ಕೊರಟಗೆರೆ
ಪಟ್ಟಣದ ಪ್ರಧಾನ ರಸ್ತೆಯಲ್ಲಿರುವ ಎಸ್ಬಿಐ ಬ್ಯಾಂಕ್ನಲ್ಲಿ ಸಾರ್ವಜನಿಕರು ದಿನವೂ ಪರದಾಡಿ ಕೆಲಸಗಳಾಗದೆ, ಬ್ಯಾಂಕ್ ಸಿಬ್ಬಂದಿಯಿಂದ ಸರಿಯಾದ ಮಾಹಿತಿ ಹಾಗೂ ಸೇವೆ ದೊರೆಯದೆ, ಹಿಡಿ ಶಾಪ ಹಾಕಿ ಹೋಗುತ್ತಿರುವ ಘಟನೆ ಪ್ರತಿ ನಿತ್ಯ ನಡೆಯುತ್ತಿದೆ.
ಕೊರೋನಾ ರೋಗದ ಲಾಕ್ ಡೌನ್ಗೆ ತತ್ತರಿಸಿ ಹೋಗಿರುವ ಸಾರ್ವಜನಿಕರು ಸರ್ಕಾರ ನೀಡುವ ಮಾಸಾಶನ ಮತ್ತು ವೃದ್ದಾಪ್ಯ ವೇತನ ಪಡೆಯಲು ಬ್ಯಾಂಕ್ಗೆ ಬಂದರೆ, ಬಿಸಿಲಿನಲ್ಲಿ ಬ್ಯಾಂಕ್ ಹೊರಗಡೆ ಸರತಿಯ ಸಾಲಿನಲ್ಲಿ ನಿಲ್ಲಬೇಕು. ಗಂಟೆಗಟ್ಟಲೆ ನಿಂತು ಬ್ಯಾಂಕ್ ಒಳಗಡೆ ತಮ್ಮ ಕೆಲಸ ಮಾಡಿಸಿಕೊಳ್ಳಲು ಹೋದರೆ ಸಿಬ್ಬಂದಿಯು ಸಹಕಾರ, ಸಲಹೆ ಸಮರ್ಪಕವಾಗಿ ನೀಡುವುದಿಲ್ಲ ಎಂಬುದು ಹಲವು ಗ್ರಾಮೀಣ ಜನರ ಅಳಲಾಗಿದೆ.
ಸಾರ್ವಜನಿಕರು ವ್ಯವಹರಿಸುವ ಸಮಯದಲ್ಲಿ ಕೊಂಚ ವ್ಯತ್ಯಾಸವಾದರೂ ಸರಿಯಾದ ಮಾಹಿತಿ ನೀಡದೆ ಗದರಿ ಕಳುಹಿಸುವುದು ಪ್ರತಿ ನಿತ್ಯ ನಡೆಯುತ್ತಿದೆ. ಸಿಬ್ಬಂದಿ ಅವರವರ ಸ್ಥಾನದಲ್ಲಿ ಇರುವುದೂ ಅತಿ ವಿರಳವಾಗಿ ಕಂಡು ಬರುತ್ತಿದೆ. ಇದರ ಬಗ್ಗೆ ಹಿರಿಯ ಅಧಿಕಾರಿಗಳು ಪರಿಶೀಲಿಸಬೇಕಿದೆ. ಇದರ ಜೊತೆಯಲ್ಲಿ ತಾಂತ್ರಿಕ ದೋಷವೂ ಕೂಡ ಇದೇ ಬ್ಯಾಂಕ್ನಲ್ಲಿ ಹೆಚ್ಚಾಗಿ ಕಾಣುತ್ತಿದ್ದು, ದಿನಗಟ್ಟಲೆ ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದೆ.
ವಿಪರ್ಯಾಸ ಏನೆಂದರೆ ತಾಂತ್ರಿಕ ದೋಷದ ಸಮಯದಲ್ಲಿ ಆರಾಮಾಗಿ ಬ್ಯಾಂಕ್ನಲ್ಲೆ ಸಮಯ ಕಳೆದು ಮನೆಗೆ ಹೋಗುವ ಸಿಬ್ಬಂದಿ, ಮಾರನೆ ದಿನ ತಾಂತ್ರಿಕ ದೋಷ ಇಲ್ಲದಿರುವಾಗ ಗ್ರಾಹಕರು ಹೆಚ್ಚಿರುವಾಗ ಬ್ಯಾಂಕ್ನ ಕೆಲಸದ ವೇಳೆಗಿಂತ ಕನಿಷ್ಠ 10 ನಿಮಿಷ ಸಹ ಸಾರ್ವಜನಿಕರಿಗಾಗಿ ಹೆಚ್ಚು ಸೇವೆ ಮಾಡುವ ಮನಸ್ಥಿತಿ ಹೊಂದಿಲ್ಲದ ಸಿಬ್ಬಂದಿ ಇದ್ದಾರೆ. ಇಂತಹ ಸಮಯದಲ್ಲಿ ಕನಿಷ್ಠ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವ ಚೆಕ್ಗಳನ್ನು ಗ್ರಾಹಕರಿಂದ ಪಡೆದುಕೊಂಡು ತಾಂತ್ರಿಕ ದೋಷ ಸರಿಹೋದ ಮೇಲೆ ಆ ಕೆಲಸವನ್ನು ಸಿಬ್ಬಂದಿ ಮಾಡಬಹುದು.
ಆದರೆ ಅದರ ಜವಾಬ್ದಾರಿಯನ್ನು ಹೊರಲು ಸಾಧ್ಯವಿಲ್ಲ ಎನ್ನುವ ಸಿಬ್ಬಂದಿ, ಈ ಬ್ಯಾಂಕ್ನಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಬ್ಯಾಂಕ್ನ ವ್ಯವಸ್ಥಾಪಕರು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಾ, ತಮ್ಮ ಸ್ಥಾನ ಬಿಟ್ಟು ದಿನವೆಲ್ಲಾ ಎದ್ದು ಬರುವುದೇ ಇಲ್ಲ. ಬ್ಯಾಂಕ್ನ ಎಟಿಎಂ ಸೇವೆ ಸಹ ಇದೇ ರೀತಿ ತೊಂದರೆಯಾಗಿದೆ.
ಕೊರೋನಾ ರೋಗದ ಸಮಯದಲ್ಲಿ ರಾಜ್ಯದ ಹಲವು ಇಲಾಖೆಗಳ ಸರ್ಕಾರಿ ನೌಕರರು ಮತ್ತು ಸಿಂಬ್ಬದಿ ಪ್ರಾಣದ ಹಂಗು ತೊರೆದು ಸಮಯವನ್ನು ಲೆಕ್ಕಿಸದೆ ಜನರಿಗಾಗಿ ದುಡಿಯುತ್ತಿದ್ದಾರೆ. ಆದರೆ ಕೊರಟಗೆರೆ ಎಸ್ಬಿಐ ಬ್ಯಾಂಕ್ ಸಿಬ್ಬಂದಿಗೆ ಜನರ ಸೇವೆ ಮಾಡುವ ಮನೋಭಾವ ಮೊದಲೆ ಇಲ್ಲ. ಜನರ ಕೆಲಸವನ್ನು ಸರಿಯಾಗಿ ನಿರ್ವಹಿಸದೇ ಇರುವ ಬಗ್ಗೆ ಹಲವು ಸಂಘ ಸಂಸ್ಥೆಗಳು ಆಕ್ರೋಶ ವ್ಯಕ್ತ ಪಡಿಸಿದ್ದು, ಮುಂದಿನ ದಿನಗಳಲ್ಲಿ ಬ್ಯಾಂಕ್ ಸಿಬ್ಬಂದಿಯ ವರ್ತನೆ ವಿರುದ್ದ ಹೋರಾಟ ಮಾಡುವ ಅನಿವಾರ್ಯತೆ ಉಂಟಾಗುವುದಾಗಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ