ಆಹಾರದ ಕಿಟ್ ವಿತರಣೆಯಲ್ಲಿ ಆಡಳಿತ ಯಂತ್ರ ಸಂಪೂರ್ಣ ವಿಫಲ : ರಾಮಲಿಂಗಾ ರೆಡ್ಡಿ

ಬೆಂಗಳೂರು

     ಕೊರೋನಾ ಲಾಕ್ ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರಿಗೆ ಆಹಾರದ ಕಿಟ್ ನೀಡುವಲ್ಲಿ ಸರ್ಕಾರ, ಬಿಬಿಎಂಪಿ ವಿಫಲವಾಗಿದ್ದು, ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ತಾರತಮ್ಯ ಮಾಡಿ ಕಡಿಮೆ ಆಹಾರದ ಕಿಟ್ ವಿತರಿಸಲಾಗಿದೆ ಎಂದು ಮಾಜಿ ಸಚಿವ ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.

      ಕೆಪಿಸಿಸಿ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ, ಬಿಬಿಎಂಪಿ ಹಾಗೂ ಕಾರ್ಮಿಕ ಇಲಾಖೆ ಸೇರಿ 7 ಲಕ್ಷ ಆಹಾರದ ಕಿಟ್ ನೀಡಿದೆ. ಆದರೆ, ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳಿಗೆ ಮಾತ್ರ ಕಡಿಮೆ ನೀಡಿದ್ದಾರೆ. 10 ಜನ ಶಾಸಕರ ಕ್ಷೇತ್ರಗಳಿಗೆ ಕೇವಲ 50 ಸಾವಿರ ಕಿಟ್ ನೀಡಲಾಗಿದೆ. ಉಳಿದ ಕಿಟ್‍ಗಳನ್ನು ಬಿಜೆಪಿ ಕಾರ್ಯಕರ್ತರು ಹಂಚಿಕೊಂಡಿದ್ದಾರೆ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ವಲಸೆ ಕಾರ್ಮಿಕರು ಇಲ್ಲವೇ? ಕಾಂಗ್ರೆಸ್ ನಿಂದಲೇ ಸುಮಾರು 10 ಲಕ್ಷ ಆಹಾರ ಪದಾರ್ಥಗಳ ಕಿಟ್‍ಗಳನ್ನು ವಿತರಿಸಲಾಗಿದೆ ಎಂದರು.

        ವಲಸೆ ಕಾರ್ಮಿಕರನ್ನು ಸರ್ಕಾರ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಅನೇಕ ಕಾರ್ಮಿಕರು ಊರುಗಳಿಗೆ ತೆರಳಲು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಲಾಕ್ ಡೌನ್ ಸಮಯದಲ್ಲಿ ಕಾಂಗ್ರೆಸ್ ನಿಂದ 5.85 ಲಕ್ಷ ಮಾಸ್ಕ್, 93 ಲಕ್ಷ ಆಹಾರ ಪಾಕೆಟ್, 10 ಲಕ್ಷ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಯಿತು. ರೈತರಿಗೆ ತೊಂದರೆ ಆಗಿರುವುದನ್ನು ಪರಿಹರಿಸಲು 1312 ಟನ್ ತರಕಾರಿ ಖರೀದಿಸಿ ಜನರಿಗೆ ಹಂಚಿಕೆ ಮಾಡಲಾಗಿದೆ ಎಂದರು.

      ಈಗ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೇ 31ರವರೆಗೂ ಲಾಕ್ ಡೌನ್ ಬಿಗಿಯಾಗಿರಬೇಕಿತ್ತು. ಬೇಗ ಸಡಿಲಿಕೆ ಮಾಡಿರುವುದರಿಂದ ರಾಜ್ಯದಲ್ಲಿ ಸಮುದಾಯದ ಮಟ್ಟದಲ್ಲಿ ಹರಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

      ಶಾಲೆಗಳನ್ನು ತೆರೆಯುವ ವಿಚಾರದಲ್ಲಿ ಸರ್ಕಾರ ಅವಸರ ಮಾಡುವುದು ಬೇಡ, ಇನ್ನು ಎರಡು ಮೂರು ತಿಂಗಳು ಶಾಲೆಗಳನ್ನು ತೆರೆಯುವುದು ಬೇಡ. ಬೇರೆ ದೇಶಗಳಲ್ಲಿ ಶಾಲೆ ಪ್ರಾರಂಭವಾದ ನಂತರ ಮಕ್ಕಳಿಗೆ ಕೊರೋನಾ ಸೋಂಕು ಹೆಚ್ಚಾಗಿದೆ. ಹೀಗಾಗಿ ಸರ್ಕಾರ ಶಾಲೆ ತೆರೆಯಲು ಅವಸರ ಮಾಡದಂತೆ ರಾಮಲಿಂಗಾರೆಡ್ಡಿ ಸರ್ಕಾರಕ್ಕೆ ಸಲಹೆ ನೀಡಿದರು.

      ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಭ್ಯರ್ಥಿಯನ್ನಾಗಿ ಹೈಕಮಾಂಡ್ ಅಂತಿಮ ಮಾಡಿದೆ. ಇದನ್ನು ಏಕಾಏಕಿ ಘೋಷಣೆ ಎನ್ನಲಾಗುವುದಿಲ್ಲ. ಈಗೆಲ್ಲ ಮೊಬೈಲ್ ಇದೆ. ಅದರಲ್ಲಿಯೆ ಅಭಿಪ್ರಾಯ ಕೇಳುತ್ತಾರೆ. ಖರ್ಗೆ ಹೆಸರು ಮುನ್ನೆಲೆಗೆ ಬಂದ ಬಳಿಕ ಅದೆ ಅಂತಿಮವಾಗಿದೆ.

    ಖರ್ಗೆ ಒಬ್ಬ ಉತ್ತಮ ಸಂಸದೀಯ ಪಟು. ಅಂತಹವರು ಸಂಸತ್ ಮತ್ತು ರಾಜ್ಯಸಭೆಯಲ್ಲಿ ಇರಬೇಕು. ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಖರ್ಗೆ ಅವರನ್ನು ಟಾರ್ಗೆಟ್ ಮಾಡಿ ಸೋಲಿಸಿತು. ಆಡಳಿತ ಮತ್ತು ವಿಪಕ್ಷದ ನಡುವೆ ಹೋರಾಟ ಇರಬೇಕು. ಆದರೆ ಈಗ ಸರ್ಕಾರವನ್ನು ಟೀಕಿಸುತ್ತಾರೆ ಎನ್ನುವ ಕಾರಣಕ್ಕಾಗಿ ಸೋಲಿಸುವ ರಾಜಕಾರಣ ನಡೆಯುತ್ತಿದೆ ಎಂದು ಆಪಾದಿಸಿದರು.

      ನಮ್ಮಲ್ಲಿ ಹೆಚ್ಚು ಮತಗಳು ಇವೆ. ಹೈಕಮಾಂಡ್ ಜೆಡಿಎಸ್ ಅನ್ನು ಬೆಂಬಲಿಸುವ ಬಗ್ಗೆ ತೆಗೆದುಕೊಳ್ಳುವ ಎಲ್ಲಾ ರೀತಿಯ ತೀರ್ಮಾನಕ್ಕೆ ತಾವು ಬದ್ಧ. ದೇವೇಗೌಡರಂತಹವರು ಸಂಸತ್‍ನಲ್ಲಿ ಇರಬೇಕು ಎಂದು ರಾಮಲಿಂಗಾರೆಡ್ಡಿ ಸೂಚ್ಯವಾಗಿ ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link