ಹುಳಿಯಾರು
ಹುಳಿಯಾರು ಹೋಬಳಿಯಲ್ಲಿ ಪೂರ್ವ ಮುಂಗಾರು ಮಳೆ ಚುರುಕು ಪಡೆದಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ. ಮುಂಗಾರು ಹಂಗಾಮು ಬಿತ್ತನೆಗೆ ರೈತರು ಭೂಮಿ ಸಜ್ಜುಗೊಳಿಸುವ ಹಾಗೂ ಬೀಜ ಬಿತ್ತುವ ಹಾಗೂ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ತಾಲ್ಲೂಕಿನ ಹಿಂಗಾರು ಬೆಳೆಗಳ ಕೊಯ್ಲು ಮುಗಿಯುವ ಹೊತ್ತಿಗೆ ಕೊರೊನಾ ಸೋಂಕು ನಿಯಂತ್ರಿಸಲು ದೇಶದಲ್ಲಿ ಲಾಕ್‍ಡೌನ್ ಘೋಷಣೆ ಮಾಡಲಾಗಿತ್ತು. ಇದರಿಂದ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಈಗ ರೋಹಿಣಿ ಮಳೆ ಹೋಬಳಿಯಾದ್ಯಂತ ಉತ್ತಮವಾಗಿ ಸುರಿದಿದ್ದು ರೈತರ ಹಾಗೂ ಕೃಷಿ ಕಾರ್ಮಿಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಹಾಗಾಗಿ ರೈತರು ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.
ಕಳೆದ ಹದಿನೈದು ದಿನದಲ್ಲೊಮ್ಮೆ ಉತ್ತಮ ಮಳೆಯಾದ ಪರಿಣಾಮ ಹೋಬಳಿಯ ರೈತರು ಎತ್ತುಗಳು ಮತ್ತು ಟ್ರಾಕ್ಟರ್ ಮೂಲಕ ಹೊಲಗಳನ್ನು ಹದಗೊಳಿಸಿ ಬೀಜ ಬಿತ್ತನೆಗೆ ಮಳೆ ಎದುರು ನೋಡುತ್ತಿದ್ದರು. ಅಕ್ಕಪಕ್ಕದ ತಾಲೂಕುಗಳಲ್ಲಿ ಕೃತಿಕಾ ಮಳೆಯಾಗಿದ್ದರೂ ಸಹ ಹುಳಿಯಾರು ಹೋಬಳಿಯಲ್ಲಿ ಮಳೆಯಾಗದೆ ರೈತರಲ್ಲಿ ಆತಂಕ ನಿರ್ಮಾಣವಾಗಿತ್ತು.
ಕೃತಿಕ ಮಳೆ ಕೈಕೊಟ್ಟರೂ ಸಹ ರೋಹಿಣಿ ಮಳೆ ಹುಳಿಯಾರು ಹೋಬಳಿಯ ರೈತರ ಕೈ ಹಿಡಿದಿದೆ. ಆರಂಭದಲ್ಲಿಯೇ ಹೋಬಳಿಯಲ್ಲಿ ಉತ್ತಮ ಮಳೆಯಾಗುವ ಮೂಲಕ ಪೂರ್ವ ಮುಂಗಾರು ಕೈ ಹಿಡಿಯುವ ಭರವಸೆಯನ್ನು ರೈತರಲ್ಲಿ ಮೂಡಿಸಿದೆ. ಈಗಾಗಲೇ ರೈತ ಸಂಪರ್ಕ ಕೇಂದ್ರಆಲ್ಲಿ ಹೆಸರು 7310 ಕೆ.ಜಿ, ತೊಗರಿ 840 ಕೆ.ಜಿ, ಅಲಸಂದೆ 300 ಕೆ.ಜಿ ಮಾರಾಟವಾಗಿದ್ದು ರೈತರು ಕೃಷಿ ಕಡೆ ಮುಖ ಮಾಡಿರುವ ನಿದರ್ಶನವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ