ಬೆಂಗಳೂರು:
ವಲಸೆ ಕಾರ್ಮಿಕರ ಹಿತವನ್ನು ಕಾಯುವಲ್ಲಿ ಹಾಗೂ ಕೋವಿಡ್ 19 ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಕೋವಿಡ್-19 ಸಂಕಷ್ಟಗಳನ್ನು ಎದುರಿಸುವಲ್ಲಿ ಸರ್ಕಾರಗಳು ವಿಫಲವಾಗಿದ್ದು, ಸಮರ್ಪಕ ಯೋಜನೆಗಳನ್ನು ಕೈಗೊಳ್ಳದೇ ಇರುವುದನ್ನು ಖಂಡಿಸಿ ಜನರ ಮುಂದೆ ಇಡುವಂತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಎಐಸಿಸಿ ನಿರ್ದೇಶನ ನೀಡಿದ್ದು, ಈ ಹಿನ್ನೆಲೆಯಲ್ಲಿ ಖರ್ಗೆ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು.
ಕೋವಿಡ್ -19ನಿಂದ ಇಡೀ ದೇಶದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಕೂಲಿ ಕಾರ್ಮಿಕರು ಅನೇಕ ಸಮುದಾಯ ವೃತ್ತಿದಾರರು ಬಹಳ ತೊಂದರೆಯಲ್ಲಿ ಇದ್ದಾರೆ. ಸಣ್ಣ ಕೈಗಾರಿಕೆಗಳು ಮತ್ತು ಅಸಂಘಟಿತ ಕಾರ್ಮಿಕರಿಗೆ ಭಾರಿ ತೊಂದರೆ ಅನುಭವಿಸುತ್ತಿದ್ದಾರೆ. ವಲಸೆ ಕಾರ್ಮಿಕರ ಜೀವನ ಅಸ್ತವ್ಯಸ್ತ ಆಗಿದೆ. ರೈತರು ಮತ್ತು ರೈತ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಇವ್ಯಾವುದಕ್ಕೂ ತಲೆಕೆಡಿಸಿಕೊಂಡಂತಿಲ್ಲ ಎಂದು ಖರ್ಗೆ ಟೀಕಿಸಿದರು.
ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ಒತ್ತಾಯಿಸಿದ ಮೇರೆಗೆ ಕಾರ್ಮಿಕರಿಗೆ ರೈಲು ಸಂಚಾರ ಆರಂಭಿಸಲಾಯಿತು. ಕೊರೊನಾ ಪ್ರಕರಣಗಳು ಕಡಿಮೆ ಇದ್ದಾಗ ಲಾಕ್ ಡೌನ್ ಬಿಗಿಗೊಳಿಸಿ ಈಗ ಪ್ರಕರಣ ಹೆಚ್ಚಾದ ಬಳಿಕ ನಿರ್ಬಂಧ ಸಡಿಲಿಸಿದ್ದು, ದೇಶದ ಎಲ್ಲಾ ವರ್ಗದ ಜನರಿಗೆ ತೊಂದರೆಗೀಡು ಮಾಡಲೆಂದೇ ಕೇಂದ್ರ ಸರ್ಕಾರ ಇಂತಹ ನಿರ್ಣಯ ಮಾಡಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಹಕನ ಬಳಿ ಹಣ ಇದ್ದಾಗ ಮಾತ್ರ ಖರೀದಿಸುವ ಶಕ್ತಿ ಬರಲಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಯಾಗಲಿದೆ. ಆದರೆ ಈಗ ಜನರ ಬಳಿ ಹಣ ಇಲ್ಲದೇ ಬೇಡಿಕೆ ಕುಸಿತ ಕಂಡಿದೆ. 13 ಸಾವಿರ ಪ್ಯಾಸೆಂಜರ್ ರೈಲಿನಲ್ಲಿ 2.30 ಕೋಟಿ ಜನ ಪ್ರತಿದಿನ ಸಂಚರಿಸುತ್ತಿದ್ದಾರೆ. ಸರ್ಕಾರಗಳು ವಲಸಿಗ ಕಾರ್ಮಿಕರನ್ನು 4-5ದಿನಗಳಲ್ಲಿ ಪ್ಯಾಸೆಂಜರ್ ಟ್ರೈನ್ ಲ್ಲಿ ಕಳುಹಿಸಿ ಕೊಡಬಹುದಿತ್ತು. ಲಾಕ್ ಡೌನ್ ಗೂ ಮೊದಲು ಅವರನ್ನು ಅವರ ಸ್ಥಳಗಳಿಗೆ ತಲುಪಿಸಬಹುದಿತ್ತು. ಆದರೆ ಸರ್ಕಾರ ಹೀಗೆ ಮಾಡಲಿಲ್ಲ. ಏಕಾಏಕಿ ಲಾಕ್‌ಡೌನ್ ಘೋಷಿಸಿ ಅವರನ್ನು ಸಂಕಷ್ಟಕ್ಕೀಡು ಮಾಡಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲಾಕ್ ಡೌನ್ ಸಮಯದಲ್ಲಿ ಸರ್ಕಾರ ಸರಿಯಾದ ನಿರ್ಧಾರಗಳನ್ನು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದರೆ ಬೀದಿಗಳಲ್ಲಿ ಕಾರ್ಮಿಕರ ಸಾವು, ರಸ್ತೆಯಲ್ಲಿ ಹೆರಿಗೆಯಂತಹ ಘಟನೆಗಳು ಸಂಭವಿಸುತ್ತಿರಲಿಲ್ಲ. ರೈಲ್ವೆ ಹಳಿಗಳ ಮೇಲೆ ಸಾವುಗಳು ಸಂಭವಿಸುತ್ತಿರಲಿಲ್ಲ. ಅನ್ನ ಮತ್ತು ನೀರಿಲ್ಲದೇ ಜನರು ಸಾಯುತ್ತಿರಲಿಲ್ಲ ಎಂದು ಕೇಂದ್ರ ಸರ್ಕಾರದ ನಡೆ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಟೀಕಾಪ್ರಹಾರ ನಡೆಸಿದರು.
ಬಾಂಬೆಯಿಂದ ಲಖನೌಗೆ ಹೋಗುವ ರೈಲು ಬಿಹಾರಕ್ಕೆ ಹೋಯಿತು. 24ಗಂಟೆಗೆ ಹೋಗಬೇಕಿದ್ದ ರೈಲು 74 ಗಂಟೆಗೆ ತಲುಪಿದೆ. ಇಷ್ಟೊಂದು ವಿಳಂಬವಾದರೆ ರೈಲಿನಲ್ಲಿ ಪ್ರಯಾಣಿಸುವವರ ಗತಿಯೇನು? ಎನ್ನುವುದನ್ನು ಸರ್ಕಾರ ಯೋಚಿಸಲಿಲ್ಲ. ಬಿಜೆಪಿ ನಾಯಕರ ಕಿವಿ , ಕಣ್ಣು ಮುಚ್ಚಿವೆ. ಆದರೆ ಬಾಯಿ ಮಾತ್ರ ತೆರೆದಿದೆ. ಕೇಂದ್ರ ಸರ್ಕಾರದ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣ್ಯ ಅವರೇ ಹೇಳಿರುವಂತೆ ದೇಶದ ಜಿಡಿಪಿ ಕೆಳಮಟ್ಟಕ್ಕೆ ಕುಸಿದಿದೆ. ಆದರೆ ಈ ಬಗ್ಗೆ ಸರ್ಕಾರಕ್ಕೆ ಯಾವುದೇ ತಲೆಬಿಸಿ ಇಲ್ಲ ಎಂದು ಹರಿಹಾಯ್ದರು.
ಪ್ರಧಾನಿ ನರೇಂದ್ರ ಮೋದಿ ಗುಜರಾತಿಗೆ ಅಮೇರಿಕಾದ ಅಧ್ಯಕ್ಷ ಟ್ರಂಪ್‌ರನ್ನು ಕರೆಯಿಸಿ ಶೋ ಮಾಡಿದರು. ಆಮೇಲೆ ಲಾಕ್ ಡೌನ್ ಘೋಷಣೆ ಮಾಡಿದರು. ಸರ್ಕಾರ ತೋರಿಕೆಗೆ ಕೆಲಸ ಮಾಡುತ್ತದೆಯೇ ಹೊರತು ನಿಜಕ್ಕೂ ಜನರಿಗಾಗಿ ಕೆಲಸ ಮಾಡುತ್ತಿಲ್ಲ ಎಂದು ಖರ್ಗೆ ಆರೋಪಿಸಿದರು.
ಜನರಿಗೆ ವಾಸ್ತವಿಕ ಅಂಶಗಳನ್ನು ತಿಳಿಸಬೇಕು. ಈ ಸರ್ಕಾರದಿಂದ ವಲಸೆ ಕಾರ್ಮಿಕರ ಬದುಕು ದುಸ್ತರವಾಗಿದೆ. ಸರ್ಕಾರ ವಲಸೆ ಕಾರ್ಮಿಕರಿಗೆ ಮೋಸ ಮಾಡಿದೆ. ಕೂಡಲೇ ರೈಲ್ವೆ ಸಚಿವರು ರಾಜೀನಾಮೆ ಕೊಡಬೇಕು. 13 ಸಾವಿರ ರೈಲು ಇವೆಯಾದರೂ ಅವನ್ನು ಸಮರ್ಪಕವಾಗಿ ಬಳಸುತ್ತಿಲ್ಲ. ವಲಸೆ ಕಾರ್ಮಿಕರ ಹಿತವನ್ನು ಕಾಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಖರ್ಗೆ ಆರೋಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ