ಶೆಟ್ಟಿಹಳ್ಳಿ ರಸ್ತೆಯ ಫುಟ್‍ಪಾತ್ ವ್ಯಾಪಾರ ಸ್ಥಳಾಂತರಕ್ಕೆ ಒತ್ತಾಯ

ತುಮಕೂರು

       ಸುರಕ್ಷಿತ ಸಂಚಾರ ವ್ಯವಸ್ಥೆಗೆ ಸುಸಜ್ಜಿತ ರಸ್ತೆಯ ಜೊತೆಗೆ ಫುಟ್‍ಪಾತ್ ಕೂಡಾ ಅಗತ್ಯ. ರಸ್ತೆಯಲ್ಲಿ ವಾಹನಗಳು, ಫುಟ್‍ಪಾತ್‍ನಲ್ಲಿ ಪಾದಚಾರಿಗಳು ಸಂಚಾರ ಮಾಡಿದರೆ ಎಲ್ಲವೂ ಕ್ಷೇಮ.

      ಆದರೆ, ನಗರದ ರೈಲ್ವೆ ಅಂಡರ್‍ಪಾಸ್ ಬಳಿಯ ಶೆಟ್ಟಿಹಳ್ಳಿ ಮುಖ್ಯ ರಸ್ತೆಯ ಎರಡೂ ಕಡೆ ಫುಟ್‍ಪಾತ್ ಇದ್ದರೂ ಅದು ಪಾದಚಾರಿಗಳ ಬಳಕೆಗೆ ಸಾಧ್ಯವಾಗುತ್ತಿಲ್ಲ. ಫುಟ್‍ಪಾತ್ ಮೇಲೆ ವ್ಯಾಪಾರವಹಿವಾಟು ನಡೆಯುತ್ತಿದ್ದು, ಪಾದಚಾರಿಗಳು ರಸ್ತೆಗಿಳಿಯಬೇಕಾಗಿದೆ. ಸಂಜೆ ವೇಳೆ ಈ ರಸ್ತೆಯ ಎರಡೂ ಬದಿ ಫುಟ್‍ಪಾತ್‍ಗಳ ಮೇಲೆ ತರಕಾರಿ ಸೇರಿದಂತೆ ಇತರೆ ಪದಾರ್ಥಗಳ ಮಾರಾಟದ ಸಂತೆ ಸೇರಿಬಿಡುತ್ತದೆ. ಖರೀದಿಗೆ ಬಂದವರು ಅರ್ಧ ರಸ್ತೆವರೆಗೂ ತಮ್ಮ ದ್ವಿಚಕ್ರವಾಹನಗಳನ್ನು ನಿಲ್ಲಿಸಿ, ತಾವೂ ರಸ್ತೆಯಲ್ಲಿ ನಿಂತು, ವಾಹನ, ಜನರ ಓಡಾಟಕ್ಕೆ ಅಡ್ಡಿಯಾಗುತ್ತಾರೆ.

      ಅಂಡರ್‍ಪಾಸ್ ದಾಟಿ ಇಲ್ಲಿ ಬರುವ ವಾಹನ ಸವಾರರು ಮುಂದೆ ಸಾಗಲು ಕಿರಿಕಿರಿ ಅನುಭವಿಸಬೇಕಾಗುತ್ತದೆ. ಫುಟ್‍ಪಾತ್ ಇಲ್ಲದೆ ಜನರೂ ರಸ್ತೆಗಿಳಿದು ನಡೆದಾಡಬೇಕಾದ ಕಾರಣ ಮಕ್ಕಳು, ವಯೋವೃದ್ಧರು ಆತಂಕದಲ್ಲೇ ಓಡಾಡಬೇಕಾಗಿದೆ. ಯಾವ ವಾಹನದಿಂದ ಅಪಘಾತವಾಗುತ್ತದೋ ಎಂಬ ಭಯ ಇರುತ್ತದೆ ಎಂದು ವಿಜಯ ನಗರ ನಿವಾಸಿ ಶಿಕ್ಷಕ ಕೃಷ್ಣಮೂರ್ತಿ ಹೇಳುತ್ತಾರೆ.

       ಇಲ್ಲಿ ತರಕಾರಿ ವ್ಯಾಪಾರ ಇರುವುದರಿಂದ ಜನ ಖರೀದಿ ಮಾಡಲು ಅನುಕೂಲವೇ ಆಗಿದೆ, ಆದರೆ ಇದರಿಂದ ಇಲ್ಲಿ ಜನ, ವಾಹನ ಓಡಾಟಕ್ಕೆ ಸಮಸ್ಯೆಯಾಗಿದೆ. ಫುಟ್‍ಪಾತ್ ತೆರವುಗೊಳಿಸಿ ವ್ಯಾಪಾರಿಗಳಿಗೆ ಬೇರೆ ಕಡೆ ಜಾಗದ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ಈ ಭಾಗದ ಎಲ್ಲಾ ಬಡಾವಣೆಗಳು ಬೆಳವಣಿಗೆಯಾಗುತ್ತಾ ದಿನೆದಿನೆ ಜನಸಂಖ್ಯೆ ಹೆಚ್ಚಿ, ಶೆಟ್ಟಿಹಳ್ಳಿ ಮುಖ್ಯ ರಸ್ತೆಯಲ್ಲಿ ವಾಹನದಟ್ಟಣಿ ಹೆಚ್ಚುತ್ತಿದೆ.

      ಈ ಕಾರಣದಿಂದಲೇ, ಜನರ ಒತ್ತಾಯದ ಮೇಲೆ ಡಾ.ರಫಿಕ್ ಅಹಮದ್ ಶಾಸಕರಾಗಿದ್ದಾಗ ಈ ರಸ್ತೆಯನ್ನು ಜೋಡಿ ರಸ್ತೆಯಾಗಿ ಅಭಿವೃದ್ಧಿ ಮಾಡಲಾಗಿತ್ತು. ಜೊತೆಗೆ ಎರಡೂ ಕಡೆಯ ಫುಟ್‍ಪಾತ್ ನಿರ್ಮಾಣ ಮಾಡಿ, 60 ಲಕ್ಷ ರೂ.ವೆಚ್ಚದಲ್ಲಿ ಟೈಲ್ಸ್ ಹಾಕಿ ಸಿದ್ಧಪಡಿಸಲಾಗಿದೆ. ಇದಾಗಿಯೂ ಫುಟ್‍ಪಾತ್ ಪಾದಚಾರಿಗಳ ಬಳಕೆಯಾಗುತ್ತಿಲ್ಲ ಎಂದು ಇಲ್ಲಿನ ನಿವಾಸಿ ವಕೀಲ ಕೆ.ಬಿ.ಚಂದ್ರಚೂಡಾ ಹೇಳಿದರು.

      ಸಂಜೆ ವೇಳೆ ತರಕಾರಿ ವ್ಯಾಪಾರ ಜೊತೆಗೆ ಪಾನಿಪೂರಿ, ಗೋಬಿಮಂಚೂರಿ, ಎಳನೀರು, ಕಬ್ಬಿನಹಾಲು ಮಾರುವವರ ಅಂಗಡಿಗಳು ಫುಟ್‍ಪಾತ್ ಆಕ್ರಮಿಸಿಕೊಂಡು ಜನ ಓಡಾಡಲು ಕಷ್ಟವಾಗುತ್ತದೆ. ಪಾನಿಪೂರಿ ಅಂಗಡಿಯವರು ಅಲ್ಲೇ ತಟ್ಟೆ, ಪಾತ್ರೆ ತೊಳೆದು ಗಲೀಜು ಮಾಡುತ್ತಾರೆ, ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ. ಇಲ್ಲಿನ ಫುಟ್‍ಪಾತ್‍ಗಳನ್ನು ಪಾದಚಾರಿಗಳ ಬಳಕೆಗೆ ಮಾತ್ರವೇ ಉಳಿಸಬೇಕು, ಈ ಬಗ್ಗೆ ನಗರಪಾಲಿಕೆ ಕ್ರಮತೆಗೆದುಕೊಳ್ಳಬೇಕು ಎಂದು ಚಂದ್ರಚೂಡಾ ಒತ್ತಾಯಿಸಿದರು.

      ಈ ಬಗ್ಗೆ ಈ ಭಾಗದ ನಾಗರೀಕ ಸಮಿತಿ ಮುಖಂಡರು ನಗರಪಾಲಿಕೆಗೆ ಹಲವು ಬಾರಿ ಮನವಿ ಮಾಡಿದ್ದಾರೆ. ಇತ್ತೀಚೆಗೆ ಇಲ್ಲಿಗೆ ಭೇಟಿ ನೀಡಿ ಸ್ಥಿತಿಗತಿ ಪರಿಶೀಲಿಸಿದ ನಗರಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಕೆ.ನರಸಿಂಹಮೂರ್ತಿ, ಫುಟ್‍ಪಾತ್ ತೆರವು ಮಾಡಬೇಕಾಗಿದ್ದು, ಅಗತ್ಯ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದರು.

       ಈ ಭಾಗದ ನಗರಪಾಲಿಕೆ ಸದಸ್ಯ ವಿಷ್ಣುವರ್ಧನ್ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿ ಸಂಚಾರ ದಟ್ಟಣಿ ಹೆಚ್ಚಾಗುತ್ತಿದೆ, ಫುಟ್‍ಪಾತ್ ಬಳಸಲು ಅವಕಾಶವಿಲ್ಲದೆ ಜನ ರಸ್ತೆಗಿಳಿದು ಓಡಾಡುವಂತಾಗಿದೆ. ನಾಗರೀಕರು ಹಾಗೂ ಇಲ್ಲಿನ ವ್ಯಾಪಾರಿಗಳ ಹಿತಾಸಕ್ತಿ ಪರಿಗಣಿಸಿ, ಹತ್ತಿರದಲ್ಲಿ ಜಾಗ ಗುರುತಿಸಿ, ಮಿನಿ ಮಾರುಕಟ್ಟೆ ನಿರ್ಮಾಣ ಮಾಡಿ ವ್ಯಾಪಾರಿಗಳನ್ನು ಅಲ್ಲಿಗೆ ಸ್ಥಳಾಂತರ ಮಾಡಬೇಕು ಎಂದು ನಗರ ಪಾಲಿಕೆ ಅಧಿಕಾರಿಗಳಿಗೆ ತಾವು ಮನವಿ ಮಾಡಿದ್ದು, ಆ ಪ್ರಯತ್ನ ನಡೆದಿದೆ ಎಂದು ವಿಷ್ಣುವರ್ಧನ್ ಹೇಳಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link