು ವಾಪಸ್ ನೀಡಲಾಗುತ್ತದೆ. ಆದರೆ ಎಷ್ಟು ಜನರಿಗೆ ವಾಪಸ್ ನೀಡಲಾಗಿದೆ? ಇಂತಹ ಹಣವೆಲ್ಲ ಇಲಾಖೆಯ ಬಳಿ ಇರುವಾಗ ಲಾಕ್ ಡೌನ್ ಸಂಕಷ್ಟದಲ್ಲಿ ಬರೆ ಎಳೆಯುವ ಅಗತ್ಯವಿತ್ತೆ? ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.  
       ಕೋವಿಡ್ ಹರಡುವಿಕೆ ಕಾರಣದಿಂದಾಗಿ ಏಪ್ರಿಲ್ ಮಾಹೆಯಲ್ಲಿ ಮಾಪಕದ ರೀಡಿಂಗ್ ತೆಗೆದುಕೊಳ್ಳಲಾಗಿರುವುದಿಲ್ಲ. ಸರ್ಕಾರದ ಆದೇಶದ ಮೇರೆಗೆ ಕಳೆದ ಹಿಂದಿನ 3 ತಿಂಗಳ ಬಿಲ್ಲನ್ನು ಆಧರಿಸಿ ಸರಾಸರಿ ಬಿಲ್ಲನ್ನು ಮಾಡಲಾಗಿರುತ್ತದೆ. ಮೇ ಮಾಹೆಯಲ್ಲಿ ಮಾಪಕವನ್ನು ಓದಿ ಏಪ್ರಿಲ್ ಮತ್ತು ಮೇ ತಿಂಗಳ ಬಿಲ್ಲನ್ನು ಒಟ್ಟಿಗೆ ಮಾಡಲಾಗಿರುತ್ತದೆ. ಹಿಂದಿನ ತಿಂಗಳ ಬಿಲ್ಲನ್ನು ಈಗಾಗಲೇ ಪಾವತಿಸಿದ್ದಲ್ಲಿ ಮೇ ತಿಂಗಳ ಬಿಲ್ ನಲ್ಲಿ ಅದನ್ನು ಕಡಿತಗೊಳಿಸಲಾಗುವುದು. ಗ್ರಾಹಕರಿಗೆ ಅಧಿಕ ಹೊರೆ ಬೀಳಬಾರದೆಂಬ ಕಾರಣಕ್ಕೆ ಎರಡು ತಿಂಗಳಿಗೂ ಸಮಾನವಾಗಿ ಯುನಿಟ್ ಬಳಕೆಯನ್ನು ಮತ್ತು ಸ್ಲಾಬ್ ಅನ್ನು ಹಂಚಲಾಗಿರುತ್ತದೆ. Àಮಾಸಿಕ 30 ಯೂನಿಟ್ ಗಳಂತೆ ಒಂದು ಸ್ಲ್ಯಾಬ್ ಇದೆ. ಈಗ 2 ತಿಂಗಳ ಸ್ಲ್ಯಾಬ್ ಪರಿಗಣಿಸಿದರೆ 60 ಯೂನಿಟ್ ಗಳಾಗುತ್ತವೆ. ಈ ಸ್ಲ್ಯಾಬ್‍ಗಳ ಆಧಾರದಲ್ಲಿಯೇ ಬಿಲ್ ಮೊತ್ತ ನಿಗದಿ ಪಡಿಸಲಾಗುತ್ತದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಬಿಲ್ ಈಗ ನೀಡಲಾಗುತ್ತಿದ್ದು, ಮೇ ತಿಂಗಳ ಬಿಲ್ ಮುಂದಿನ ತಿಂಗಳು ನೀಡಲಾಗುವುದು. ಬಿಲ್‍ನಲ್ಲಿ ಯಾವುದೇ ಅವೈಜ್ಞಾನಿಕತೆ ಇಲ್ಲ. 2 ತಿಂಗಳ ಮೊತ್ತ ಒಂದೇ ಬಾರಿಗೆ ಬಂದಿರುವುದರಿಂದ ಹೆಚ್ಚಿಗೆ ಬಂದಿರುವ ಅನುಭವವಾಗುತ್ತದೆ. ಪ್ರತ್ಯೇಕಿಸಿ ನೋಡಿದಾಗ ನಿಜಾಂಶ ತಿಳಿಯುತ್ತದೆ.

            -ಗೋವಿಂದಪ್ಪ, ಸೂಪರಿಂಟೆಂಡೆಂಟ್ ಎಂಜಿನಿಯರ್, ಬೆಸ್ಕಾಂ. ತುಮಕೂರು
 

      ಒಂದು ತಿಂಗಳು ನಾವು ನಮ್ಮ ಮನೆಯಲ್ಲಿಯೇ ಇರಲಿಲ್ಲ. ಸಂಭಂಧಿಕರ ಮನೆ ಸೇರಿಕೊಂಡಿದ್ದೆವು. ಈ ಹಿಂದೆ ಮಾಸಿಕ ಗರಿಷ್ಟ 400 ರೂ. ಗಳ ವರೆಗೆ ಬಿಲ್ ಬರುತ್ತಿತ್ತು. ಈಗ 1200 ರೂ.ಗಳ ಬಿಲ್ ಬಂದಿದೆ. ಮನೆಯಲ್ಲಿ ಇಲ್ಲದೆ ಹೋದರೂ ಇಷ್ಟು ಹಣ ಪಾವತಿಸಬೇಕೆ? ನೀರಿನ ಮೋಟರ್ ಬಿಲ್ 5500 ರೂ ಗಳಷ್ಟು ಬಂದಿದೆ. ವಿದ್ಯುತ್ ಬಿಲ್ ನೋಡಿ ನಮಗೆ ಶಾಕ್ ಆಯಿತು.

– ಶಿವಕುಮಾರ್, ಸದಾಶಿವನಗರ ನಿವಾಸಿ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap