ಹುಳಿಯಾರು:
ಹುಳಿಯಾರು ಪಟ್ಟಣದಲ್ಲಿ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಅವರ ನಿಕಟವರ್ತಿಗಳನ್ನು ಇಲ್ಲಿನ ಗಾಂಧಿ ಪೇಟೆಯಲ್ಲಿನ ಹಾಸ್ಟೆಲ್ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಕ್ವಾರಂಟೈನಲ್ಲಿದ್ದ ನಾಲ್ವರಿಗೆ ಊಟ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸದೆ ನಿರ್ಲಕ್ಷ್ಯಿಸಿದ್ದಾರೆಂದು ಈ ಪೈಕಿ ಯುವಕನೊಬ್ಬ ಆರೋಪಿಸಿ ವಿಡಿಯೋ ಚಿತ್ರಸಿ ವಾಟ್ಸಪ್ ಗ್ರೂಪ್‍ಗಳಲ್ಲಿ ಹಂಚಿಕೊಳ್ಳಲಾಗಿತ್ತು.
ವಿಚಾರ ತಿಳಿದ ಸಮಾಜ ಸೇವಕ ಡಾ.ರಂಗನಾಥ್ ಮತ್ತು ಸಂಗಡಿಗರು ತಿಂಡಿಯ ವ್ಯವಸ್ಥೆ ಹಾಗೂ ಬಿಸಿ ನೀರಿನ ಸೌಲಭ್ಯಕ್ಕೆ ಹೀಟರ್ ನೀಡಿ ಮಾನವೀಯತೆ ಮೆರೆದಿದಲ್ಲದೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಿಡಿದೆದ್ದು ಪ್ರಶ್ನಿಸಿದ್ದಾರೆ. ಮಾನವೀಯತೆ ದೃಷ್ಠಿಯಿಂದ ಊಟ, ನೀರು ಕೊಡಬೇಕಿದ್ದು ತಕ್ಷಣ ಈ ಕಾರ್ಯಕ್ಕೆ ಒಬ್ಬರನ್ನು ನೇಮಿಸಿ ಕಾಲಕಾಲದೆ ಊಟ, ತಿಂಡಿ, ನೀರು ಕೊಡುವಂತೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕ್ವಾರಂಟೈನ್ ಕೇಂದ್ರದೆದುರೇ ಹುಳಿಯಾರು ಪಪಂ ಮುಖ್ಯಾಧಿಕಾರಿ ಮತ್ತು ಡಾ.ರಂಗನಾಥ್ ಸಂಗಡಿಗರ ನಡುವೆ ಮಾತಿನ ಚಕಮಕಿ ನಡೆದಿದ್ದು ಪೊಲೀಸರ ಸಮ್ಮುಖದಲ್ಲಿ ಹಾದಿರಂಪ ಬೀದಿ ರಂಪವಾಯಿತು. ಪಿಎಸ್‍ಐ ರಮೇಶ್ ಅವರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿ ಪಟ್ಟಣ ಪಂಚಾಯತ್‍ನವರೇ ಮೂಲಭೂತ ಸೌಕರ್ಯ ಕಲ್ಪಿಸುವಂತೆ ತಿಳಿಸಿ ವಿವಾದಕ್ಕೆ ತೆರೆ ಎಳೆದರು.
ಅದರಂತೆ ಪಟ್ಟಣ ಪಂಚಾಯ್ತಿಯಿಂದ ಊಟದ ವ್ಯವಸ್ಥೆ ಮಾಡಲು ತೆರಳಿದಾಗ ನಾವೆಲ್ಲರೂ ಮನೆಯಿಂದಲೇ ಊಟ, ತಿಂಡಿ ತರಿಸಿಕೊಳ್ಳುತ್ತೇವೆ. ಉಳಿದಂತೆ ಕಾಫಿ ಹಾಗೂ ಸೊಳ್ಳೆಬತ್ತಿ, ಸೊಳ್ಳೆಪರದೆ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಒಪ್ಪಿ ಪಟ್ಟಣ ಪಂಚಾಯ್ತಿಯವರು ತೆರಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
