ಗುಬ್ಬಿ :
ಕೊರೊನಾ ಸೊಂಕು ಸಮುದಾಯಗಳಲ್ಲಿ ಹಾಗೂ ಗ್ರಾಮೀಣ ಭಾಗಗಳಲ್ಲಿ ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಹೊರ ರಾಜ್ಯದಿಂದ ಬಂದಂತಹವರನ್ನು 14 ದಿನಗಳ ಕಾಲ ಅವರ ಗ್ರಾಮದಲ್ಲಿಯೆ ಕ್ವಾರಂಟೈನ್ ಮಾಡಲಾಗುತ್ತದೆ ಎಂದು ತಹಸೀಲ್ದಾರ್ ಡಾ.ಪ್ರದೀಪ್ ಕುಮಾರ್ ಹಿರೇಮಠ್ ತಿಳಿಸಿದರು.
ತಾಲ್ಲೂಕಿನ ದೊಡ್ಡಗುಣಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 206 ರಸ್ತೆಯ ಕಾವiಗಾರಿಯ ಕೆಲವು ಕಾರ್ಮಿಕರಿಗೆ ಆಹಾರದ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು, ಗುಬ್ಬಿ ತಾಲ್ಲೂಕಿನಲ್ಲಿ 363 ಕ್ವಾರಂಟೈನ್ ವಿಶೇಷ ಕೇಂದ್ರಗಳನ್ನು ಅಯಾಯ ಗ್ರಾಮದ ಸರಕಾರಿ ಶಾಲೆ ಹಾಗೂ ವಸತಿ ನಿಲಯದಲ್ಲಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಮಸ್ಥರು ಹೆದರುವ ಅಗತ್ಯವಿಲ್ಲ, ಕಾರಣ ಅವರು ಬೇರೆ ಗ್ರಾಮದ ಅಥವಾ ಬೇರೆ ರಾಜ್ಯದವರಲ್ಲ. ನಿಮ್ಮೂರಿನಿಂದ ಹೊರ ಭಾಗಕ್ಕೆ ಹೋಗಿದ್ದವರು ಈಗ ಬಂದಿದ್ದಾರೆ. ಅವರನ್ನು ಗ್ರಾಮದಲ್ಲಿಯೆ ಕ್ವಾರಂಟೈನ್ ಮಾಡಲಾಗುತ್ತಿದೆ. ಕಾರಣ ಹೋಮ್ ಕ್ವಾರಂಟೈನ್ ಮಾಡಿದಾಗ ಕೆಲವು ಬಾರಿ ಅವರು ಹೊರ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಅವರನ್ನು ಸರಕಾರದ ವತಿಯಿಂದ ಯಾವುದೇ ರೀತಿಯಲ್ಲಿ ಸಮುದಾಯಗಳಿಗೆ ಹಾಗೂ ಗ್ರಾಮಕ್ಕೆ ಹರಡಬಾರದು ಅನ್ನುವ ಒಳ್ಳೆಯ ದೃಷ್ಟಿಯಿಂದ ಕ್ವಾರಂಟೈನ್ ಮಾಡಲಾಗುತ್ತಿದೆ.
ಇಲ್ಲಿಗೆ ಬರುವುದಕ್ಕೂ ಮುಂಚೆಯೆ ಅವರಿಗೆ ಎಲ್ಲಾ ರೀತಿಯ ಆರೋಗ್ಯ ತಪಾಸಣೆ ಮಾಡಿಯೆ ಕರೆದುಕೊಂಡು ಬರಲಾಗುತ್ತದೆ. ಅವರಿಗೆ ಯಾವುದೇ ರೀತಿಯಲ್ಲಿಯು ಯಾವುದೇ ಸೊಂಕು ಇಲ್ಲ ಎಂದು ಖಚಿತವಾದ ಮೇಲೆಯೆ ಕರೆ ತರಲಾಗಿರುತ್ತದೆ. ಆದರೂ ಸಹ ಭವಿಷ್ಯದ ಹಿತ ದೃಷ್ಟಿಯಿಂದ ಅವರನ್ನು 14 ದಿನಗಳ ಕಾಲ ಕ್ವಾರಂಟೈನ್ ಮಾಡಲಾಗುತ್ತದೆ. ಹಾಗಾಗಿ ಎಲ್ಲಾ ಗ್ರಾಮಗಳ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಇದೆ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ರೇಣುಕಾಪ್ರಸಾದ್, ಮುಖಂಡ ಜಯಣ್ಣ, ಆಸ್ಪತ್ರೆ ಸಿಬ್ಬಂದಿ ಮತ್ತು ಗ್ರಾಮ ಪಂಚಾಯತಿ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
