ಬೆಂಗಳೂರು:
ಕೋವಿಡ್-19 ನಿಯಂತ್ರಣ ಹೆಸರಿನಲ್ಲಿ ರಾಜ್ಯ ಸರ್ಕಾರದಿಂದ ಮೂರು ಸಾವಿರ ಕೋಟಿ ಹಗರಣ ನಡೆದಿದೆ ಎಂದು ಎಸ್.ಡಿ.ಪಿ.ಐ ಆರೋಪಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ SDPI ಪಕ್ಷದ ರಾಜ್ಯ ಉಪಾಧ್ಯಕ್ಷ ಮಜೀದ್ ಖಾನ್ ಅವರು, ರಾಜ್ಯ ಸರ್ಕಾರವು ಕೋವಿಡ್-19 ನಿರ್ವಹಣೆಗಾಗಿ ಇಲ್ಲಿಯವರೆಗೆ ಮೂರು ಸಾವಿರದ ಮುನ್ನೂರ ತೊಂಬತ್ತೆರಡು (3392) ಕೋಟಿ ರೂಪಾಯಿ ಖರ್ಚು ಮಾಡಿರುವುದಾಗಿ ಹೇಳಿಕೊಂಡಿದೆ. ಯಾವ ಯಾವ ವಿಷಯಕ್ಕೆ ಎಷ್ಟು ಖರ್ಚು ಮಾಡಲಾಗಿದೆ ಎಂದು ಮಾಹಿತಿ ಹಕ್ಕು (RTI) ಮೂಲಕ ಕೇಳಿದಾಗ ಆಡಿಟ್ ಆಗಬೇಗು ಎಂಬ ಮಾಹಿತಿಯನ್ನು ರವಾನಿಸುವ ಮೂಲಕ ತಪ್ಪಿಸಿ ಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಯಾವ ರೀತಿ ಹಗರಣ ನಡೆದಿದೆ ಎಂಬುವುದಕ್ಕೆ ಉದಾಹರಣೆಯಾಗಿ ನೋಡಿದರೆ 500 ಮಿ.ಲಿ ಸ್ಯಾನಿಟೈಸರ್ ಒಂದಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ಅಂಗಸಂಸ್ಥೆ ‘ಕರ್ನಾಟಕ ಲಾಜಿಸ್ಟಿಕ್ ಲಿಮಿಟೆಡ್’ ಸಂಸ್ಥೆಯು ರುಪಾಯಿ 78 ರಂತೆ ಪೂರೈಕೆ ಮಾಡಬಹುದು ಎಂದು ಟೆಂಡರ್ ಕರೆದಾಗ ಹೇಳಿಕೊಂಡಿದೆ. ಆದರೆ ಅವರನ್ನು ಹೊರತುಪಡಿಸಿ ಒಂದು ಚಿಕ್ಕ ಬಾಟಲ್ ಸ್ಯಾನಿಟೈಸರಿಗೆ 600 ರೂ.ಯಂತೆ ಖರೀದಿ ಮಾಡಿದ್ದಾರೆ. ಅದೇ ರೀತಿ ಒಂದು ಥರ್ಮಲ್ ಸ್ಕ್ಯಾನರ್ ಬೆಲೆ ಗರಿಷ್ಠ 3,650 ಮಾತ್ರ. ಆದರೆ ಇವರು ಉಲ್ಲೇಖ ಮಾಡಿರುವಂತಹದ್ದು 9,000 ರೂಪಾಯಿ ಎಂದು ಅವರು ವಿವರಿಸಿದ್ದಾರೆ.
ಅದೇ ರೀತಿ ಆರ್.ಅಶೋಕ್ ಉಸ್ತುವಾರಿಯಾಗಿರುವ ರೆವಿನ್ಯೂ ಡಿಪಾರ್ಟ್ಮೆಂಟ್ ಅಧಿಕಾರಿ ಮಂಜುನಾಥ್ ಪ್ರಸಾದ್ ಎಂಬವರು ಹೈಕೋರ್ಟ್ ಗೆ ಹಾಕಿರುವಂತಹ ಅಫಿಡವಿಟ್ ಪ್ರಕಾರ ರಾಜ್ಯದಲ್ಲಿ ಸುಮಾರು 81ಲಕ್ಷ ಆಹಾರ ಪ್ಯಾಕೆಟ್ ಗಳನ್ನು ವಿತರಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಒಂದು ಪ್ಯಾಕೆಟ್ ಗೆ ಗರಿಷ್ಠ 250 ರೂ.ಖರ್ಚು ಆಗಬಹುದು. ಆದರೆ ಇವರು 250 ರಿಂದ 1,650 ರಷ್ಟು ಖರ್ಚು ಮಾಡಿರುವುದಾಗಿ ಉಲ್ಲೇಖಿಸಿದ್ದಾರೆ. ಇದು ಹಗಲು ದರೋಡೆಯಾಗಿದೆ. 81ಲಕ್ಷ ಫೂಡ್ ಪ್ಯಾಕೆಟ್‌ಗಳು ವಿತರಣೆ ಆಗಿದೆ ಎಂಬುವುದಕ್ಕೆ ಸರ್ಕಾರದ ಬಳಿ ಏನು ದಾಖಲೆಗಳಿವೆ ಎಂದು ಮಜೀದ್ ಪ್ರಶ್ನಿಸಿದ್ದಾರೆ.