ತುಮಕೂರು
ಮಟ್ಕಾ, ಜೂಜಾಟ, ಗಾಂಜಾ, ಡ್ರಗ್ಸ್ ಇನ್ನಿತರ ದಂಧೆಗಳ ಬಗ್ಗೆ ದೂರುಗಳು ಬರುತ್ತಿದ್ದು, ಇಂತಹ ಪ್ರಕರಣಗಳ ಬಗ್ಗೆ ಪೊಲೀಸರು ವಿಶೇಷ ಗಮನ ಹರಿಸಬೇಕು. ದೂರು ಬರುವವರೆಗೂ ಕಾಯದೆ ಸ್ವಯಂ ಪ್ರೇರಿತವಾಗಿ ದಾಳಿ ಮಾಡಿ ಇಂತಹ ದಂಧೆಗಳ ಕಿಂಗ್‍ಪಿನ್‍ಗಳನ್ನು ಪತ್ತೆ ಹಚ್ಚುವ ಕಾರ್ಯ ಮಾಡಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಪೊಲೀಸರಿಗೆ ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್-19 ಲಾಕ್‍ಡೌನ್ ಸಂದರ್ಭದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಎಲ್ಲ ಕಡೆಯೂ ಕಡಿಮೆಯಾಗಿದ್ದವು. ಲಾಕ್‍ಡೌನ್ ಸಡಿಲಗೊಂಡ ನಂತರ ಒಂದೊಂದೇ ಅಪರಾಧ ಪ್ರಕರಣಗಳು ವರದಿಯಾಗುತ್ತಿವೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಎಚ್ಚರ ವಹಿಸಿ ಕೆಲಸ ಮಾಡುವಂತೆ ಸೂಚಿಸಿದ್ದೇನೆ ಎಂದರು.
ಕೊಲೆ, ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆ ಕಾರ್ಯ ಚುರುಕಾಗಬೇಕು. ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಚಾರ್ಜ್‍ಶೀಟ್ ಹಾಕಲು ವಿಳಂಬ ಮಾಡದೆ ಶೀಘ್ರ ಕಾರ್ಯಗತಕ್ಕೆ ಸೂಚನೆ ನೀಡಿದ್ದೇನೆ. ಮಾನವ ಸಾಗಾಣಿಕೆ ಪ್ರಕರಣಗಳ ಬಗ್ಗೆಯೂ ಗಮನ ಹರಿಸುವಂತೆ ತಿಳಿಸಿದ್ದೇನೆ. ಇಂತಹ ಕೆಲವು ಮಾಹಿತಿಯನ್ನು ಚರ್ಚಿಸಿದ್ದು, ಈ ನಿಟ್ಟಿನಲ್ಲಿ ಶೀಘ್ರ ಕಾರ್ಯೋನ್ಮುಖ ರಾಗುವುದಾಗಿ ಐಜಿಪಿಯವರು ಭರವಸೆ ನೀಡಿದ್ದಾರೆ ಎಂದರು.
ಅಧಿಕಾರಿಗಳ ಸಭೆ ನಡೆಸಿದ ಸಂದರ್ಭದಲ್ಲಿ ಪೆÇಲೀಸ್ ಅಧಿಕಾರಿಗಳು ಸಹ ಕೆಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಅವರ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಕ್ರಮ ಕೈಗೊಳ್ಳಲಾಗುವುದು ಎಂದರು. ರಾಜ್ಯ ಪೊಲೀಸ್ ಇಲಾಖೆಯಲ್ಲಿ 192 ಕಾನ್‍ಸ್ಟೇಬಲ್, ಪಿಎಸ್‍ಐಗಳ ನೇಮಕಾತಿ ಅವಶ್ಯಕತೆ ಇದೆ. ಈ ವರ್ಷ ನೇಮಕಾತಿಗೆ ಆದೇಶ ನೀಡಿದ್ದೇವೆ. ಈಗಾಗಲೇ ನೇಮಕಾತಿಯಾದವರ ದಾಖಲಾತಿಗಳ ಪರಿಶೀಲನೆ ನಡೆಯುತ್ತಿದೆ. ಇವೆರಡೂ ನೇಮಕಾತಿ ಸೇರಿದರೆ ಆ ಹುದ್ದೆಗಳಿಗೆ ಶೇ.75 ರಷ್ಟು ಸಿಬ್ಬಂದಿ ನೇಮಕಾತಿ ವ್ಯವಸ್ಥೆ ಆಗುತ್ತದೆ. ಜತೆಗೆ ಪಿಎಸ್‍ಐ ನೇಮಕಾತಿ ಮಾಡುವ ಕೆಲಸವೂ ನಡೆಯುತ್ತಿದೆ ಎಂದರು.
ಸಭೆಯಲ್ಲಿ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಹಣಕಾಸಿನ ಪರಿಸ್ಥಿತಿ ಸ್ವಲ್ಪ ತೊಂದರೆ ಇದ್ದರೂ ಕೂಡ ಬೇರೆ ಬೇರೆ ಸಂದರ್ಭದಲ್ಲಿ ಆರ್ಥಿಕ ಇಲಾಖೆಯ ಒಪ್ಪಿಗೆ ಪಡೆದು ಪೊಲೀಸ್ ಠಾಣೆಗಳ ನಿರ್ಮಾಣ ಕೆಲಸ ಕೈಗೆತ್ತಿಕೊಳ್ಳಲಾಗುವುದು ಎಂದರು. ಕೊರಟಗೆರೆ ಸಮೀಪ ಕೆಎಸ್‍ಆರ್‍ಪಿ ಬೆಟಾಲಿಯನ್ ಕಟ್ಟಡ ಕಾಮಗಾರಿ ಕುಂಠಿತವಾಗಿದೆ. ಈ ಸಂಬಂಧ ರಾಜ್ಯಮಟ್ಟದ ಸಭೆಯಲ್ಲಿ ಚರ್ಚಿಸಿದ್ದು, ಈ ಕಾಮಗಾರಿಯನ್ನು ಚುರುಕುಗೊಳಿಸುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ಲಾಕ್‍ಡೌನ್ ಸಂದರ್ಭದಲ್ಲಿ ಎಲ್ಲ ಕಡೆ ಪೊಲೀಸರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಬೆಂಗಳೂರಿಗೆ ಸಮೀಪವಿರುವ ತುಮಕೂರು ಜಿಲ್ಲೆಯಲ್ಲಿ ಕೊರೊನಾ ನಿಗ್ರಹ ಒಂದು ಸವಾಲಾಗಿತ್ತು. ಇಂತಹ ಸವಾಲನ್ನು ಜಾಗ್ರತೆಯಿಂದ ನಿರ್ವಹಿಸಲಾಗಿದೆ. ಜಿಲ್ಲೆಯಲ್ಲಿ 34 ಮಂದಿ ಸೋಂಕಿತರಲ್ಲಿ ಈಗ 4 ಮಂದಿ ಮಾತ್ರ ಸಕ್ರಿಯರು ಇದ್ದಾರೆ. 28 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಬ್ಬರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎಡಿಜಿಪಿ ಅಮರಕುಮಾರ್ ಪಾಂಡೆ, ಕೇಂದ್ರ ವಲಯ ಐಜಿಪಿ ಶರತ್‍ಚಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ, ಅಡಿಷನಲ್ ಎಸ್ಪಿ ಉದೇಶ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ