ದಾವಣಗೆರೆ:

ಅವಕಾಶವಾದಿ ರಾಜಕಾರಣದಲ್ಲಿತೊಡಗಿರುವಮುಖ್ಯಮಂತ್ರಿಗಳರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತುಘಲಕ್ ದರ್ಬಾರ್ ನಡೆಸುತ್ತಿದ್ದು, ಇವರಿಗೆಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ ತಿಳಿಸಿದ್ದಾರೆ.
ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣ, ಅಧಿಕಾರದ ಆಮಿಷ ತೋರಿಸಿ ಶಾಸಕರ ಆಪರೇಷನ್ ಮಾಡುವ ಮೂಲಕ ಹಿಂಬಾಗಿಲ ಮೂಲಕ ಆಡಳಿತಕ್ಕೆ ಬರುವುದು ಕಾಂಗ್ರೆಸ್ ಸಂಸ್ಕೃತಿ ಅಲ್ಲ. ಕಾಂಗ್ರೆಸ್-ಜೆಡಿಎಸ್ ಸರ್ಕಾರವನ್ನು ಅಭದ್ರಗೊಳಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ.ಹಿಂದೆ 2013ರಲ್ಲೂ ಬಹುಮತ ಸಿಗದ ಸಂದರ್ಭದಲ್ಲಿ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಖರೀದಿಸಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು.ಆಗ ಇದೇ ರೇಣುಕಾಚಾರ್ಯ ರೆಸಾರ್ಟ್ ರಾಜಕೀಯ ಮಾಡಿದ್ದರು.ಇಂತಹವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎಂದರು.
ದೇವರಾಜ ಅರಸು ನಂತರ ಸಿದ್ದರಾಮಯ್ಯ ರಾಜ್ಯಕ್ಕೆ 5 ವರ್ಷಗಳ ಸುಭದ್ರ ಆಡಳಿತ ನೀಡಿದ್ದರು.ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 165 ಅಂಶಗಳಲ್ಲಿ 150ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದರು.ಜನಪರ ಯೋಜನೆಗಳ ಮೂಲಕ ಎಲ್ಲ ವರ್ಗದವರಿಗೂ ಅನುಕೂಲ ಕಲ್ಪಿಸಿದ್ದರು. ಆದರೆ ಅಭಿವೃದ್ಧಿಯ ಅಜೆಂಡಾ ಇಲ್ಲದ ಬಿಜೆಪಿಯವರು ಐದಾರು ತಿಂಗಳಲ್ಲೇ ಅಧಿಕಾರಕ್ಕಾಗಿ ಕಿತ್ತಾಟ ನಡೆಸಿದ್ದಾರೆ.ಅಂತಹ ಸಿದ್ದರಾಮಯ್ಯ ಬಗ್ಗೆ ಮಾತನಾಡುವ ಯೋಗ್ಯತೆಯೂ ರೇಣುಕಾಚಾರ್ಯಗೆ ಇಲ್ಲ ಎಂದು ಕಿಡಿಕಾರಿದರು.
ಶಾಸಕ ಎಂ.ಪಿ.ರೇಣುಕಾಚಾರ್ಯ ಹೊನ್ನಾಳಿ ತಾಲ್ಲೂಕಿನಲ್ಲಿ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ.ನಿಯಮ ಬಾಹಿರವಾಗಿ ಎಸ್ಕಾರ್ಟ್, ಗನ್ ಮ್ಯಾನ್ ಪಡೆದು ರಾಜಕೀಯ ಗಿಮಿಕ್‍ಗಾಗಿ ಕೊರೋನಾ ಜಾಗೃತಿ ಮಾಡುತ್ತಿದ್ದಾರೆ.ಯುದ್ಧ ಗೆದ್ದವರಂತೆ ಅಧಿಕಾರಿಗಳಿಂದ ಹೂವು ಹಾಕಿಸಿಕೊಳ್ಳುತ್ತಿದ್ದಾರೆ.ಅಧಿಕಾರಿಗಳು ಕಚೇರಿಗಳಲ್ಲಿ ಲಭ್ಯವಿಲ್ಲದೆ ವರ್ಗಾವಣೆ ಭಯದಿಂದ ಶಾಸಕರ ಹಿಂದೆ ತಿರುಗುವಂತಾಗಿದೆ.ಹೊನ್ನಾಳಿ ಶಾಸಕರಿಗೆ ನಿಜವಾದ ಜನಪರ ಕಾಳಜಿ ಇದ್ದರೆ ಖರೀದಿ ಕೇಂದ್ರ ಪ್ರಾರಂಭಿಸಿ, ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕು.ರಾಜಕೀಯ ದೊಂಬರಾಟ ನಿಲ್ಲಿಸಿ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ, ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅನಿತಾಬಾಯಿ ಮಾಲತೇಶ್, ಮುಖಂಡರಾದ ಅಯೂಬ್ ಪೈಲ್ವಾನ್, ಆಶಾ ಮುರಳಿ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








