ತುಮಕೂರು : ಜಿಲ್ಲೆಯ ಯಾವ ತಾಲ್ಲೂಕು ಈಗ ಸುರಕ್ಷಿತವಲ್ಲ..

ತುಮಕೂರು:

    ಶಿರಾಕ್ಕೆ ಪ್ರಥಮವಾಗಿ ಬಂದೆರಗಿದ ಮಹಾಮಾರಿ ಕೊರೊನಾ ಈಗ ಯಾವುದೇ ಒಂದು ತಾಲ್ಲೂಕಿಗೆ ಸೀಮಿತವಾಗಿ ಉಳಿದಿಲ್ಲ. ಇಡೀ ಜಿಲ್ಲೆಯನ್ನು ಆವರಿಸಿಕೊಂಡಿದೆ. ನಾವು ಕೊರೊನಾ ಮುಕ್ತ ಎಂದು ಹೇಳಿಕೊಳ್ಳುವಂತಹ ಧೈರ್ಯ ಯಾರಲ್ಲೂ ಇಲ್ಲ. ಜಿಲ್ಲೆಯ 10 ತಾಲ್ಲೂಕುಗಳಿಗೂ ಕರೋನಾ ವ್ಯಾಪಿಸಿದ್ದು, ಹಳ್ಳಿಗಳಲ್ಲೂ ಈಗ ಆತಂಕ ಶುರುವಾಗಿದೆ.

    ಒಂದಲ್ಲಾ ಒಂದು ವಿಧದಲ್ಲಿ ಹೊರಗಿನವರ ಸಂಪರ್ಕದಿಂದಾಗಿಯೇ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಪಾದರಾಯನಪುರ, ಮಹಾರಾಷ್ಟ್ರ, ಗುಜರಾತ್ ಮತ್ತಿತರ ಕಡೆಗಳಿಂದ ಸೋಂಕು ಅಂಟಿಸಿಕೊಂಡು ಬಂದವರು ಇಲ್ಲೆಲ್ಲ ಹರಡಿಬಿಟ್ಟರು. ವ್ಯಾಪಾರ ವಹಿವಾಟು ಆರಂಭವಾಗಿ ಜನ ಸಂಚಾರ ಮುಕ್ತವಾದಂತೆ ಸಂಪರ್ಕಗಳು ಹೆಚ್ಚುತ್ತಾ ಹೋದವು.

   ಹೊರಗಿನಿಂದ ಬಂದವರನ್ನು ಕಟ್ಟುನಿಟ್ಟಾಗಿ ಕ್ವಾರಂಟೈನ್‍ಗೆ ಒಳಪಡಿಸಿದ ಪರಿಣಾಮ ಕೋವಿಡ್ ಸಂಖ್ಯೆ ಒಂದಷ್ಟು ಹತೋಟಿಗೆ ಬಂದಿದೆ ಎನ್ನಬಹುದು. ಇಲ್ಲವಾಗಿದ್ದರೆ ಈ ವೇಳೆಗಾಗಲೆ ಈ ಸಂಖ್ಯೆ ಅಧಿಕವಾಗುತ್ತಿತ್ತು ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಜಿಲ್ಲೆಯ ಕೆಲವು ಭಾಗಗಳಲ್ಲಿ ವರದಿಯಾಗಿರುವ ಪ್ರಕರಣಗಳನ್ನು ಗಮನಿಸಿದರೆ ಕದ್ದುಮುಚ್ಚಿ ಬೇರೆ ಕಡೆಗಳಿಂದ ಬಂಧುಗಳ ಮನೆಗೆ ಬಂದು ಹೋಗಿರುವವರು ಅಥವಾ ಇತರೆ ಪ್ರದೇಶಗಳಿಗೆ ಹೋಗಿ ಬಂದಿರುವವರಿಗೆ ಸೋಂಕು ತಗುಲುತ್ತಿರುವುದು ಇತ್ತೀಚಿನ ಆತಂಕಕಾರಿ ಬೆಳವಣಿಗೆ. ಈ ಸೋಂಕು ಮುಂದಿನ ದಿನಗಳಲ್ಲಿ ಅದ್ಯಾವ ಅಪಾಯ ತರಲಿದೆಯೋ ಎಂಬ ಆತಂಕವಂತೂ ಇದ್ದೇ ಇದೆ.

     ಹೆಚ್ಚು ಸಂಚಾರ ಹಾಗೂ ಜನನಿಬಿಡವಿರುವ ಊರು, ನಗರ ಪ್ರದೇಶಗಳಲ್ಲಿ ಈ ಸೋಂಕು ಹರಡುವುದು ಸಾಮಾನ್ಯ ಎನ್ನಲಾಗಿತ್ತು. ಇದಕ್ಕಾಗಿಯೇ ಅಂತರ ಕಾಪಾಡಿಕೊಳ್ಳುವ ಹಾಗೂ ಮಾಸ್ಕ್ ಧರಿಸುವುದರ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಇದರ ನಡುವೆಯೂ ಜನಸಂದಣಿಯಿಂದ ದೂರವೇ ಇರುವ ಗ್ರಾಮಗಳಿಗೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಒಂದು ಗೊಲ್ಲರಹಟ್ಟಿಗೆ ಸೋಂಕು ತಗುಲಿರುವುದು ಆಶ್ಚರ್ಯ ಮತ್ತು ಆತಂಕವನ್ನು ಉಂಟು ಮಾಡಿದೆ. ಇವೆಲ್ಲವನ್ನೂ ಗಮನಿಸುತ್ತಾ ಹೋದರೆ ಸಮುದಾಯದ ಸುರಕ್ಷತೆಯ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಇದೆ.

    ಜಿಲ್ಲೆಯಲ್ಲಿ ಈವರೆಗೆ ಒಟ್ಟು 57 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಇವುಗಳಲ್ಲಿ 19 ಪ್ರಕರಣಗಳು ತುಮಕೂರು ತಾಲ್ಲೂಕಿಗೆ ಸಂಬಂಧಪಟ್ಟದ್ದಾಗಿವೆ. 15 ಪ್ರಕರಣಗಳು ಶಿರಾ ತಾಲ್ಲೂಕಿಗೆ ಸೇರಿದ್ದು, ತುಮಕೂರು ಮೊದಲ ಸ್ಥಾನದಲ್ಲಿದ್ದರೆ, ಶಿರಾ 2ನೇ ಸ್ಥಾನದಲ್ಲಿದೆ.

    ಆರಂಭದಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದೇ ಶಿರಾ ತಾಲ್ಲೂಕಿನಿಂದ. ಮರಣ ಹೊಂದಿದ್ದು ಪ್ರಥಮವಾಗಿ ಅದೇ ತಾಲ್ಲೂಕಿನಲ್ಲಿ. ನಂತರದ ಪ್ರಕರಣಗಳು ತುಮಕೂರಿನಲ್ಲಿ ವರದಿಯಾದವು. ಈ ಎರಡು ತಾಲ್ಲೂಕುಗಳನ್ನು ಹೊರತುಪಡಿಸಿದರೆ ಕೊರಟಗೆರೆ ಮತ್ತು ಕುಣಿಗಲ್‍ನಲ್ಲಿ ತಲಾ ಒಂದೊಂದು ಪ್ರಕರಣ ಮಾತ್ರ ಪಾಸಿಟಿವ್ ಇರುವುದು ದೃಢಪಟ್ಟಿದೆ.

    ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 767 ಜನರ ಪರೀಕ್ಷೆಯಲ್ಲಿ ಇಬ್ಬರಿಗೆ ಪಾಸಿಟಿವ್ ದೃಢಪಟ್ಟಿದೆ. 765 ಮಂದಿಗೆ ನೆಗೆಟಿವ್ ವರದಿ ಬಂದಿದೆ. ಗುಬ್ಬಿ ತಾಲ್ಲೂಕಿನಲ್ಲಿ 898 ಜನರ ಪರೀಕ್ಷೆಯಲ್ಲಿ 3 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಕೊರಟಗೆರೆ ತಾಲ್ಲೂಕಿನಲ್ಲಿ 965 ಮಂದಿಯ ಪರೀಕ್ಷೆ ನಡೆಸಲಾಗಿದ್ದು, ಒಂದು ಪಾಸಿಟಿವ್, ಕುಣಿಗಲ್ ತಾಲ್ಲೂಕಿನಲ್ಲಿ 833 ಜನರ ವರದಿ ಪರೀಕ್ಷಿಸಿದ್ದು, ಅದರಲ್ಲಿ ಒಬ್ಬರಿಗೆ ಪಾಸಿಟಿವ್, ಮಧುಗಿರಿಯಲ್ಲಿ 931 ಜನರ ವರದಿ ಪರೀಕ್ಷಿಸಿದ್ದು, 4 ಮಂದಿಗೆ ಪಾಸಿಟಿವ್ ಇರುವುದು ದೃಢಪಟ್ಟಿರುತ್ತದೆ.

    ಪಾವಗಡ ತಾಲ್ಲೂಕಿನಲ್ಲಿ 1063 ಜನರ ವರದಿ ಪರೀಕ್ಷೆಯಲ್ಲಿ 5 ಮಂದಿಗೆ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಶಿರಾ ತಾಲ್ಲೂಕಿನಲ್ಲಿ 1554 ಜನರ ಪರೀಕ್ಷೆ ನಡೆಸಲಾಗಿದೆ. 15 ಮಂದಿಗೆ ಪಾಸಿಟಿವ್ ಬಂದಿದೆ. 1538 ಮಂದಿಗೆ ನೆಗೆಟಿವ್ ಬಂದಿದೆ. ತಿಪಟೂರು ತಾಲ್ಲೂಕಿನ 1348 ಜನರ ಪರೀಕ್ಷೆಯಲ್ಲಿ 3 ಮಂದಿಗೆ ಪಾಸಿಟಿವ್ ದೃಢಪಟ್ಟಿರುತ್ತದೆ. ತುರುವೇಕೆರೆ ತಾಲ್ಲೂಕಿನ 942 ಜನರ ಪರೀಕ್ಷಾ ವರದಿಯಲ್ಲಿ 4 ಮಂದಿಗೆ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ 14,287 ಜನರ ಕೋವಿಡ್ ಪರೀಕ್ಷಾ ವರದಿಯಲ್ಲಿ 57 ಜನರಿಗೆ ಪಾಸಿಟಿವ್ ಬಂದಿದ್ದು, 14,232 ಜನರಿಗೆ ನೆಗೆಟಿವ್ ವರದಿ ಬಂದಿದೆ.

   ಹೊರ ರಾಜ್ಯಗಳಿಂದ ಪ್ರಯಾಣ ಬೆಳೆಸಿದವರಲ್ಲಿ 633 ಮಂದಿಯನ್ನು ಹೋಂ ಕ್ವಾರಂಟೈನ್‍ನಲ್ಲಿ ಇಡಲಾಗಿದ್ದು, 176 ಮಂದಿಯನ್ನು ಸಾಂಸ್ಥಿಕ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಒಟ್ಟು 57 ಮಂದಿ ಐಸೋಲೇಷನ್‍ನಲ್ಲಿ ಇದ್ದಾರೆ. ಗೃಹ ಹಾಗೂ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇರುವವರ ಒಟ್ಟು ಸಂಖ್ಯೆ 866.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap