ದಾವಣಗೆರೆ
ಕೃಷಿ ಉತ್ಪನ್ನಗಳನ್ನು ಖರೀದಿಸುವ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯ ಮಾನದಂಡಗಳನ್ನು ತಕ್ಷಣವೇ ಬದಲಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಗುರುವಾರ ನಡೆದ ಜಿಲ್ಲಾ ಪಂಚಾಯತ್ನ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.
ಸಭೆಯಲ್ಲಿ ಜಿ.ಪಂ. ಸದಸ್ಯರಾದ ತೇಜಸ್ವಿ ಪಟೇಲ್, ಓಬಳಪ್ಪ, ವಾಗೀಶ್ಸ್ವಾಮಿಮಾತನಾಡಿ, ಕೇಂದ್ರ ಸರ್ಕಾರದ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರ ಉತ್ಪನ್ನ ಖರೀದಿಸಲು ಸರ್ಕಾರ ರೂಪಿಸಿರುವ ಮಾನದಂಡಗಳನ್ನು ರೈತರು ಪೂರೈಸುವುದು ಕಷ್ಟವಾಗಿರುವ ಕಾರಣ ಹೊರಗೆ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ತಮ್ಮ ಉತ್ಪನ್ನಗಳನ್ನು ಮಾರುವಂತಾಗಿದೆ.
ಆದ ಕಾರಣ ಮಾನದಂಡಗಳನ್ನು ಬದಲಾಯಿಸಿ, ರೈತರಿಗೆ ಅನುಕೂಲಕರವಾಗುವಂತಹ ಮಾನದಂಡಗಳನ್ನು ರಚಿಸಬೇಕೆಂದು ಆಗ್ರಹಿಸಿದರು.ಆಹಾರ ಇಲಾಖೆ ಉಪ ನಿರ್ದೇಶಕ ಮಂಟೇಸ್ವಾಮಿ ಮಾತನಾಡಿ, ಪ್ರಸ್ತುತ 5 ತಾಲ್ಲೂಕುಗಳಲ್ಲಿ ಖರೀದಿ ಕೇಂದ್ರ ಆರಂಭಿಸಲಾಗಿದ್ದು ರೈತರ ನೋಂದಾವಣೆ ಆರಂಭವಾಗಿದೆ.ನೋಂದಾಯಿತ ರೈತರಿಂದ ಕ್ವಿಂಟಾಲ್ ಒಂದಕ್ಕೆ ರೂ.1825 ಕ್ಕೆ ಭತ್ತವನ್ನು ಖರೀದಿಸಲಾಗುವುದು.ಒಬ್ಬ ರೈತನಿಂದ ಗರಿಷ್ಟ 40 ಕ್ವಿಂಟಾಲ್ ಭತ್ತ ಖರೀದಿಸಬಹುದು.ಈ ಭತ್ತವನ್ನು ನಾವು ಗುರುತಿಸಿರುವ ರೈಸ್ಮಿಲ್ಗಳಿಗೆ ನೇರವಾಗಿ ರೈತರು ನೀಡಬೇಕು ಎಂದರು.
ಸದಸ್ಯರಾದ ವಾಗೀಶ್ಸ್ವಾಮಿ ಮಾತನಾಡಿ, ಖರೀದಿಯ ಮಾನದಂಡಗಳು ಬದಲಾಗಬೇಕು.ರೈತರಿಂದ ಇಂತಿಷ್ಟೇ ಉತ್ಪನ್ನ ಖರೀದಿಸಬೇಕು. ಶೇ.17 ತೇವಾಂಶ ಇರಬೇಕೆಂಬ ಕಾರಣಗಳಿಂದ ರೈತರು ಕನಿಷ್ಟ ಬೆಂಬಲ ಬೆಲೆಯ ದರ ಹೆಚ್ಚಿದ್ದರೂ ನೊಂದಾಯಿಸಲಾಗದೇ, ಹೊರಗಡೆ ಮಾರುಕಟ್ಟೆಯಲ್ಲಿ ರೂ.1400 ಕ್ಕೇ ಮಾರಾಟ ಮಾಡುತ್ತಿದ್ದಾರೆ ಎಂದರು.ಸದಸ್ಯರಾದ ತೇಜಸ್ವಿ ಪಟೇಲ್ ಮಾತನಾಡಿ, ಕನಿಷ್ಟ ಬೆಂಬಲ ಬೆಲೆ ಯೋಜನೆಯ ಉದ್ದೇಶವೇ ರೈತರಿಗೆ ಸಹಾಯ ಮಾಡುವುದಾಗಿದೆ.
ಆದರೆ ಈಗ ಖರೀದಿ ಕೇಂದ್ರ ತೆರೆಯಬೇಕು, ಆದರೆ ಖರೀದಿ ಆಗಬಾರದು ಎಂಬಂತೆ ಆಗಿದೆ.ಮಾನದಂಡಗಳು ಕಷ್ಟ ಇವೆ. ಗುಣಮಟ್ಟವನ್ನು ರೈತರಿಂದ ಕೇಳದೆ, ರೈತರಿಂದ ಖರೀದಿಸಿದ ನಂತರ ನೀವು ಗುಣಮಟ್ಟ ನಿರ್ವಹಿಸಬೇಕು.ಭತ್ತ ತೇವಾಂಶ ಇರುತ್ತದೆ.ಅದನ್ನು ನೀವು ನಿರ್ವಹಿಸಬೇಕು. ಹಾಗೂ ಆನ್ಲೈನ್ನಲ್ಲಿ ಎಷ್ಟು ಜನ ರೈತರಿಗೆ ರಿಜಿಸ್ಟರ್ ಮಾಡಲು ಸಾಧ್ಯ. ಈ ಮಾನದಂಡಗಳ ಕಾರಣಕ್ಕಾಗಿಯೇ ರೈತರು ಕಡಿಮೆ ಬೆಲೆಗೇ ತಮ್ಮ ಉತ್ಪನ್ನ ಮಾರಾಟ ಮಾಡುತ್ತಿದ್ದಾರೆ. ಹಾಗೂ ಇಳುವರಿ ಕ್ಷೇತ್ರದಲ್ಲಿದ್ದಾಗಲೇ ಖರೀದಿ ಕೇಂದ್ರ ತೆರೆಯುವ ಪ್ರಕ್ರಿಯೆ ಆರಂಭವಾಗಬೇಕು. ರೈತರು ಉತ್ಪನ್ನವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಅದು ಮಧ್ಯವರ್ತಿಗಳ ಕೈ ಸೇರಿದಾಗ ಖರೀದಿ ಕೇಂದ್ರ ತೆರೆಯುವುದರಿಂದ ಮಧ್ಯವರ್ತಿಗಳಿಗೆ ಲಾಭವಾಗುತ್ತಿದೆ ಎಂದರು. ಸದಸ್ಯ ವಾಗೀಶ್ಸ್ವಾಮಿ, ಸರ್ಕಾರ ರೈತರಿಂದ ಪಡೆದ ಭತ್ತವನ್ನು ಹಲ್ಲಿಂಗ್ ಮಾಡಿ ಭತ್ತವನ್ನು ಅಕ್ಕಿ ಮಾಡಿ ಕೊಡುವುದಕ್ಕೆ ಕ್ವಿಂಟಾಲ್ಗೆ ರೂ. ಹತ್ತು ನಿಗದಿಪಡಿಸಲಾಗಿದೆ. ರೈಸ್ಮಿಲ್ನವರಿಗೂ ಇದರಿಂದ ನ್ಯಾಯ ಒದಗುವುದಿಲ್ಲ ಎಂದರು.
ಸದಸ್ಯ ಸುರೇಂದ್ರನಾಯ್ಕ ಮಾತನಾಡಿ, ಮೆಕ್ಕೆಜೋಳ ಖರೀದಿ ಕೇಂದ್ರವನ್ನು ತೆರೆದಿಲ್ಲ. ಆದರೆ ಕೆಎಂಎಫ್ ನವರು ಮೆಕ್ಕೆಜೋಳ ಖರೀದಿಸುತ್ತಿದ್ದು, ಇದುವರೆಗೆ 8 ಸಾವಿರ ಮೆಟ್ರಿಕ್ ಟನ್ ಖರೀದಿ ಮಾಡಿದ್ದಾರೆ.ಮುಂದೆ ಅವಶ್ಯಕತೆ ಇದ್ದರೆ ಮಾಡುತ್ತೇವೆ ಎಂದಿದ್ದಾರೆ.ಆದ್ದರಿಂದ ಎಪಿಎಂಸಿ ವತಿಯಿಂದ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿದರು.ಸದಸ್ಯ ವಾಗೀಶ್ಸ್ವಾಮಿ ಪಂಜಾಬ್ ಮತ್ತು ಹರಿಯಾಣದಿಂದ ಅಕ್ಕಿ ಖರೀದಿಸಿ ಇಲ್ಲಿ ಪಡಿತರ ನೀಡುವ ಬದಲು ಇಲ್ಲಿನ ರೈತರಿಂದಲೇ ಭತ್ತ ಖರೀದಿಸಿ ಪಡಿತರ ನೀಡಿದಲ್ಲಿ ಇಲ್ಲಿನ ರೈತರಿಗೆ ಅನುಕೂಲವಾಗಲಿದೆ ಎಂದರು.
ಸದಸ್ಯ ಎಸ್.ಕೆ.ಮಂಜುನಾಥ್ ಮಾತನಾಡಿ, ತಮ್ಮ ಕ್ಷೇತ್ರದಲ್ಲಿ ಪಿಆರ್ಇಡಿ ವತಿಯಿಂದ ಕೈಗೊಳ್ಳಲಾದ ಕಾಮಗಾರಿ ಜನವರಿ ಒಳಗೇ ನೀಟಾಗಿ ಪೂರ್ಣಗೊಂಡಿದೆ.ಬಿಲ್ ಸಲ್ಲಿಸಲಾಗಿದೆ.ಆದರೆ ಏಪ್ರಿಲ್ವರೆಗೂ ಪಾವತಿಯಾಗಿಲ್ಲ. ಈಗ ಏಪ್ರಿಲ್ 24 ಕ್ಕೇ ಖಜಾನೆ ಲಾಕ್ಆಗಿದೆ. ಹಣ ವಾಪಸ್ಸು ಹೋಗಿದೆ ಎಂದರೆ ಹೇಗೆ? ಕೆಲಸ ಮಾಡಿದವರಿಗೆ ಯಾರು ಪಾವತಿಸುತ್ತಾರೆ ಎಂದು ಪ್ರಶ್ನಿಸಿದರು.
ಜಗಳೂರು ತಾಲ್ಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ವೆಂಡರ್ಗಳು ರೂ.8 ರಿಂದ 9 ಕೋಡಿ ಬಿಲ್ ಡ್ರಾ ಮಾಡಿದ್ದಾರೆ. ಇಲ್ಲಿನ ಪಿಡಿಓ ಬಗ್ಗೆ ಸಹ ದೂರು ನೀಡಿ, ತನಿಖೆ ಸಹ ಆಗಿತ್ತು.ಇದುವರೆಗೆ ಕ್ರಮ ವಹಿಸಿಲ್ಲ ಎಂದರು.
ಓಬಳಪ್ಪ ಮಾತನಾಡಿ, 2 ವರ್ಷಗಳಿಂದ ಜಗಳೂರಿನ ನರೇಗಾ ಯೋಜನೆಯಡಿ ಕೋಟಿಗಟ್ಟಲೆ ಹಣ ಖರ್ಚಾಗುತ್ತಿದೆ, ಒಬ್ಬನೇ ವೆಂಡರ್ ರೂ.5 ಕೋಟಿಗೂ ಹೆಚ್ಚು ಹಣ ಡ್ರಾ ಮಾಡಿದ್ದಾರೆ ಎಂದರು.ವಾಗೀಶ್ಸ್ವಾಮಿ ಜಗಳೂರಿನಲ್ಲಿ ಉದ್ಯೋಗ ಖಾತ್ರಿ ಎಂಬುದು ಕಳ್ಳರ ಸಂತೆಯಾಗಿದೆ.ಇದನ್ನು ತನಿಖೆ ಮಾಡಲು ಬಂದ ತನಿಖಾಧಿಕಾರಿಗಳೂ ಸಹ ಹಾಗೇ ಇದ್ದಾರೆ ಎಂದರೆ, ಸದಸ್ಯೆ ಜೆ.ಸವಿತಾ, ಇನ್ನು ಮುಂದೆ ಇಲ್ಲಿ ಕೂಲಿ ಕಾರ್ಮಿಕರಿಗೆ ಮಾತ್ರ ಕೆಲಸ ನೀಡಿರಿ ಎಂದರು.
ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ ಪ್ರತಿಕ್ರಿಯಿಸಿ, ವೆಂಡರ್ ಬಿಲ್ ಡ್ರಾ ಮಾಡಲು ಯಾವುದೇ ಮಿತಿ ಇಲ್ಲ. ಜಗಳೂರು ನರೇಗಾ ಯೋಜನೆಯಡಿಯ ಅವ್ಯವಹಾರ ಕುರಿತಂತೆ ಬಂದ ದೂರಿನ ಕುರಿತು ತನಿಖೆ ನಡೆಸಿದ ತಂಡ ವರದಿ ನೀಡಿ, ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದಂತೆ ಕ್ರಮ ಕೈಗೊಳ್ಳಲಾಗಿದ್ದು, ಈ ಅವ್ಯವಹಾರದಲ್ಲಿ 9 ಪಿಡಿಓ ಗಳನ್ನು ಸಸ್ಪೆಂಡ್ ಮಾಡಿ, 1 ಕಾರ್ಯದರ್ಶಿ, 5 ಜನ ತಾಂತ್ರಿಕ ಸಹಾಯಕರನ್ನು ವಜಾಗೊಳಿಸಿ, 10 ಡಾಟಾ ಎಂಟ್ರಿ ಆಪರೇಟರ್ಗಳನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಹಾಗೂ ಹಲವರಿಗೆ ಎಚ್ಚರಿಕೆ ಪತ್ರ ನೀಡಲಾಗಿದ್ದು ಒಟ್ಟು 5 ಲಕ್ಷದ 1 ಸಾವಿರ ದಂಡ ವಿಧಿಸಲಾಗಿದೆ ಎಂದರು.
ಜಿ.ಪಂ. ಸದಸ್ಯ ಬಸವಂತಪ್ಪ ಮಾತನಾಡಿ, ಕೋವಿಡ್ ಕಾರಣಕ್ಕಾಗಿ ಕಂಟೈನ್ಮೆಂಟ್ ಝೋನ್ ಅಲ್ಲದಿದ್ದರೂ ಇತರೆಡೆ ಮೃತ ಹೊಂದಿದವರ ಎರಡು ಶವಗಳನ್ನು 5 ದಿನಗಳಾದರೂ ನೀಡುತ್ತಿಲ್ಲ. ಮೃತ ಹೊಂದಿದವರ ಸ್ಯಾಂಪಲ್ಗಳನ್ನು ಶೀಘ್ರದಲ್ಲಿ ಪರೀಕ್ಷೆ ಮಾಡಿಸುವ ಬಗ್ಗೆ ಕ್ರಮ ವಹಿಸಬೇಕು. ಹಾಗೂ ಎಬಿಆರ್ಕೆ ಅಡಿ ರೆಫರ್ ಮಾಡಲಾದ ಕೇಸ್ಗಳು ಎಸ್ಎಸ್, ಇತರೆ ಆಸ್ಪತ್ರೆಗಳಲ್ಲಿ ಅಲೆದಾಡುವ ಸ್ಥಿತಿ ಇದೆ. ಆದ್ದರಿಂದ ಅದಕ್ಕೆಂದೇ ಪ್ರತ್ಯೇಕ ಕೌಂಟರ್ ಅಥವಾ ಘೋಷಣೆ ವ್ಯವಸ್ಥೆ ಮಾಡಿದರೆ ಬಡವರಿಗೆ ಅನುಕೂಲವಾಗುತ್ತದೆ ಎಂದರು.
ಡಿಎಸ್ ಡಾ.ನಾಗರಾಜ್ ಮಾತನಾಡಿ, ಶವ ಮತ್ತು ಇತರೆ ಎಮರ್ಜೆನ್ಸಿ ಪ್ರಕರಣಗಳನ್ನು ಎ ಕೆಟಗರಿ ಎಂದು ಪರಿಗಣಿಸಿ ಎಸ್ಎಸ್ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ ಎಂದರು.
ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಮಾತನಾಡಿ, ಜಿಲ್ಲೆಯಲ್ಲಿ ಸರಾಸರಿ ವಾಡಿಕೆ ಮಳೆ 100 ಮಿ.ಮೀ ಆಗಬೇಕಿತ್ತು 107 ಮಿ.ಮೀ ವಾಸ್ತವ ಮಳೆಯಾಗಿದೆ. ಹರಿಹರದಲ್ಲಿ ಶೇ.27 ಕೊರತೆ ಇದೆ. ಎಲ್ಲೆಡೆ ಮಳೆಯಾದ ಕಾರಣ ಬಿತ್ತನೆ ಆರಂಭವಾಗಿದೆ.ಪ್ರಸಕ್ತ ಸಾಲಿಗೆ 40 ಸಾವಿರ ಕ್ವಿಂಟಾಲ್ ದಾಸ್ತಾನು ಅವಶ್ಯಕತೆ ಇದ್ದು 35500 ಈಗಾಗಲೇ ದಾಸ್ತನು ಇದೆ.ಕೊರತೆ ಇಲ್ಲ. ರಸಗೊಬ್ಬರ 39 ಸಾವಿರ ಟನ್ ದಾಸ್ತಾನು ಅವಶ್ಯಕತೆ ಇದ್ದು 33780 ದಾಸ್ತಾನು ಇದೆ.ಇದೂ ಸಹ ಕೊರತೆ ಇಲ್ಲ ಎಂದರು.ಸಭೆಯಲ್ಲಿ ಜಿ.ಪಂ. ಉಪಕಾರ್ಯದರ್ಶಿ ಆನಂದ್ 15 ನೇ ಹಣಕಾಸು ಆಯೋಗದ ಅನುದಾನದ ಕುರಿತಾದ ಮಾರ್ಗಸೂಚಿಗಳನ್ನು ಸಭೆಯಲ್ಲಿ ತಿಳಿಸಿದರು. ಸಭೆಯಲ್ಲಿ ಜಿ.ಪಂ.ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








