ಬೆಂಗಳೂರು:
ಸೀಲ್‌ಡೌನ್ ಆಗಿರುವ ಪಾದರಾಯನಪುರ ನಿವಾಸಿಗಳ ಜತೆ ಸಂಪರ್ಕ ಹೊಂದಿದ್ದ ಬಿಬಿಎಂಪಿ ಕಾರ್ಪೋರೇಟರ್ ಕೋವಿಡ್-19 ದೃಢಪಟ್ಟಿರುವ ಹಿನ್ನೆಲೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ತಬ್ಲಿಘ್ ಜಮಾತ್‌ನಲ್ಲಿ ಭಾಗಿಯಾಗಿದ್ದವರಿಂದಾಗಿ ಕರೊನಾ ಸೋಂಕಿನ ಪ್ರಕರಣ ಹೆಚ್ಚಾಗಿದ್ದ ಪಾದರಾಯನಪುರ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿತ್ತು.
.ಈ ಪ್ರದೇಶದೊಂದಿಗೆ ಕಾರ್ಪೋರೇಟರ್ ನಿತ್ಯ ಸಂಪರ್ಕದಲ್ಲಿದ್ದರು. ಕೊರೊನಾ ವೈರಸ್ ಕಿಟ್ ಗಳನ್ನು ವಿತರಿಸಲು ತೆರಳಿದ್ದ ವೇಳೆ ಕಾರ್ಪೋರೇಟರ್ ಇಮ್ರಾನ್ ಪಾಷಾರಿಗೆ ಮಹಾಮಾರಿ ಅಂಟಿಕೊಂಡಿತಾ ಎಂಬ ಅನುಮಾನ ವ್ಯಕ್ತವಾಗಿತ್ತು. ಇತ್ತೀಚೆಗೆ ಅವರಿಗೆ ಸೋಂಕಿನ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಶುಕ್ರವಾರ ಬಂದ ವರದಿಯಂತೆ ಸೋಂಕಿರುವುದು ದೃಢಪಟ್ಟಿದೆ.
ಬರೋಬ್ಬರಿ 12 ಗಂಟೆ ಬಳಿಕ ಕೊರೊನಾ ಸೋಂಕಿತರಾದ ಕಾರ್ಪೋರೇಟರ್ರನ್ನು ಆಂಬುಲೆನ್ಸ್ ಮೂಲಕ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಪಿಪಿಇ ಕಿಟ್ ಧರಿಸಿ ಜನರ ಕಡೆಗೆ ಕೈ ಬೀಸಿ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಹೊರಟರು. ಇದೀಗ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಕುಟುಂಬದವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
ಅವರ ಮನೆ ಹಾಗೂ ಸುತ್ತಮುತ್ತಲ ಪ್ರದೇಶಕ್ಕೆ ಸೋಂಕು ನಿವಾರಕ ಸಿಂಪರಣೆ ಮಾಡಲಾಗಿದೆ. ಅವರ ಸಂಪರ್ಕಿತರನ್ನು ಕ್ವಾರಂಟೈನ್‌ಗೆ ಕಳುಹಿಸುವ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡುತ್ತಿದ್ದಾರೆ.
ಜೆಡಿಎಸ್ ಸದಸ್ಯರಾಗಿರುವ ಅವರು ಸ್ಥಳೀಯ ಶಾಸಕರೊಂದಿಗೂ ಸಂಪರ್ಕದಲ್ಲಿದ್ದರು. ಅವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ಪತ್ತೆ ಹಚ್ಚುವುದೇ ಬಿಬಿಎಂಪಿ ಅಧಿಕಾರಿಗಳಿಗೆ ತಲೆನೋವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ