ವಾಷಿಂಗ್ಟನ್:
ಆಫ್ರಿಕನ್-ಅಮೆರಿಕಾದ ಪ್ರಜೆ ಜಾರ್ಜ್ ಫ್ಲಾಯ್ಡ್ ಹತ್ಯೆ ವಿರೋಧಿಸಿ ಅಮೆರಿಕ ರಾಷ್ಟ್ರದಾದ್ಯಂತ ಪ್ರತಿಭಟನೆ ನಡೆಯುತ್ತಿರುವಂತೆ ಅಪರಿಚಿತ ಕಿಡಿಗೇಡಿಗಳು ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ವಿರೂಪಗೊಳಿಸಿ ಅಪಮಾನ ಮಾಡಿದ್ದಾರೆ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಭಾರತೀಯ ರಾಯಭಾರಿ ಕಚೇರಿ ಬಳಿಯ ಉದ್ಯಾನವನದಲ್ಲಿ ಸ್ಥಾಪಿಸಲಾಗಿರುವ ಮಹಾತ್ಮ ಗಾಂಧಿ ಪ್ರತಿಮೆಯನ್ನು ಜೂನ್ 2 ಮತ್ತು ಜೂನ್ 3ರ ಮಧ್ಯರಾತ್ರಿ ಧ್ವಂಸಗೊಳಿಸಲಾಗಿದ್ದು, ಸ್ಥಳೀಯ ಕಾನೂನು ಜಾರಿ ಏಜೆನ್ಸಿಯಲ್ಲಿ ಭಾರತೀಯ ರಾಯಭಾರಿ ಅಧಿಕಾರಿಗಳಿಂದ ದೂರು ದಾಖಲಿಸಲಾಗಿದೆ. ಪೊಲೀಸ್ ಕಸ್ಟಡಿಯಲ್ಲಿದ್ದ ಜಾರ್ಜ್ ಫ್ಲಾಯ್ಡ್ ಹತ್ಯೆ ವಿರೋಧಿಸಿ ಅಮೆರಿಕದಾದ್ಯಂತ ಒಂದು ವಾರದಿಂದ ನಡೆಯುತ್ತಿರುವ ಪ್ರತಿಭಟನೆ ನಡುವೆ ಈ ಘಟನೆ ನಡೆದಿದೆ.
ಈ ಘಟನೆ ಬಗ್ಗೆ ಶ್ವೇತಭವನದಲ್ಲಿ ಪ್ರತಿಕ್ರಿಯಿಸಿದ ಡೊನಾಲ್ಡ್ ಟ್ರಂಪ್, ಇದೊಂದು ಅಪಮಾನವಾಗಿದೆ ಎಂದರು. ಈ ವಿಚಾರದ ಬಗ್ಗೆ ಶೀಘ್ರವಾಗಿ ತನಿಖೆ ನಡೆಸಬೇಕೆಂದು ಕೋರಿ ಅಮೆರಿಕಾದ ಸ್ಟೇಟ್ ಡಿಪಾರ್ಟ್ ಮೆಂಟ್, ಮೆಟ್ರೊಪಾಲಿಟಿನ್ ಪೊಲೀಸ್ ಮತ್ತು ನ್ಯಾಷನಲ್ ಪಾರ್ಕ್ ಸರ್ವಿಸ್ ನಲ್ಲಿ ಭಾರತೀಯ ರಾಯಭಾರಿ ಅಧಿಕಾರಿಗಳು ದೂರು ಸಲ್ಲಿಸಿದ್ದಾರೆ.
ಅಮೆರಿಕಾದ ಸ್ಟೇಟ್ ಡಿಪಾರ್ಟ್ ಮೆಂಟ್, ಮೆಟ್ರೋಪಾಲಿಟಿನ್ ಪೊಲೀಸ್ ಮತ್ತು ನ್ಯಾಷನಲ್ ಪಾರ್ಕ್ ಸರ್ವಿಸ್ ಜೊತೆಗೆ ಉದ್ಯಾನವನದಲ್ಲಿ ಪ್ರತಿಮೆ ಪುನರ್ ಸ್ಥಾಪಿಸುವ ನಿಟ್ಟಿನಲ್ಲಿ ಭಾರತೀಯ ರಾಯಭಾರಿ ಅಧಿಕಾರಿಗಳು ಮುಂದಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ