ತುಮಕೂರು : ಜಿಲ್ಲಾ ಸಚಿವರ ಸ್ವ-ಕ್ಷೇತ್ರದಲ್ಲೇ ನೀರಿನ ಘಟಕಗಳ ನಿರ್ವಹಣೆ ನಿರ್ಲಕ್ಷ್ಯ!

ಹುಳಿಯಾರು:

      ಹುಳಿಯಾರು ಹೋಬಳಿಯ ಅನೇಕ ಗ್ರಾಮಗಳಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಸ್ಥಾಪಿಸಲಾಗಿರುವ ಶುದ್ಧ ನೀರಿನ ಘಟಕಗಳ ನಿರ್ವಹಣೆ ಸಂಪೂರ್ಣ ವಿಫಲವಾಗಿವೆ. ಇವರುಗಳ ನಿರ್ಲಕ್ಷ್ಯದಿಂದ ಅನೇಕ ಘಟಕಗಳು ಎರಡ್ಮೂರು ತಿಂಗಳುಗಳು ಕಳೆದರೂ ದುರಸ್ತಿ ಕಾಣದೆ ಸ್ಥಗಿತಗೊಳ್ಳುತ್ತಿರುವುದರಿಂದ ಜನ ಫ್ಲೋರೈಡ್ ಯುಕ್ತ ನೀರನ್ನೆ ಕುಡಿಯುವ ಪರಿಸ್ಥಿತಿ ತಲೆದೋರಿದೆ.

      ಗ್ರಾಮಸ್ಥರಿಗೆ ಶುದ್ದ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ಸರಕಾರ ಲಕ್ಷಾಂತರ ರೂ.ಗಳ ಅನುದಾನ ಬಿಡುಗಡೆ ಮಾಡಿ, ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡಿದೆ. ಆದರೆ ನಿರ್ವಹಣೆ ಕೊರತೆಯಿಂದ ಕುಡಿಯುವ ನೀರಿನ ಘಟಕಗಳು ಕೈ ಕೊಡುತ್ತಿವೆ. ಕೆಟ್ಟು ಎರಡ್ಮೂರು ತಿಂಗಳಾದರೂ ದುರಸ್ತಿ ಮಾಡಲು ಮುಂದಾಗುವುದಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಹೀಗೆ ಸಂಬಂಧ ಪಟ್ಟವರೆಲ್ಲರಿಗೂ ವಿಷಯ ಮುಟ್ಟಿಸಿದರೂ ಯಾರೊಬ್ಬರೂ ಸ್ಪಂದಿಸುತ್ತಿಲ್ಲ. ಪರಿಣಾಮ ಅಕ್ಕಪಕ್ಕದ ಊರಿನ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಹೋಗಿ ನೀರು ತರುವ ಅನಿವಾರ್ಯತೆ ಸೃಷ್ಟಿಯಾಗಿದೆ.

      ಈ ಭಾಗದಲ್ಲಿ ಹೆಚ್ಚುಕಡಿಮೆ ಎಲ್ಲಾ ಘಟಕಗಳ ಹೊಣೆ ಹೊತ್ತಿರುವುದು ಪೆಂಟಾಪ್ಯೂರ್ ಕಂಪನಿ. ಕೆಲ ಘಟಕದಲ್ಲಿ ನಿರ್ವಹಣೆಗಾರರ ವಿಳಾಸ ಹಾಗೂ ಮೊಬೈಲ್ ನಂಬರ್ ನಮೂದಿಸಿದರಾದರೂ ಫೋನ್ ಮಾಡಿದರೆ ಆಗ ಬರ್ತೇವೆ, ಈಗ ಬರ್ತೇವೆ ಎನ್ನುತ್ತಾರೆ ಹೊರತು ಎರಡ್ಮೂರು ತಿಂಗಳುಗಳು ಕಳೆದರೂ ಬರುವುದಿಲ್ಲ. ಗ್ರಾಪಂನವರಿಗೆ ಹೇಳಿದರೆ ಈ ಘಟಕಗಳನ್ನು ಪಂಚಾಯ್ತಿಗೆ ಹಸ್ತಾಂತರಿಸಿಲ್ಲ ಎನ್ನುತ್ತಾರೆ.

      ಹಾಗಾಗಿ ಘಟಕ ಕೆಟ್ಟರೆ ಅಥವಾ ತಾಂತ್ರಿಕ ಸಮಸ್ಯೆ ತಲೆದೋರಿದರೆ ರಿಪೇರಿ ಮಾಡಲು ಯಾರಿಗೆ ತಿಳಿಸಬೇಕೆನ್ನುವುದೇ ತಿಳಿಯದಾಗಿದೆ ಎನ್ನುತ್ತಾರೆ ಸ್ಥಳೀಯರು.

      ಹುಳಿಯಾರು ಹೋಬಳಿಯ ಕೆ.ಸಿ.ಪಾಳ್ಯ, ಕುರಿಹಟ್ಟಿ, ಬೆಳ್ಳಾರ, ಕೋಡಿಪಾಳ್ಯ ಹೀಗೆ ಗ್ರಾಮೀಣ ಪ್ರದೇಶದ ಶುದ್ಧ ನೀರಿನ ಘಟಕಗಳು ಕೆಟ್ಟು ಎರಡ್ಮೂರು ತಿಂಗಳಾಗಿದ್ದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಕುಡಿಯುವ ನೀರಿನ ಘಟಕದ ನಿರ್ವಹಣೆಗಾರರಿಗೆ ಎಚ್ಚರಿಕೆ ನೀಡಬೇಕು. ತಕ್ಷಣ ಘಟಕಗಳ ದುರಸ್ಥಿಗೆ ಸೂಚನೆ ನೀಡಬೇಕು. ಆಗಲೂ ನಿರ್ಲಕ್ಷ್ಯ ತೋರುವವರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

 
 
ಘಟಕಗಳು ಉತ್ತಮವಾಗಿ ಕೆಲಸ ನಿರ್ವಹಿಸುವವರೆವಿಗೂ ಕಾಲಕಾಲಕ್ಕೆ ಬಂದು ಸಂಗ್ರಹವಾದ ಹಣವನ್ನು ತೆಗೆದುಕೊಂಡು ಹೋಗುತ್ತಾರೆ. ಘಟಕಗಳು ಕೆಟ್ಟು ಹೋದರೆ ಇತ್ತ ತಿರುಗಿಯೂ ಸಹ ನೋಡುವುದಿಲ್ಲ. ಹಾಗಾಗಿ ತಾಲ್ಲೂಕಿನ ಅನೇಕ ಶುದ್ಧ ನೀರಿನ ಘಟಕಗಳು ಕೆಟ್ಟು ಹೋಗಿದ್ದು ಜನರು ಶುದ್ಧ ನೀರಿಗೆ ಪರದಾಡುವಂತಾಗಿದೆ. ಹಾಗಾಗಿ ಈ ನೀರಿನ ಘಟಕಗಳನ್ನು ಗ್ರಾಪಂಗೆ ಹಸ್ತಾಂತರಿಸಿದರೆ ಒಳಿತು.

-ಬೆಳ್ಳಾರ ಈರಣ್ಣ, ಜಿಪಂ ಮಾಜಿ ಸದಸ್ಯ
 

ಶುದ್ದ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋದರೆ ದುರಸ್ತಿ ಮಾಡಲು ಮೊಬೈಲ್ ಸಂಚಾರಿ ದುರಸ್ತಿ ವಾಹನ ಇಡುವಂತೆ ನಿರ್ವಹಣಾಗಾರರಿಗೆ ಸೂಚಿಸಬೇಕು. ಇಲ್ಲದಿದ್ದಲ್ಲಿ ಘಟಕಗಳು ತಾಂತ್ರಿಕ ಸಮಸ್ಯೆಗಳಿಂದ ಕೆಟ್ಟು ಹೋದರೆ ಅವುಗಳ ರಿಪೇರಿಗೆ ಬೆಂಗಳೂರಿನಿಂದ ಬಂದು ಸರಿಪಡಿಸುವವರೆಗೆ ಸ್ಥಗಿತಗೊಂಡಿರುತ್ತದೆ. ತಾಲ್ಲೂಕಿನಲ್ಲಿ ನೂರಾರು ಘಟಕಗಳು ಸ್ಥಾಪಿಸಿರುವುದರಿಂದ ಸಂಚಾರಿ ಘಟಕದ ಅವಶ್ಯಕತೆಯಿದೆ.

 
-ಹೆಚ್.ಎನ್.ಕುಮಾರ್, ತಾಪಂ ಸದಸ್ಯರು.
  

ಬೆಳ್ಳಾರದ ನೀರಿನ ಘಟಕ ದುರಸ್ಥಿ ಮಾಡಿ ಪುಣ್ಯ ಕಟ್ಕೊಳ್ಳಿ

 ಹುಳಿಯಾರು ಹೋಬಳಿಯ ಬೆಳ್ಳಾರ ಗ್ರಾಮದ ಶುದ್ಧ ನೀರಿನ ಘಟಕ ಕೆಟ್ಟು 3 ತಿಂಗಳಾಗಿದ್ದು ತಕ್ಷಣ ದುರಸ್ಥಿ ಮಾಡಿ ಪುಣ್ಯ ಕಟ್ಕೊಳ್ಳಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

      ಬೆಳ್ಳಾರ ಗ್ರಾಮದ 450 ಮನೆಗಳೂ ಸೇರಿದಂತೆ ಸಮೀಪದ 2 ಗೊಲ್ಲರ ಹಟ್ಟಿಗಳು, ಮುತ್ತುಗದಹಳ್ಳಿ, ಅಂಬಾರಪುರ ಗ್ರಾಮಗಳ ಜನರಿಗೆ ಈ ಶುದ್ಧ ನೀರಿನ ಘಟಕ ನೀರು ಪೂರೈಸುತ್ತಿತ್ತು. ಆದರೆ 3 ತಿಂಗಳಿಂದ ಈ ಘಟಕ ಕೆಟ್ಟಿದ್ದು ಶುದ್ಧ ನೀರಿಗೆ ಜನ ಪರದಾಡುವಂತಾಗಿದೆ.

      ಈ ಫಿಲ್ಟರ್ ನೀರು ಕುಡಿದು ಅಭ್ಯಾಸವಾಗಿರುವ ಜನರಿಗೆ ಕೊಳವೆ ಬಾವಿಯ ನೀರು ಕುಡಿದರೆ ನೆಗಡಿ, ಕೆಮ್ಮು, ಗಂಟಲು ಕೆರತ ಸೇರಿದಂತೆ ಅನೇಕ ತೊಂದರೆಗಳು ಕಾಣಿಕೊಳ್ಳುತ್ತಿದೆ. ಹಾಗಾಗಿ ಫಿಲ್ಟರ್ ನೀರು ಕುಡಿಯುವ ಸಲುವಾಗಿ ಐದಾರು ಕಿ.ಮೀ. ದೂರದ ಹೊಯ್ಸಲಕಟ್ಟೆ, ಬಡಕೆಗುಡ್ಲು ಗ್ರಾಮದ ನೀರಿನ ಘಟಕದಿಂದ ನೀರು ತಂದು ಕುಡಿಯುತ್ತಿದ್ದಾರೆ.
  

ಕುರಿಹಟ್ಟಿ ನೀರಿನ ಘಟಕ ದುರಸ್ತಿ ಮಾಡಿಸಿ
 

      ಹುಳಿಯಾರು ಸಮೀಪದ ಕುರಿಹಟ್ಟಿಯ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು 2 ತಿಂಗಳಾದರೂ ದುರಸ್ತಿ ಮಾಡದೆ ನಿರ್ಲಕ್ಷಿಸಿರುವುದರಿಂದ ಗ್ರಾಮದಲ್ಲಿ ಜೀವಜಲಕ್ಕೆ ತತ್ವಾರ ಎದುರಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

      ಈ ಹಿಂದೆ ನೀರಿನ ಟ್ಯಾಂಕ್ ತೂತು ಬಿದ್ದು ನೀರು ಸೋರುತ್ತಿರುವುದು ಹಾಗೂ ನೀರು ಸರಿಯಾಗಿ ಫಿಲ್ಟರ್ ಆಗದೆ ಅನೇಕ ತಿಂಗಳು ದುರಸ್ಥಿಯಾಗದೆ ಉಳಿದಿತ್ತು. ಪತ್ರಿಕೆಯಲ್ಲಿ ಸುದ್ದಿ ಬಂದ ನಂತರ ಎಚ್ಚೆತ್ತು ರಿಪೇರಿ ಮಾಡಲಾಗಿತ್ತು.

      ಈಗ ಮತ್ತೆ ಘಟಕ ಕೆಟ್ಟು ಹೋಗಿ 2 ತಿಂಗಳು ಕಳೆದರೂ ಇಲ್ಲಿಯವರೆವಿಗೂ ಇತ್ತ ಯಾರೊಬ್ಬರೂ ತಿರುಗಿ ನೋಡಿಲ್ಲ. ಪರಿಣಾಮ ಕುಡಿಯುವ ನೀರಿಗಾಗಿ ಮೂರ್ನಾಲ್ಕು ಕಿ.ಮೀ. ದೂರದ ಕೆಂಕೆರೆ, ಕಂಪನಹಳ್ಳಿ, ಹುಳಿಯಾರಿಗೆ ಹೋಗಿ ತರುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಕೋಡಿಪಾಳ್ಯದ ನೀರಿನ ಘಟಕ ಕೆಟ್ಟು 1 ವರ್ಷ

      ಕೆಂಕೆರೆ ರಸ್ತೆಯ ಬಿಎಂಎಸ್ ಪದವಿ ಕಾಲೇಜಿನ ಪಕ್ಕದ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಇಲ್ಲಿಗೆ ವರ್ಷ ಕಳೆದಿದ್ದರೂ ಯಾರೂ ತಿರುಗಿ ನೋಡದೆ ಸಂಪೂರ್ಣವಾಗಿ ಕಡೆಗಣಿಸಿದ್ದಾರೆ.

      ಪರಿಣಾಮ ಈ ನೀರನ್ನು ಅವಲಂಬಿಸಿದ್ದ ವೈ.ಎಸ್.ಪಾಳ್ಯ, ಲಿಂಗಪ್ಪನಪಾಳ್ಯ, ಕೋಡಿಪಾಳ್ಯದ ನಿವಾಸಿಗಳು ಅಕ್ಷರಶಃ ಶುದ್ಧ ನೀರಿಗೆ ಪರದಾಡುತ್ತಿದ್ದಾರೆ. ಬೈಕ್ ಇರುವವರು ಅಕ್ಕಪಕ್ಕದ ಪಂಚಾಯ್ತಿಯ ನೀರಿನ ಘಟಕಗಳಿಂದ ನೀರು ತಂದರೆ ಬೈಕ್ ಇಲ್ಲದವರು ಕೊಳವೆ ಬಾವಿಯ ನೀರು ಕುಡಿಯುತ್ತಿದ್ದಾರೆ.
ಈ ನೀರಿನ ಘಟಕ ಇರುವ ಸ್ಥಳದಲ್ಲಿ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ಇವೆ. ಅಲ್ಲದೆ ಹೈವೆ ರಸ್ತೆಗೆ ಹೊಂದಿಕೊಂಡಿರುವುದರಿಂದ ಕಾರು, ಲಾರಿಯಲ್ಲಿ ಬರುವವರಿಗೆ ಈ ಘಟಕ ಶುದ್ಧ ನೀರಿನ ಆಸರೆಯಾಗಿದೆ. ಹಾಗಾಗಿ ತಕ್ಷಣ ಈ ಘಟಕದ ದುರಸ್ಥಿಯ ಅಗತ್ಯವಿದೆ.

 

 – ಎಚ್.ಬಿ.ಕಿರಣ್ ಕುಮಾರ್ 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

  

Recent Articles

spot_img

Related Stories

Share via
Copy link