ಹುಳಿಯಾರು
ಹುಳಿಯಾರಿನ ಬಸ್ ನಿಲ್ದಾಣದ ಕೆರೆ ದಡದಲ್ಲಿನ ಪೆಟ್ಟಿಗೆ ಅಂಗಡಿಗಳು, ಗೋಬಿಮಂಚೂರಿ, ಪಾನಿಪೂರಿ, ಹೋಟೆಲ್, ಕಾಫಿ, ಚಹಾ ಅಂಗಡಿಯ ಗಾಡಿಗಳನ್ನು ಪಟ್ಟಣ ಪಂಚಾಯಿತಿ ವತಿಯಿಂದ ತೆರವುಗೊಳಿಸಲಾಯಿತು.
ಕೊರೋನ ಹಿನ್ನೆಲೆಯಲ್ಲಿ ಎರಡು ತಿಂಗಳ ಹಿಂದೆ ಎಲ್ಲಾ ಅಂಗಡಿಗಳನ್ನು ತೆರವು ಮಾಡಲಾಗಿತ್ತು. ನಂತರ ಬೀದಿ ಬದಿ ವ್ಯಾಪಾರಿಗಳು ಕೈಗಾಡಿಗಳನ್ನು ದೂಡಿಕೊಂಡು ಬಂದು ವ್ಯಾಪಾರ ಮಾಡಿಕೊಂಡು ಸಂಜೆ ಗಾಡಿ ಸಮೇತ ವಾಪಸ್ಸಾಗುತ್ತಿದ್ದರು.ಲಾಕ್ ಡೌನ್ ತೆರೆವಿನ ನಂತರ ಗೋಬಿ ಮಂಚೂರಿ, ಪಾನಿಪೂರಿ, ಹೋಟೆಲ್‍ಗಳ ಸಂಖ್ಯೆ ಹೆಚ್ಚಾಗಿತ್ತು. ಮಾಸ್ಕ್, ವೈಯಕ್ತಿಕ ಅಂತರ ಸೇರಿದಂತೆ ಕೋವಿಡ್-19 ನಿಯಮ ಉಲ್ಲಂಘಿಸಿ ವ್ಯಾಪಾರ ನಡೆಸುತ್ತಿದ್ದರು. ಪುನಃ ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಅಲ್ಲಿನ ಎಲ್ಲಾ ಅಂಗಡಿಗಳನ್ನು ಪೌರಕಾರ್ಮಿಕರ ಮೂಲಕ ತೆರವು ಮಾಡಿಸಿರುವುದಾಗಿ ಪಪಂ ಮುಖ್ಯಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.
ಕೆರೆಯ ಪ್ರದೇಶದಲ್ಲಿ ಅನಧಿಕೃತ ಅಂಗಡಿಗಳನ್ನು ಇಟ್ಟುಕೊಂಡಿದ್ದಲ್ಲದೆ, ಅಂಗಡಿ ತ್ಯಾಜ್ಯಗಳನ್ನು ಕೆರೆಗೆ ಎಸೆದು, ಅಂಗಡಿ ಇಟ್ಟುಕೊಂಡಿದ್ದ ಜಾಗವನ್ನು ಅನೈರ್ಮಲ್ಯ ತಾಣವಾಗಿ ಮಾರ್ಪಡಿಸಿದ್ದರು. ಜೊತೆಗೆ ಬಸ್ ನಿಲ್ದಾಣದ ಮೂಲಕವೆ ರಾಷ್ಟ್ರೀಯ ಹೆದ್ದಾರಿ 150 ಹಾದು ಹೋಗುವುದರಿಂದ ಸಹಜವಾಗಿ ವಾಹನ ದಟ್ಟಣೆ ಹೆಚ್ಚಾಗಿರುವಾಗ ಅಪಘಾತ ಸಂಭವಿಸುವ ಸಾಧ್ಯತೆಯಿಂದ ತೆರವು ಮಾಡಿರುವುದಾಗಿ ಸ್ಪಷ್ಟ ಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ