ಪಾವಗಡ
2019-20ನೆ ಸಾಲಿನಲ್ಲಿ ರೈತರು ಬೆಳೆ ವಿಮೆ ಪಾವತಿಸಿದ್ದರೂ ನಿಮ್ಮ ಬೆಳೆ ವಿಮೆ ಮಂಜೂರಾಗಿಲ್ಲ. ನಿಮ್ಮ ವಿಮೆ ಕಂತಿನ ಹಣವನ್ನು ನಿಮಗೆ ವಾಪಸ್ಸು ನೀಡುತ್ತೇವೆಂಬ ಬ್ಯಾಂಕಿನವರ ಹೇಳಿಕೆಯಿಂದ ಕೆರಳಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ವತಿಯಿಂದ ಸೋಮವಾರ ಪಟ್ಟಣದ ಎಸ್‍ಬಿಐ ಬ್ಯಾಂಕಿಗೆ ಮುತ್ತಿಗೆ ಹಾಕಿ ಮನವಿ ಪತ್ರ ಸಲ್ಲಿಸಿದರು.
ಇದೇ ವೇಳೆ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಪೂಜಾರಪ್ಪ ಮಾತನಾಡಿ, ಪಾವಗಡ ತಾಲ್ಲೂಕು ಶಾಶ್ವತ ಬರಪೀಡಿತ ಪ್ರದೇಶವಾಗಿದ್ದು, ಇಲ್ಲಿನ ರೈತರು ಕಳೆದ ವರ್ಷ ಬೆಳೆ ವಿಮಾ ಕಂತನ್ನು ಯನ್ನು ಪಾವತಿಸಿದ್ದರು. ಆದರೆ ರೈತರು ಶಾಖೆಗೆ ತೆರಳಿ ವಿಮೆ ಹಣವನ್ನು ಕೇಳಿದಾಗ, ಶಾಖೆಯ ವ್ಯವಸ್ಥಾಪಕರು ನೀವು ವಿಮಾ ಕಂತು ಪಾವತಿಸಿಲ್ಲ, ನಿಮಗೆ ವಿಮಾ ಹಣ ಮಂಜೂರಾಗಿಲ್ಲ, ನಿಮಗೆ ಬೆಳೆ ವಿಮಾ ಹಣ ಬಂದಿರುವುದಿಲ್ಲ, ಬಂದರೂ ಅದನ್ನು ಸರ್ಕಾರಕ್ಕೆ ವಾಪಸ್ಸು ನೀಡಲಾಗುವುದೆಂದು ಹೇಳಿದ್ದಾರೆ. ಅಲ್ಲದೆ ಪ್ರತಿದಿನ ರೈತರನ್ನು ಶಾಖೆಗೆ ತಿರುಗಾಡಿಸುತ್ತಿದ್ದು, ತಕ್ಷಣವೆ ರೈತರು ಪಾವತಿಸಿದ ವಿಮಾ ಕಂತಿಗೆ ಬೆಳೆ ವಿಮೆ ಹಣ ಪಾವತಿಸದಿದ್ದಲ್ಲಿ ಶಾಖೆಯ ಮುಂದೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಪೂಜಾರಪ್ಪ ಎಚ್ಚರಿಕೆ ನೀಡಿದ್ದಾರೆ.
ಎಸ್‍ಬಿಐ ಬ್ಯಾಂಕಿನ ವ್ಯವಸ್ಥಾಪಕ ವೆಂಕಟರಾವ್ ರೈತರ ಮನವಿ ಪತ್ರ ಸ್ವೀಕರಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪಿಸಲಾಗುವುದೆಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕೃಷ್ಣರಾವ್, ವೀರಭದ್ರಪ್ಪ, ನಡುಪಣ್ಣ, ವೆಂಕಟಸ್ವಾಮಿ, ಇ.ಸಿದ್ದಪ್ಪ, ಶಿವರಾಜು, ಲಕ್ಷ್ಮನಾಯ್ಕ್, ಹಳ್ಳಪ್ಪ, ಈಶ್ವರಪ್ಪ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ