ಗುಬ್ಬಿ
ಮುಂದಿನ ವರ್ಷದಲ್ಲಿಯೇ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ತರಲು ಡಿಕೆಶಿ ನೇತೃತ್ವದ ಕಾಂಗ್ರೆಸ್ ಟೀಂ ಸಜ್ಜಾಗಿದೆ. ಶೀಘ್ರದಲ್ಲಿ ಚುನಾವಣೆ ಸಹ ಜನರ ಮುಂದೆ ಅಚ್ಚರಿಯ ರೀತಿ ಬರಲಿದೆ ಎಂದು ಕಾಂಗ್ರೆಸ್ ರಾಜ್ಯ ವಕ್ತಾರ ಮರುಳೀಧರ್ ಹಾಲಪ್ಪ ಹೇಳಿದರು.
ತಾಲ್ಲೂಕಿನ ಲಿಂಗಮ್ಮನಹಳ್ಳಿ ಗ್ರಾಮದಲ್ಲಿ ನಡೆದ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪದಗ್ರಹಣ ನೇರ ಪ್ರಸಾರ ಹಾಗೂ ಪ್ರತಿಜ್ಞಾವಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತೈಲ ಬೆಲೆ ಸ್ಥಿರವಾಗಿದ್ದರೂ ಸಾರ್ವಜನಿಕರಿಗೆ ಏರಿಕೆ ಬಿಸಿ ಮುಟ್ಟಿಸುತ್ತಿರುವ ಕೇಂದ್ರ ಸರ್ಕಾರದ ಆರ್ಥಿಕ ತಂತ್ರ ಜನರಿಗೆ ತಿಳಿಯುತ್ತಿಲ್ಲ. ರಾಜ್ಯ ಸರ್ಕಾರದ ವರ್ತನೆ ಕೂಡ ಜನರಿಗೆ ಬೇಸರ ತಂದಿದೆ. ಇವರದ ಫಲ ಚುನಾವಣೆ ಬರಲಿದೆ ಎಂದರು.
ಚೀನಾ ಮತ್ತು ಕೊರೋನಾ ಎಂಬ ಅಂಶ ಮುಂದಿಟ್ಟು ಆರ್ಥಿಕ ಹೊಡೆತ ನೀಡುತ್ತಿರುವ ಕೇಂದ್ರ ಸರ್ಕಾರಕ್ಕೆ ಆರು ವರ್ಷದಿಂದ ತೈಲ ಉದ್ದಿಮೆಯಲ್ಲಿ 18 ಲಕ್ಷ ಕೋಟಿ ರೂಗಳ ಲಾಭ ಪಡೆದ ಲೆಕ್ಕ ಕೇಳಿದ್ದೇವೆ. ಈ ಬಗ್ಗೆ 8 ಪತ್ರಗಳನ್ನು ಬರೆದರೂ ಪೆಟ್ರೋಲಿಯಂ ಸಚಿವರು ಉತ್ತರಿಸದೇ ಮೌನವಹಿಸಿದ್ದಾರೆ. ಅಂತರಾಷ್ಟ್ರೀಯ ತೈಲ ಬೆಲೆಯ ವ್ಯತ್ಯಾಸದ ಮಾಹಿತಿ ಕೂಡಾ ತಿಳಿಸುತ್ತಿಲ್ಲ. ಏಕಾಏಕಿ ನಿತ್ಯ ಬೆಲೆ ಏರಿಕೆ ಮಾಡುತ್ತಿರುವ ಉದ್ದೇಶವೇನು ತಿಳಿಯುತ್ತಿಲ್ಲ ಎಂದ ಅವರು ಲೆಕ್ಕ ಕೇಳಿದರೆ ಕಾಂಗ್ರೆಸ್‍ಗೆ ದೇಶಭಕ್ತಿ ಇಲ್ಲ ಎಂದು ವದಂತಿ ಹಬ್ಬಿಸುತ್ತಾರೆ. ಆದರೂ ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಅಬ್ಬರಸಲಿದೆ. ಡಿಕೆಶಿ ಅಲೆಗೆ ಆಡಳಿತ ಪಕ್ಷ ಅಲುಗಾಡಲಿದೆ ಎಂದರು.
ಜಿಲ್ಲಾ ಉಸ್ತುವಾರಿ ರೇವಣಸಿದ್ದಯ್ಯ ಮಾತನಾಡಿ, ದೇಶ ಸದೃಢತೆಗೊಳಿಸುವ ನಿಟ್ಟಿನಲ್ಲಿ ನಮ್ಮ ನೆರೆಹೊರೆ ರಾಷ್ಟ್ರಗಳ ದ್ವೇಷ ಕಟ್ಟಿಕೊಳ್ಳುವ ಅಗತ್ಯವಿಲ್ಲ. ನೇಪಾಳದಂತಹ ಸಣ್ಣ ದೇಶ ನೇಪಾಳವೂ ನಮ್ಮ ವಿರುದ್ದ ಮಾತನಾಡುತ್ತಿದೆ. ಬದ್ದ ವೈರಿ ಪಾಕಿಸ್ತಾನ ಹೊರತು ಪಡಿಸಿದರೆ ಶ್ರೀಲಂಕಾ ದೇಶವು ನಮ್ಮನ್ನು ದ್ವೇಷಿಸುವ ಮಟ್ಟಕ್ಕೆ ತೆರಳಬಾರದಿತ್ತು ಎಂದ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನ ಪದಗ್ರಹಣ ಸಮಾರಂಭಕ್ಕೆ ಸಲ್ಲದ ರೀತಿ ಅಡ್ಡಿಪಡಿಸುತ್ತಿದ್ದ ರಾಜ್ಯ ಸರ್ಕಾರ ಎಲ್ಲಾ ಜಾಗೃತಿ ಅನುಸರಿಸಿ ಕಾರ್ಯಕ್ರಮ ಮಾಡಲು ಅನುಮತಿ ನೀಡಿರಲಿಲ್ಲ. ಅತಿರೇಕಕ್ಕೆ ಮುಟ್ಟುವ ಮುನ್ನ ಮುಖ್ಯಮಂತ್ರಿಗಳು ಅನುಮತಿ ನೀಡುವ ಜಾಣ್ಮೆ ಪ್ರದರ್ಶಿಸಿದರು. ಎಲ್ಲಾ ಪಂಚಾಯಿತಿ ಮಟ್ಟದಲ್ಲೂ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಆಡಳಿತ ಪಕ್ಷಕ್ಕೆ ನಡುಕು ಉಂಟಾಗಿದೆ ಎಂದರು.
ಕಾಂಗ್ರೇಸ್ ಮುಖಂಡ ಹೊನ್ನಗಿರಿಗೌಡ ಮಾತನಾಡಿ, ದೇಶದ ಸರ್ವತೋಮುಖ ಅಭಿವೃದ್ಧಿ ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯವಿದ್ದು ಮುಂಬರುವ ದಿನಗಳಲ್ಲಿ ನೂತನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ಪಕ್ಷವನ್ನು ಸಧೃಢಗೊಳಿಸುವುದರ ಜೊತೆಗೆ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ತಿಳಿಸಿದ ಅವರು ಪಕ್ಷದ ಕಾರ್ಯಕರ್ತರು ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡುವಂತೆ ಕರೆನೀಡಿದರು.
ಗುಬ್ಬಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಸ್.ಎಲ್.ನರಸಿಂಹಯ್ಯ ಮಾತನಾಡಿ, ಕಾಂಗ್ರೆಸ್ ಪಕ್ಷ ಜನಪರವಾಗಿದ್ದು ನೂತನ ಅಧ್ಯಕ್ಷರ ನೇತೃತ್ವದಲ್ಲಿ ಪಕ್ಷವನ್ನು ಮತ್ತಷ್ಟು ಪ್ರಗತಿ ಪಥದತ್ತ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಲಿಂಗಮ್ಮನಹಳ್ಳಿ ರಾಜಣ್ಣ, ಬಿ.ಆರ್.ಭರತ್‍ಗೌಡ, ಕೆ.ಆರ್.ತಾತಯ್ಯ, ಜಿ.ಎಸ್.ಪ್ರಸನ್ನಕುಮಾರ್, ಸಲೀಂಪಾಷ, ಜಿ.ವಿ.ಮಂಜುನಾಥ್, ಮಹಮದ್ ರಫಿ ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








