ಶಿಷ್ಯ ವೇತನಕ್ಕಾಗಿ ಒತ್ತಾಯಿಸಿ ಪತ್ರ ಚಳವಳಿ

ದಾವಣಗೆರೆ:

     ಭಾನುವಾರ ಲಾಕ್‍ಡೌನ್ ಇದುದ್ದರಿಂದ ಮುಷ್ಕರ ಸ್ಥಗಿತಗೊಳಿಸಿದ್ದ ವೈದ್ಯಕೀಯ ವಿದ್ಯಾರ್ಥಿಗಳು, ತಕ್ಷಣವೇ ಶಿಷ್ಯ ವೇತನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಪ್ರಧಾನಮಂತ್ರಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಅಂಚೆ ಪತ್ರಗಳನ್ನು ಬರೆಯುವ ಮೂಲಕ ಪತ್ರ ಚಳವಳಿ ನಡೆಸಿದ್ದಾರೆ.

    ಕಳೆದೊಂದು ವಾರದಿಂದಲೂ ನಗರದ ಜಯದೇವ ವೃತ್ತದಲ್ಲಿ ವಿವಿಧ ಹಂತದ ಹೋರಾಟ ನಡೆಸಿಕೊಂಡು ಬಂದ ವೈದ್ಯಕೀಯ ವಿದ್ಯಾರ್ಥಿಗಳು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಮೂಲಕ ತಮಗೆ ನ್ಯಾಯಯುತವಾಗಿ ಬರಬೇಕಾಗಿರುವ ಶಿಷ್ಯ ವೇತನ ನೀಡಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

   ತಮಗೆ ಕಳೆದ 16 ತಿಂಗಳಿನಿಂದಲೂ ಶಿಷ್ಯ ವೇತನ ನೀಡಿಲ್ಲ. ಸರ್ಕಾರ ಹಾಗೂ ಕಾಲೇಜು ಆಡಳಿತ ಮಂಡಳಿ ಮಧ್ಯೆ ಸಮನ್ವಯತೆ ಕೊರತೆಯಿಂದಾಗಿ ತಮಗೆ ತೀವ್ರ ತೊಂದರೆಯಾಗುತ್ತಿದೆ. ಕೆಳ ವರ್ಗ, ಬಡ, ಮಧ್ಯಮ ವರ್ಗದ ಕುಟುಂಬಗಳ ಹಿನ್ನೆಲೆಯ ತಮಗೆ ಶಿಷ್ಯ ವೇತನವೇ ಆಧಾರವಾಗಿದೆ. ಆದರೆ, ಶಿಷ್ಯ ವೇತನ ನಿಂತಿರುವುದರಿಂದ ವಿದ್ಯಾಭ್ಯಾಸದ ಖರ್ಚು ನಿಭಾಯಿಸುವುದು ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

    ಕೊರೊನಾ ವೈರಸ್ ಹರಡಿದಾಗಿನಿಂದಲೂ ವಿರಮಿಸದೇ ನಮ್ಮ ಕರ್ತವ್ಯ ಪಾಲನೆ ಮಾಡುತ್ತಿದ್ದೇವೆ. ಕೊರೊನಾ ವಾರಿಯರ್ಸ್ ಅಂತಾ ನಮ್ಮನ್ನು ಕರೆಯಲಾಗುತ್ತಿದೆ. ಆದರೆ, ನಮಗೆ ನೀಡಬೇಕಾದ ಶಿಷ್ಯ ವೇತನ ಮಾತ್ರ ಕಳೆದ 16 ತಿಂಗಳಿನಿಂದಲೂ ಬಾಕಿ ಉಳಿದಿದೆ. ನಮ್ಮ ಶಿಷ್ಯ ವೇತನ ನೀಡಬೇಕು ಎಂದು ಪತ್ರದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

    ಪ್ರತಿಭಟನಾ ಸ್ಥಳಕ್ಕೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ ಭೈರತಿ, ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕರಾದ ಎಸ್.ಎ.ರವೀಂದ್ರನಾಥ, ಎಸ್.ವಿ.ರಾಮಚಂದ್ರ ಇತರರು ಭೇಟಿ ನೀಡದ್ದರು. ಈ ವೇಳೆ ಸಚಿವ ಭೈರತಿ, ಸೋಮವಾರದವರೆಗೂ ಹೋರಾಟ ಕೈಬಿಡಿ, ನಿಮ್ಮ ಶಿಷ್ಯ ವೇತನವನ್ನು ಸರ್ಕಾರ ಕೊಡಿಸುತ್ತೇನೆಂಬ ಭರವಸೆ ನೀಡಿದ್ದರು.

    ಆದರೆ, ವೈದ್ಯ ವಿದ್ಯಾರ್ಥಿಗಳು ತಮಗೆ ಬರಬೇಕಾದ ಶಿಷ್ಯ ವೇತನ ಸಿಗದ ಹೊರತು ಹೋರಾಟವನ್ನು ಕೈಬಿಡುವ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟಪಡಿಸಿದ್ದರು. ಹೋರಾಟದ ಮುಂದುವರಿದ ಭಾಗವಾಗಿ ಭಾನುವಾರ ಲಾಕ್ ಡೌನ್ ಹಿನ್ನೆಲೆಯಲ್ಲಿ ಪತ್ರ ಚಳವಳಿ ನಡೆಸಿದರು. ಜು.6ರ ಸೋಮವಾರದಿಂದ ಮತ್ತೆ ಶ್ರೀ ಜಯದೇವ ವೃತ್ತದಲ್ಲಿ ಹೋರಾಟ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link