ತಾಲ್ಲೂಕಿಗೂ ವಕ್ಕರಿಸಿದ ಸೋಂಕು

ಮಧುಗಿರಿ

     ಸೋಮವಾರ ಸಂಜೆ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂದಿದ್ದು, ಮಧುಗಿರಿಯಲ್ಲಿ ಯಾರೂ ಸೋಂಕಿತರಿಲ್ಲ ಎಂದು ಗರ್ವದಿಂದ ಬೀಗುತ್ತಿದ್ದ ಜನರಿಗೆ ಮಂಗಳವಾರ ಕೊರೊನಾ ಮಹಾಮಾರಿಯು ತಾಲ್ಲೂಕಿಗೆ ವಕ್ಕರಿಸಿದಂತಾಗಿದೆ.

     ತಾಲ್ಲೂಕಿನಲ್ಲಿ ಮೂವರು ವ್ಯಕ್ತಿಗಳಿಗೆ ಕೊರೋನಾ ದೃಢಪಟ್ಟಿದ್ದು, ಒಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಇಲ್ಲಿನ ನಾಗರಿಕರು ಆತಂಕಕ್ಕೆ ಒಳಗಾಗಿದ್ದಾರೆ. ಪುರಸಭೆ ಸದಸ್ಯೆಯೊಬ್ಬರ ಪತಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದು, ತಾಲ್ಲೂಕು ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ವೃತ್ತಿಯಲ್ಲಿ ಟೈಲರ್ ಆಗಿರುವ ಇವರು ಪಟ್ಟಣದ ಡೂಂಲೈಟ್ ವೃತ್ತದ ಸಮೀಪ ಅಂಗಡಿಯನ್ನು ತೆರೆದಿದ್ದರು. ಅಂಗಡಿಯನ್ನು ತಾಲ್ಲೂಕು ಆಡಳಿತ ಸ್ಯಾನಿಟೈಸ್ ಮಾಡಿದೆ. ಇವರು ಕಳೆದೊಂದು ವಾರದಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಪುರಸಭಾ ಸದಸ್ಯರೂ ಸೇರಿದಂತೆ ಕೆಲ ಮುಖಂಡರೊಂದಿಗೆ ಒಡನಾಟ ಹೊಂದಿದ್ದರು ಎನ್ನಲಾಗಿದ್ದು, ಇವರಲ್ಲಿ ಕೆಲವರು ಸ್ವಯಂ ಪ್ರೇರಿತರಾಗಿ ಕ್ವಾರಂಟೈನ್‍ಗೆ ಒಳಪಟ್ಟಿದ್ದಾರೆಂದು ಹೇಳಲಾಗುತ್ತಿದೆ ಮತ್ತೆ ಕೆಲವರಿಗೆ ಆತಂಕ ಶುರುವಾಗಿ ಕ್ವಾರಂಟೈನ್ ಭೀತಿ ಎದುರಾಗಿದೆ.
ಟೈಲರ್ ವೃತ್ತಿದಾರರಿಗೂ ಭಯ : ಟೈಲರ್ ವೃತ್ತಿದಾರರಾಗಿದ್ದ ಇವರು ಟೈಲರ್ ವೃತ್ತಿದಾರರೂ ಸೇರಿದಂತೆ ಆಪ್ತ ಸ್ನೇಹಿತರೊಂದಿಗೆ ಸಂಪರ್ಕದಲ್ಲಿದ್ದರು ಎನ್ನಲಾಗಿದ್ದು, ಅವರೆಲ್ಲರಿಗೂ ಆತಂಕ ಎದುರಾಗಿದೆ.

ಮತ್ತೆರಡು ಪ್ರಕರಣ ದೃಢ ? :

     ಪುರಸಭಾ ವ್ಯಾಪ್ತಿಯ ಕೆ.ಹೆಚ್ ರಸ್ತೆಯಲ್ಲಿರುವ ಖಾಸಗಿ ಲಾಡ್ಜ್ ನಲ್ಲಿ ಮಹಾರಾಷ್ಟ್ರದಿಂದ ವಾಪಸ್ಸಾಗಿದ್ದ ವ್ಯಕ್ತಿಯೊಬ್ಬರಿಗೆ ಹೌಸ್ ಕ್ವಾರಂಟೈನ್ ಮಾಡಿ ಆತನ ಗಂಟಲು ಸ್ವಾಬ್‍ನ್ನು ಪರೀಕ್ಷೆಗೆ ಕಳುಹಿಸಿ ಕೊಡಲಾಗಿತ್ತು. ವರದಿಯಲ್ಲಿ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಆ ವ್ಯಕ್ತಿಯನ್ನು ತುಮಕೂರು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

     ಪುರಸಭೆಯವರು ಈ ರಸ್ತೆಗೆ ಸಂಪೂರ್ಣವಾಗಿ ಫೈರ್ ಇಂಜಿನ್ ಮೂಲಕ ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟೈಸ್ ಮಾಡಿದರು. ಮತ್ತೊಂದು ಪ್ರಕರಣದಲ್ಲಿ ಐ.ಡಿಹಳ್ಳಿ ಹೋಬಳಿ ಗೂಲಹಳ್ಳಿ ಗ್ರಾಮದ ನಿವಾಸಿಯೊಬ್ಬ ಬೆಂಗಳೂರಿನ ಎಪಿಎಂಸಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇತ್ತೀಚೆಗೆ ಆಚೇನಹಳ್ಳಿ ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದ ನಂತರ ಕೆಮ್ಮು ನೆಗಡಿಯಿಂದಾಗಿ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಾಗ ಕೊರೋನಾ ಪರೀಕ್ಷೆ ವರದಿಯಿಂದ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ತುಮಕೂರು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುನ್ನೆಚ್ಚ್ಚರಿಕೆಯ ಕ್ರಮವಾಗಿ ಈ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link