ತುರುವೇಕೆರೆ
ಕುಡಿಯುವ ನೀರಿನೊಂದಿಗೆ ಮಲಿನಗೊಂಡ ನೀರು ಸೇರ್ಪಡೆಯಾಗುವ ಭಯದಲ್ಲಿ ನಾಗರಿಕರ ಆರೋಪದ ಮೇರೆಗೆ ಪ್ರಜಾಪ್ರಗತಿ ವರದಿಗಾರನ ಕರೆಗೆ ತಕ್ಷಣ ಸ್ಪಂದಿಸಿದ ಪಟ್ಟಣ ಪಂಚಾಯಿತಿ ಆರೋಗ್ಯಾಧಿಕಾರಿಯ ಕರ್ತವ್ಯ ನಿಷ್ಟೆಗೆ ನಾಗರಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ಪಟ್ಟಣದ ವೈ.ಟಿ.ರಸ್ತೆ ಸಮೀಪ ಪೊಲೀಸ್ ಠಾಣೆ-ಸಾರ್ವಜನಿಕ ಆಸ್ಪತ್ರೆಗೆ ಹೊಂದಿಕೊಂಡಂತೆ ಮೀನಾಕ್ಷಿ ನಗರ ರಸ್ತೆಯಲ್ಲಿ ಪಟ್ಟಣಕ್ಕೆ ಕುಡಿಯುವ ನೀರೊದಗಿಸುವ ಜಾಕ್ವೆಲ್ ಇದೆ. ಪಟ್ಟಣದ ಶುದ್ದೀಕರಣ ಘಟಕದಿಂದ ದೆಬ್ಬೇಘಟ್ಟ ರಸ್ತೆಯ ಬೆಸ್ಕಾಂ ಪಕ್ಕವಿರುವ ಓವರ್ ಹೆಡ್ಟ್ಯಾಂಕ್ ಹಾಗೂ ಪಟ್ಟಣ ಪಂಚಾಯಿತಿ ಆವರಣದಲ್ಲಿರುವ ಓವರ್ ಹೆಡ್ ಟ್ಯಾಂಕ್ಗೆ ಈ ಜಾಕ್ವೆಲ್ ಮುಖಾಂತರ ನೀರು ತುಂಬಿಸಿ, ನಂತರ ನಗರಕ್ಕೆ ಕುಡಿಯುವ ನೀರು ಒದಗಿಸಲಾಗುತ್ತದೆ.
ಈ ಜಾಕ್ವೆಲ್ ಗುಂಡಿಯಲ್ಲಿ ಹಲವು ದಿನಗಳಿಂದ ಕಲುಷಿತ ನೀರು ತುಂಬಿ ದುರ್ವಾಸನೆ ಬೀರುತ್ತಿತ್ತು. ಶುದ್ದ ನೀರಿನ ಜೊತೆ ಈ ಜಾಕ್ವೆಲ್ನಲ್ಲಿ ನಿಂತಿರುವ ಕಲುಷಿತ ನೀರು ಸಹ ಸೇರ್ಪಡೆಗೊಳ್ಳುತ್ತಿದ್ದು, ಕರೊನಾ ಸಂದರ್ಭದಲ್ಲಿ ಇದು ಗಂಭೀರ ಅನಾರೋಗ್ಯಕ್ಕೆ ಕಾರಣವಾಗಬಹುದೆಂಬ ಭಯದಿಂದ ಸ್ಥಳೀಯ ನಾಗರಿಕರು ಎಚ್ಚೆತ್ತು ಬುಧವಾರ ಪ್ರಜಾಪ್ರಗತಿ ವರದಿಗಾರರ ಗಮನ ಸೆಳೆದರು. ಕೂಡಲೆ ಈ ವಿಚಾರವನ್ನು ಪ.ಪಂ.ಆರೋಗ್ಯಾಧಿಕಾರಿಗಳ ಗಮನಕ್ಕೆ ತರಲಾಗಿ ತಕ್ಷಣ ಎಚ್ಚೆತ್ತು ಕಾರ್ಯೋನ್ಮುಖರಾಗಿ ಅಂದೇ ಜಾಕ್ವೆಲ್ನ್ನು ಸ್ವಚ್ಛಗೊಳಿಸಿದ್ದಾರೆ. ಇದಕ್ಕಾಗಿ ಸ್ಥಳೀಯ ನಾಗರಿಕರು, ವಾಹನ ಚಾಲಕರು ಹಾಗೂ ಪರಿಸರ ಪ್ರೇಮಿಗಳು ಪಟ್ಟಣ ಪಂಚಾಯಿತಿ ಅಧಿಕಾರಿಗಳನ್ನು ಅಭಿನಂದಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








