ದಲಿತರ ಜಮೀನು ಕಬಳಿಸಲು ಹುನ್ನಾರ : ಆರೋಪ

ಮಧುಗಿರಿ

    ಪರಿಶಿಷ್ಟ ಜಾತಿಯವರು ಉಳುಮೆ ಮಾಡುತ್ತಿದ್ದ ಸಾಗುವಳಿ ಜಮೀನಿನಲ್ಲಿ ಪಣ್ಣೇನಹಳ್ಳಿ ಗ್ರಾಮದ ಅನ್ಯಕೋಮಿನ ಕೆಲವರು ದೌರ್ಜನ್ಯ ನಡೆಸಿದ್ದಾರೆಂದು ದಲಿತ ಮುಖಂಡರು ಆರೋಪಿಸಿ ಮಧುಗಿರಿ ಉಪವಿಭಾಗಧಿಕಾರಿ ಡಾ.ಕೆ.ನಂದಿನಿದೇವಿರವರಿಗೆ ಮನವಿ ಸಲ್ಲಿಸಿದರು.

    ಪಟ್ಟಣದ ಉಪವಿಭಾಗಧಿಕಾರಿಗಳ ಕಚೆರಿಗೆ ಆಗಮಿಸಿದ ಕೊರಟಗೆರೆ ತಾಲ್ಲೂಕಿನ ದಲಿತ ಮುಖಂಡರು, ನಮ್ಮ ಬಡ ರೈತರಿಗೆ ಅನ್ಯಾಯವಾಗಿದೆ, ತೊಗರಿಘಟ್ಟ ಗ್ರಾಮದ ನಮ್ಮ ಪರಿಶಿಷ್ಟ ಜಾತಿಯವರು ಇಲ್ಲಿಗೆ ಸುಮಾರು 30-40 ವರ್ಷಗಳಿಂದ ಸರ್ವೆ ನಂಬರ್ 24 ರಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಸರ್ಕಾರಿ ನಿಯಮಾವಳಿಯಂತೆ 2017-18 ನೆ ಸಾಲಿನಲ್ಲಿ ಬಗರ್ ಹುಕುಂ ಸಮಿತಿಯಿಂದ ಸುಮಾರು 15 ಕುಟುಂಬಗಳಿಗೆ ಸಾಗುವಳಿ ಪತ್ರಗಳನ್ನು ಕೊರಟಗೆರೆ ತಹಸಿಲ್ದಾರ್ ನೀಡಿರುತ್ತಾರೆ.

     ಇದರನ್ವಯ ನಮ್ಮ ಬಡ ಕುಟುಂಬಗಳು ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ದಲಿತರ ಜಮೀನುಗಳ ಮೇಲೆ ಕಣ್ಣು ಹಾಕಿರುವ ಕೆಲವರು ಉದ್ದೇಶಪೂರ್ವಕವಾಗಿ ಜುಲೈ 15 ತಾರೀಖು ಪಣ್ಣೇನಹಳ್ಳಿಯ ಅನ್ಯಕೋಮಿನವರಾದ ವೀರನಾಗಯ್ಯ ಮತ್ತು ಶಿವಲಿಂಗಯ್ಯ ಕೆಲವರನ್ನು ಒಕ್ಕಲೆಬ್ಬಿಸಿ, ನಮ್ಮ ದಲಿತರು ವ್ಯವಸಾಯ ಮಾಡುತ್ತಿದ್ದ ಸ್ಥಳಕ್ಕೆ ಬಂದು ಅವಾಚ್ಯವಾಗಿ ನಿಂದಿಸಿ, ದೌರ್ಜನ್ಯ ನಡೆಸಿ ಕೃಷಿಯಲ್ಲಿ ತೊಡಗಿದ್ದ ಗಂಗರಾಜು, ರಂಗಮ್ಮ, ಮಂಜಮ್ಮ, ಮುದ್ದಕ್ಕ, ಲಕ್ಷೀನರಸಪ್ಪ, ವೀರಣ್ಣ ಇವರುಗಳ ಮೇಲೆ ದಬ್ಬಾಳಿಕೆ ನಡೆಸಿ, ಬೆದರಿಸಿರುತ್ತಾರೆ. ಇವರುಗಳ ಮೇಲೆ ಈಗಾಗಲೇ ಕೊರಟಗೆರೆ ಪೊಲಿಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಈ ಸಂಬಂಧ ನಮ್ಮವರಿಗೆ ನ್ಯಾಯ ಒದಗಿಸಬೇಕೆಂದು ದಲಿತ ಮುಖಂಡ ದಾಡಿ ವೆಂಕಟೇಶ್ ತಿಳಿಸಿದರು.

    ಕೊರಟಗೆರೆ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮೀನರಸಯ್ಯ ಮಾತನಾಡಿ, ಜಮೀನು ಹೊಂದಿಲ್ಲದ ನಮ್ಮ ದಲಿತರಿಗೆ ಸರ್ಕಾರದ ನಿಯಮದಲ್ಲಿ ಜಮೀನು ನೀಡಿದ್ದು, ಈಗ ಇದ್ದಕ್ಕಿದ್ದಂತೆ ನಮ್ಮವರ ಮೇಲೆ ದೌರ್ಜನ್ಯ ನಡೆಸಿ, ಜಮೀನು ಕಬಳಿಸಲು ಹುನ್ನಾರ ನಡೆಸುವವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ ಪರಿಶಿಷ್ಟ ಸಮುದಾಯದವರಿಗೆ ನ್ಯಾಯ ಕೊಡಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಇಂತಹ ದೌರ್ಜನ್ಯಗಳ ವಿರುದ್ದ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದರು.

     ಮನವಿ ಸ್ವೀಕರಿಸಿ ಮಾತನಾಡಿದ ಉಪವಿಭಾಗ ಅಧಿಕಾರಿ ಡಾ.ಕೆ.ನಂದಿನಿದೇವಿ, ಈ ಘಟನೆಯ ಬಗ್ಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಹಾಗೂ ಕೊರಟಗೆರೆ ತಹಸಿಲ್ದಾರ್ ರವರಿಗೆ ಈ ವಿಚಾರವಾಗಿ ಸೂಕ್ತ ಕ್ರಮ ತೆಗೆದುಕೊಳ್ಳಲು ತಿಳಿಸುತ್ತೇನೆ. ಬಡ ವರ್ಗದವರಿಗೆ ಕಾನೂನಿನಲ್ಲಿ ಅನ್ಯಾಯವಾಗಲು ಅವಕಾಶ ನೀಡುವುದಿಲ್ಲ ಎಂದು ಆಗಮಿಸಿದ್ದ ಮಹಿಳೆಯರಿಗೆ ಧೈರ್ಯ ಹೇಳಿ ಕಳುಹಿಸಿದರು.
ಈ ಸಂದರ್ಭದಲ್ಲಿ ದಲಿತ ಸೇನೆ ಅಧ್ಯಕ್ಷ ಗಂಗರಾಜು, ದಲಿತ ಮುಖಂಡರಾದ ನರಸಿಂಹಮೂರ್ತಿ, ಗೋವಿಂದರಾಜು, ಚಿಕ್ಕಹನುಮಯ್ಯ, ಆನಂದ್, ನಾಗರತ್ನ, ಭಾಗ್ಯಮ್ಮ, ರಂಗಮ್ಮ, ಮಂಜಮ್ಮ, ನರಸಮ್ಮ, ರತ್ನಮ್ಮ ಇನ್ನಿತರ ದಲಿತ ಮುಖಂಡರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link