ಚಿತ್ರದುರ್ಗ
ಕಳೆದ ಆರ್ಥಿಕ ಸಾಲಿನಲ್ಲಿ ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಒಳಪಡುವ ವಿವಿಧ ಇಲಾಖೆಗಳ ಅನುದಾನ ಬಳಕೆಯಾಗದೆ ವಾಪಾಸ್ಸು ಆಗಿರುವುದಕ್ಕೆ ಕಾರಣಗಳೇನು ಎಂಬುದನ್ನು ಪರಿಶೀಲಿಸಿ ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಸುರೇಶ್ಬಾಬು ಹೇಳಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಪಂಚಾಯತ್ ವಿಶೇಷ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಲ್ಲಿ ಸುಮಾರು 25 ಕೋಟಿ 81 ಲಕ್ಷ ಅನುದಾನ ವಾಪಾಸ್ಸು ಹೋಗಿದ್ದು, ಇದರ ಜೊತೆಗೆ ಶಿಕ್ಷಣ, ಆರೋಗ್ಯ, ಯುವಜನಸೇವಾ ಮತ್ತು ಕ್ರೀಡಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅನುದಾನವೂ ಸರ್ಕಾರಕ್ಕೆ ವಾಪಾಸ್ಸು ಆಗಿದೆ. ಹಾಗಾಗಿ ಅಧಿಕಾರಿಗಳು ನಿರ್ಲಕ್ಷೆ ಮಾಡದೇ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಕೆಲಸಮಾಡಬೇಕು ಎಂದು ತಾಕೀತು ಮಾಡಿದರು.
ಅನುದಾನ ಲ್ಯಾಪ್ಸ್ ಆಗದಂತೆ ಎಚ್ಚರಿಕೆ ವಹಿಸುವಂತೆ ಕಳೆದ ಬಾರಿಯ ಸಭೆಯಲ್ಲಿ ಈ ಕುರಿತು ಚರ್ಚೆ ಮಾಡಿ, ಜಿಲ್ಲೆಯ ಅಭಿವೃದ್ಧಿಗೆ ಮೀಸಲಾಗಿರುವ ಅನುದಾನವನ್ನು ಖರ್ಚು ಮಾಡಬೇಕು ಎಂದು ಸೂಚಿಸಲಾಗಿತ್ತು. ಆದಾಗ್ಯೂ ದೊಡ್ಡಮಟ್ಟದಲ್ಲಿ ಅನುದಾನ ಲ್ಯಾಪ್ಸ್ ಆಗಿದೆ. ಕಳೆದ ಜೂನ್ ತಿಂಗಳಲ್ಲಿ ಕಾಮಗಾರಿಗೆ ಅನುಮೋದನೆ ಆಗಿದೆ. ಆದರೂ ಅನುದಾನ ವಾಪಾಸ್ಸು ಹೋಗಿದೆ. ಇದು ಜಿಲ್ಲೆಗೆ ಆದ ನಷ್ಟ ಎಂದು ಜಿಲ್ಲಾ ಪಂಚಾಯತ್ ಸದಸ್ಯರಾದ ಸೌಭಾಗ್ಯ ಬಸವರಾಜನ್ ಹಾಗೂ ಗುರುಮೂರ್ತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ವಿವಿಧ ಇಲಾಖೆಗಳಲ್ಲಿ ಹಣ ಅಪವ್ಯಯವಾಗಿರುವ ಅನುದಾನ ವಾಪಸ್ಸು ತರಲು ಮರುಪರಿಶೀಲನೆ ಮಾಡುವಂತೆ ಜಿಲ್ಲಾ ಪಂಚಾಯತ್ ಸದಸ್ಯರಾದ ಕೃಷ್ಣಮೂರ್ತಿ, ಗುರುಮೂರ್ತಿ, ಪ್ರಕಾಶಮೂರ್ತಿ, ಅನಂತ್, ಸೌಭಾಗ್ಯ ಬಸವರಾಜನ್ ಸೇರಿದಂತೆ ಹಲವು ಸದಸ್ಯರು ಅಧ್ಯಕ್ಷರಿಗೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಓಂಕಾರಪ್ಪ ಸರ್ಕಾರದಿಂದ ಮೇ ತಿಂಗಳಲ್ಲಿ ಪತ್ರ ಬಂದಿದೆ. ಇಡೀ ಜಿಲ್ಲಾ ಪಂಚಾಯತ್ ಅಧೀನದಲ್ಲಿ ಬರುವ ಎಲ್ಲಾ ಇಲಾಖೆಗಳ ಅನುದಾನದ ವಿವರವನ್ನು, ಅನುದಾನ ಸ್ವೀಕಾರ, ಖರ್ಚು, ಎಷ್ಟು ಅಪವ್ಯಯವಾಗಿದೆ ಹಾಗೂ ಇದಕ್ಕೆ ಕಾರಣ ಹಾಗೂ ಕಾರಣಕರ್ತರು ಯಾರು ಇಷ್ಟು ಮಾಹಿತಿಯನ್ನು ಸರ್ಕಾರಕ್ಕೆ ನೀಡಲಾಗಿದೆ. ಸರ್ಕಾರದ ಹಂತದಲ್ಲಿ ಚರ್ಚೆ ನಡೆಯುತ್ತಿದೆ. 25 ಕೋಟಿ 81 ಲಕ್ಷ ಅನುದಾನ ವಾಪಸ್ಗೆ ಪ್ರಸ್ತಾವನೆ ಕಳಿಸಲಾಗಿದೆ. ಮತ್ತೊಮ್ಮೆ ಸರ್ಕಾರಕ್ಕೆ ಪತ್ರ ಬರೆಯಲಾವುದು ಎಂದು ಹೇಳಿದರು.
ಅವಧಿ ಮೀರಿದ ಮಾತ್ರೆಗಳ ವಿತರಣೆ:
ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅವಧಿ ಮೀರಿದ ಹಾಗೂ ಅವಧಿ ಮುಗಿಯುವ ಕೆಲವು ದಿನಗಳ ಮಾತ್ರ ಬಾಕಿ ಇರುವ ಮಾತ್ರೆಗಳನ್ನು ವಿತರಣೆ ಮಾಡಲಾಗುತ್ತಿದೆ. ಅವಧಿ ಇದ್ದಂಗೆ ಅಗತ್ಯವಿದ್ದವರಿಗೆ ಮಾತ್ರೆಗಳನ್ನು ವಿತರಣೆ ಮಾಡಬೇಕು. ನಾವು ಭೇಟಿ ನೀಡಿದಾಗ ಮಾತ್ರ ಅವುಗಳನ್ನು ವಿಲೇವಾರಿ ಮಾಡುತ್ತಾರೆ. ಈ ಕುರಿತು ಗಮನ ಹರಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಫಾಲಾಕ್ಷ ಅವರಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ.ಫಾಲಾಕ್ಷ ಅವರು, ಅವಧಿ ಮೀರಿದ ಮಾತ್ರೆಗಳನ್ನು ವಿತರಣೆ ಮಾಡುತ್ತಿಲ್ಲ. ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಸ್ಟಾಕ್ ಡಿಟೇಲ್ಸ್ ಕೊಡುವಂತೆ ತಿಳಿಸಲಾಗಿದೆ ಎಂದು ತಿಳಿಸಿದರು.
ವಿವಿ ಸಾಗರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಾರೆ ಮತ್ತು ಹೊಸದುರ್ಗ ರಸ್ತೆ ಬರುವುದರಿಂದ ಅಲ್ಲಿ ಯಾವುದೇ ಅಂಬುಲೆನ್ಸ್ ಸೌಲಭ್ಯವಿಲ್ಲ. ಅಂಬುಲೆನ್ಸ್ ರಿಪೇರಿ ಮಾಡಲು ಒಂದುವರೆ ವರ್ಷ ಬೇಕಾ ಎಂದು ಜಿಲ್ಲಾ ಪಂಚಾಯತ್ ಸದಸ್ಯ ನಾಗೇಂದ್ರನಾಯ್ಕ್ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಾ.ಫಾಲಾಕ್ಷ, ಇನ್ನೂ ಒಂದು ವಾರದಲ್ಲಿ ಅಂಬುಲೆನ್ಸ್ ರಿಪೇರಿಯಾಗಲಿದೆ ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ 34 ಅಂಬುಲೆನ್ಸ್ ಮತ್ತು 108 -24 ಇದ್ದು ಇವುಗಳನ್ನು ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮ್ಯಾಪಿಂಗ್ ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ ಸಹಾಯ ಮಾಡುತ್ತದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಸುಶೀಲಮ್ಮ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಟಿ.ಯೋಗೇಶ್ ಸೇರಿದಂತೆ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
