ಚಿತ್ರದುರ್ಗ:
ರೈಲ್ವೆ ಹಳಿ ನಿರ್ಮಾಣ ಸಂದರ್ಭದಲ್ಲಿ ರೈಲ್ವೆ ಅಂಡರ್ ಪಾಸ್ ನಿರ್ಮಿಸುವಾಗ ಸಮೀಪದ ರೈತರಿಗೆ ತೊಂದರೆಯಾಗಿದ್ದಲ್ಲಿ, ಇಂತಹ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ಹೇಳಿದರು.
ಅಜ್ಜಂಪುರ ಪಟ್ಟಣ ಸಮೀಪ ಹೆಬ್ಬೂರು ಗ್ರಾಮದ ಬಳಿ ಭದ್ರಾ ಮೇಲ್ದಂಡೆ ಕಾಲುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ರೈಲು ಹಳಿ ಕೆಳಗೆ ಬಾಕ್ಸ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಭದ್ರಾ ಮೇಲ್ದಂಡೆ ಕಾಲುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ರೈಲು ಹಳಿ ಕೆಳಗೆ ಬಾಕ್ಸ್ ಅಳವಡಿಕೆ ಕಾಮಗಾರಿಯನ್ನು ಸಾಕಷ್ಟು ಅಡ್ಡಿ ಆತಂಕಗಳ ನಡುವೆಯೂ ಗುತ್ತಿಗೆದಾರರು ಕೇವಲ 31 ದಿನಗಳ ಒಳಗೆ ಪೂರ್ಣಗೊಳಿಸಿದ್ದಾರೆ. ಇದಕ್ಕೆ ಶ್ರಮಿಸಿದ ಸಂಸದ ನಾರಾಯಣಸ್ವಾಮಿ, ರೈಲ್ವೆ ಇಲಾಖೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ಹಾಗೂ ಗುತ್ತಿಗೆದಾರ ಕೋಟೇಶ್ವರರಾವ್ ಅವರನ್ನು ಅಭಿನಂದಿಸುವುದಾಗಿ ಹೇಳಿದರು.
06 ಲಕ್ಷ ಎಕರೆ ಭೂಮಿಗೆ ನೀರಾವರಿ ಕಲ್ಪಿಸಿ, ಬರಪೀಡಿತ ಪ್ರದೇಶಗಳಿಗೆ ಹರಿಯುವಂತಹ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಈಗ ವೇಗ ನೀಡಲಾಗಿದೆ. ಸಂಸದ ನಾರಾಯಣಸ್ವಾಮಿ ಅವರ ಮನವಿಯಂತೆ, ರೈಲ್ವೆ ಅಂಡರ್ ಬಾಕ್ಸ್ ಅಳವಡಿಕೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಗತ್ಯ ಸಹಕಾರ ನೀಡುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಅದರನ್ವಯ ನಿರೀಕ್ಷೆಗೂ ಮೀರಿ 31 ದಿನಗಳ ಒಳಗಾಗಿ ತ್ವರಿತವಾಗಿ ಈ ಕಾಮಗಾರಿ ಪೂರ್ಣಗೊಳಿಸಿರುವುದು ಸಂತಸ ತಂದಿದೆ.
ಈ ಬಾಕ್ಸ್ ಅಳವಡಿಕೆ ಮಾಡಿರುವ ಸ್ಥಳದ ಇಕ್ಕೆಲಗಳಲ್ಲಿ ಮಣ್ಣು ಸಡಿಲ ಇರುವುದರಿಂದ, ಇದನ್ನು ಆದಷ್ಟು ಎಚ್ಚರಿಕೆ ವಹಿಸಿ, ಗುಣಮಟ್ಟದಲ್ಲಿ ಕಾಲುವೆ ನಿರ್ಮಿಸುವ ಅಗತ್ಯವಿದೆ. ಇಲ್ಲದಿದ್ದಲ್ಲಿ ಹೆಚ್ಚಿನ ಮಳೆ ಅಥವಾ ಪ್ರವಾಹ ಸಂದರ್ಭದಲ್ಲಿ ಕಾಲುವೆಯ ಅಕ್ಕಪಕ್ಕದ ಮಣ್ಣು ಕಾಲುವೆಯೊಳಗೆ ಕುಸಿದು ಬೀಳುವ ಸಂಭವವಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಉತ್ತಮ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ರೈಲ್ವೆ ಸಚಿವರು ಹೇಳಿದರು.
ರೈಲ್ವೆ ಅಂಡರ್ ಪಾಸ್ ನಂತಹ ಕಾಮಗಾರಿಗಳಲ್ಲಿ ಅಕ್ಕಪಕ್ಕದ ಪ್ರದೇಶದ ರೈತರಿಗೆ ತೊಂದರೆಯಾಗುತ್ತಿರುವುದು ಎಲ್ಲೆಡೆ ಕೇಳಿಬರುತ್ತಿರುವ ದೂರು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತಜ್ಞರಿಂದ ಸಲಹೆ ಪಡೆದು, ರೈತರಿಗೆ ತೊಂದರೆಯಾಗದ ರೀತಿ ಪರಿಹಾರ ಕ್ರಮಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಲಾಗುವುದು. ಪ್ರಧಾನಿಗಳ ಆಶಯದಂತೆ ಹಳ್ಳಿ, ಶ್ರಮಿಕ ಹಾಗೂ ರೈತ ಇವರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಹೇಳಿದರು.
ನೇರ ರೈಲು ಮಾರ್ಗ :
ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೆ ಮಾರ್ಗಕ್ಕೆ ಇದುವರೆಗೆ 49 ಕೋಟಿ ರೂ. ವೆಚ್ಚವನ್ನು ರೈಲ್ವೆ ಇಲಾಖೆ ಮಾಡಿದೆ. ಮಾರ್ಗಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ರೈಲ್ವೆ ಇಲಾಖೆಗೆ ಭೂಮಿ ಹಸ್ತಾಂತರಿಸಿದಲ್ಲಿ, ಕಾಮಗಾರಿಯನ್ನು ತಕ್ಷಣವೇ ಪ್ರಾರಂಭಿಸಲಾಗುವುದು. ಇತ್ತೀಚೆಗಷ್ಟೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಭೂಸ್ವಾಧೀನ ಪ್ರಕ್ರಿಯೆ ತ್ವರಿತಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಸಂಸದ ಎ. ನಾರಾಯಣಸ್ವಾಮಿ ಅವರು ಮಾತನಾಡಿ, ತುಂಗಾ, ಭದ್ರಾದಿಂದ ಬರಪೀಡಿತ ಜಿಲ್ಲೆಗಳಿಗೆ ನೀರಾವರಿ ಕಲ್ಪಿಸುವ ಭದ್ರಾ ಮೇಲ್ದಂಡೆ ಕಾಮಗಾರಿಗೆ ಸಂಬಂಧಿಸಿದಂತೆ ಅಜ್ಜಂಪುರ ಬಳಿಯ ವೈ ಜಂಕ್ಷನ್‍ನಿಂದ ಶಾಖಾ ಕಾಲುವೆಗೆ ಕೇವಲ 64 ಕಿ.ಮೀ. ಮಾತ್ರ ಸ್ವಾಧೀನ ಆಗಿದ್ದು, ಕಾಮಗಾರಿ ನಡೆದಿದೆ. ಅಲ್ಲದೆ ಇನ್ನೂ 04 ಕಡೆ ಟನಲ್ ನಿರ್ಮಾಣ ಆಗಬೇಕಿದೆ. ಕಾಲುವೆ ನಿರ್ಮಾಣಕ್ಕಾಗಿ ಚಿತ್ರದುರ್ಗದ ಬಳಿ ಇದೇ ರೀತಿಯ ರೈಲ್ವೆ ಅಂಡರ್ ಬಾಕ್ಸ್ ಅಳವಡಿಸಬೇಕಿದ್ದು, ಇದಕ್ಕಾಗಿ 7 ಕೋಟಿ ರೂ. ರೈಲ್ವೆ ಇಲಾಖೆಗೆ ಪಾವತಿಸಲಾಗಿದೆ.
ಕಾಲುವೆಗಳ ಕೆಲಸ ಪೂರ್ಣಗೊಳಿಸದೆ, ಕೆರೆಗಳನ್ನು ತುಂಬಿಸುತ್ತೇವೆ, ಜಮೀನುಗಳಿಗೆ ನೀರು ಕೊಡುತ್ತೇವೆ ಎಂದು ಸುಮ್ಮನೆ ನಾವು ಆಶ್ವಾಸನೆ ನೀಡುವುದಿಲ್ಲ. ಬದಲಿಗೆ ಕಾಮಗಾರಿಯನ್ನು ತ್ವರಿತಗೊಳಿಸಲು ಇರುವ ಅಡ್ಡಿಯನ್ನು ನಿವಾರಿಸಲು ಆದ್ಯತೆ ನೀಡಲಾಗುವುದು. ಒಟ್ಟಾರೆ ಸಂಪೂರ್ಣ ಯೋಜನೆಯನ್ನು 02 ವರ್ಷದೊಳಗೆ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದರು.
ನೈರುತ್ಯ ರೈಲ್ವೆ ವಿಭಾಗದ ಜನರಲ್ ಮ್ಯಾನೇಜರ್ ಎ.ಕೆ. ಸಿಂಗ್, ಮೈಸೂರಿನ ವಿಭಾಗೀಯ ವ್ಯವಸ್ಥಾಪಕಿ ಅಪರ್ಣ ಗರ್ಗ್, ಡಿವಿಜನಲ್ ಇಂಜಿನಿಯರ್ ರವೀಂದ್ರನ್, ಸೇರಿದಂತೆ ಭದ್ರಾ ಮೇಲ್ದಂಡೆ ಯೋಜನೆಯ ಇಂಜಿನಿಯರ್‍ಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
