ಜಿ7 ಶೃಂಗ ಸಭೆ ಮುಂದೂಡಿಕೆ..!

ವಾಷಿಂಗ್ಟನ್:

     ಶ್ವೇತಭವನದಲ್ಲಿ ಮುಂದಿನ ತಿಂಗಳು ನಡೆಸಲು ಉದ್ದೇಶಿಸಿದ್ದ ಜಿ7 ಶೃಂಗಸಭೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದೂಡಿದ್ದಾರೆ. ಜಿ7 ಶೃಂಗ ರಾಷ್ಟ್ರಗಳೊಂದಿಗೆ ಇಂದು ವಿಶ್ವದ ಆರ್ಥಿಕತೆಯಲ್ಲಿ ಗುರುತಿಸಿಕೊಂಡಿರುವ ಭಾರತ ಮತ್ತು ಇತರ ಕೆಲವು ದೇಶಗಳನ್ನು ಸೇರಿಸುವಂತೆ ಅವರು ಕೋರಿದ್ದಾರೆ.

     ಈ ಬಗ್ಗೆ ನಿನ್ನೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಟ್ರಂಪ್, ಜಿ7 ಶೃಂಗಸಭೆಯನ್ನು ಸೆಪ್ಟೆಂಬರ್ ವರೆಗೆ ಮುಂದೂಡಲಾಗುವುದು, ನಂತರ ನಡೆಸುವ ಶೃಂಗಸಭೆಗೆ ಭಾರತ ಸೇರಿದಂತೆ ರಷ್ಯಾ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾಗಳನ್ನು ಸಹ ಆಹ್ವಾನಿಸಲು ಯೋಚಿಸುತ್ತಿರುವುದಾಗಿ ಹೇಳಿದ್ದಾರೆ.

    ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೆ ತಕ್ಕುದಾಗಿ ಜಿ7 ಪ್ರತಿನಿಧಿಸುತ್ತದೆ ಎಂದು ನನಗೆ ಅನ್ನಿಸುವುದಿಲ್ಲ, ಅದು ಹಳೆಯದಾಗಿದೆ ಎಂದು ಭಾಸವಾಗುತ್ತಿದೆ. ಇದು ಬಹಳ ಹಳೆಯದಾದ ದೇಶಗಳ ಗುಂಪಾಗಿದೆ ಎಂದು ಅಭಿಪ್ರಾಯಪಟ್ಟರು.
ವಿಶ್ವದ ಅತ್ಯಂತ ಸುಧಾರಿತ ಮತ್ತು ಆರ್ಥಿಕವಾಗಿ ಪ್ರಬಲವಾಗಿರುವ ದೇಶಗಳಾದ ಅಮೆರಿಕ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಇಂಗ್ಲೆಂಡ್ ಮತ್ತು ಕೆನಡಾ ದೇಶಗಳನ್ನು ಒಟ್ಟು ಸೇರಿಸಿ ಜಿ7 ಶೃಂಗರಾಷ್ಟ್ರಗಳನ್ನಾಗಿ ರಚಿಸಲಾಗಿತ್ತು. ಈ ದೇಶಗಳ ಮುಖ್ಯಸ್ಥರು ವರ್ಷಕ್ಕೊಂದು ಬಾರಿ ಸಭೆ ಸೇರಿ ಅಂತರಾಷ್ಟ್ರೀಯ ಆರ್ಥಿಕತೆ ಮತ್ತು ವಿತ್ತೀಯ ವಿಷಯಗಳ ಬಗ್ಗೆ ಚರ್ಚೆ ನಡೆಸಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ.

     ಈ ವರ್ಷದ ಜಿ7 ಶೃಂಗಸಭೆಯ ಆತಿಥ್ಯ ಅಮೆರಿಕ ವಹಿಸಲಿದೆ. ಸಾಮಾನ್ಯವಾಗಿ ಈ ಶೃಂಗಸಭೆಗೆ ಅಧ್ಯಕ್ಷರು ಪ್ರತಿವರ್ಷ ಒಂದು ಅಥವಾ ಎರಡು ರಾಷ್ಟ್ರಗಳ ಮುಖ್ಯಸ್ಥರನ್ನು ವಿಶೇಷ ಆಹ್ವಾನಿತರಾಗಿ ಆಹ್ವಾನಿಸುತ್ತಾರೆ. ಕಳೆದ ವರ್ಷ ಫ್ರಾನ್ಸ್ ನಲ್ಲಿ ನಡೆದ ಶೃಂಗಸಭೆಗೆ ಪ್ರಧಾನಿ ಮೋದಿಯವರಿಗೆ ವಿಶೇಷ ಆಹ್ವಾನ ನೀಡಲಾಗಿತ್ತು.

    ಇದೀಗ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಕೂಡ ಈ ವರ್ಷದ ಶೃಂಗಸಭೆಗೆ ಪ್ರಧಾನಿ ಮೋದಿಯವರನ್ನು ಆಹ್ವಾನಿಸುತ್ತಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸ್ಥಾನಮಾನ ಹೆಚ್ಚಾಗುತ್ತಿರುವುದನ್ನು ತೋರಿಸುತ್ತದೆ ಎನ್ನಬಹುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap