ವಿಶ್ವನಾಥ್ ನಾಮ ನಿರ್ದೇಶನ ಕಾನೂನು ಬಾಹಿರ : ಸಾ ರಾ ಮಹೇಶ್

ಬೆಂಗಳೂರು

     ಮೈಸೂರಿನಲ್ಲಿ ಪಾರುಪತ್ಯಕ್ಕೆ ಹೆಚ್.ವಿಶ್ವನಾಥ್ ಹಾಗೂ ಸಾ.ರಾ.ನಡುವಿನ ರಾಜಕೀಯ ಕೆಸರೆರಚಾಟ ಆರೋಪಪ್ರತ್ಯಾರೋಪ ಮೈತ್ರಿ ಸರ್ಕಾರದ ಪತನದ ನಂತರ ಸಾಕಷ್ಟು ದೊಡ್ಡಮಟ್ಟಕ್ಕೆ ಹೋಗಿತ್ತು. ಆಗಾಗ ಇಬ್ಬರೂ ಪರಸ್ಪರ ದೋಷಾರೋಪಣೆ ಮಾಡುವುದು ಸಹಜ ಎಂಬಂತಾಗಿದೆ. ದೇವರ ಮೇಲೆ ಆಣೆ ಪ್ರಮಾಣ, ಸವಾಲು, ಶಪಥ ಮಟ್ಟಕ್ಕೂ ಹೋಗಿತ್ತು. ಇದೀಗ ವಿಧಾನ ಪರಿಷತ್ತಿಗೆ ಹೆಚ್.ವಿಶ್ವನಾಥ್ ಅವರನ್ನು ಸಾಹಿತ್ಯ ಕ್ಷೇತ್ರದಿಂದ ನಾಮನಿರ್ದೇಶನ ಮಾಡಿರುವುದು ಸಾ.ರಾ.ಮಹೇಶ್ ಕಣ್ಣನ್ನು ಕೆಂಪು ಮಾಡಿದ್ದು, ವಿಶ್ವನಾಥ್ ನಾಮನಿರ್ದೇಶನ ಕಾನೂನುಬಾಹಿರ ಎಂದು ಸಾ.ರಾ.ಮಹೇಶ್ ಒತ್ತಿ ಹೇಳಿದರು.

      ಮೈಸೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾ.ರಾ.ಮಹೇಶ್, ವಿಶ್ವನಾಥ್ ಕಾನೂನುಬಾಹಿರವಾಗಿ ನಾಮ ನಿರ್ದೇಶನ ಗೊಂಡಿದ್ದಾರೆ. ದುರಂತ ನಾಯಕ ಸಾಹಿತ್ಯ ಕ್ಷೇತ್ರಕ್ಕೆ ಹೋಗಿರುವುದರಿಂದ ರಾಜಕೀಯ ಕ್ಷೇತ್ರ ಶುಭ್ರವಾಗಿದೆ. ಇನ್ನು ಸಾಹಿತ್ಯ ಕ್ಷೇತ್ರವನ್ನು ದೇವರೇ ಕಾಪಾಡಬೇಕು. ರಾಜಕೀಯ ಕ್ಷೇತ್ರವನ್ನು ಹೊಲಸುಗೊಳಿಸಿದಂತೆ ಸಾಹಿತ್ಯ ಕ್ಷೇತ್ರವನ್ನು ವಿಶ್ವನಾಥ್ ಹೊಲಸು ಮಾಡದಿದ್ದರೆ ಸಾಕು ಎಂದು ಸಾ.ರಾ.ಮಹೇಶ್ ಲೇವಡಿ ಮಾಡಿದರು.

      ಇತ್ತ ವಿಧಾನಸೌಧದಲ್ಲಿ ಸಾ.ರಾ ಮಾತಿಗೆ ಕಿಡಿಕಾರಿರುವ ಹೆಚ್.ವಿಶ್ವನಾಥ್, ತಮ್ಮ ಆಯ್ಕೆ ಕಾನೂನುಬದ್ಧವಾಗಿದೆ ಎಂದು ಸಮರ್ಥಿಸಿಕೊಂಡು, ಸಾ.ರಾ.ಮಹೇಶ್ ಅನ್ನು ತಿಪ್ಪೆಗುಂಡಿಗೆ ಹೋಲಿಸಿದ್ದಾರೆ.

    ಸಾ.ರಾ.ಮಹೇಶ್ ಒಂದು ತಿಪ್ಪೆಗುಂಡಿ. ಅಂತಹ ತಿಪ್ಪೆಗುಂಡಿಗೆ ಕಲ್ಲು ಎಸೆದು ತಮ್ಮ ಬಿಳಿ ಬಟ್ಟೆಯನ್ನು ಮಲೀನ ಮಾಡಿಕೊಳ್ಳುವುದಿಲ್ಲ ಎಂದು ಸೂಚ್ಯವಾಗಿ ಹೇಳಿದರು.ವಕೀಲನಾಗಿ ಕೆಲಸ ಮಾಡಿರುವ ತಮಗೆ ತಮ್ಮ ನಾಮ ನಿರ್ದೇಶನ ಕಾನೂನುಬದ್ಧವಾಗಿದೆ ಎಂಬುದು ತಿಳಿದಿದೆ. ಸರಿಯಾಗಿ ತೀರ್ಪು ಓದದೆ ಕೆಲವು ಕಾನೂನು ತಜ್ಞರು ಮಾತನಾಡಿದ್ದಾರೆ. ತಮ್ಮ ನಾಮನಿರ್ದೇಶನ ಬಗ್ಗೆ ರಾಜ್ಯಪಾಲರಿಗೆ ಮಾತ್ರವಲ್ಲ ಯಾರಿಗೆ ಬೇಕಿದ್ದರೂ ಪತ್ರ ಬರೆಯಲಿ.

       ಇದಕ್ಕೂ ತಮಗೂ ಸಂಬಂಧವಿಲ್ಲ. ಇದನ್ನೆಲ್ಲ ಸರ್ಕಾರ ನೋಡಿಕೊಳ್ಳುತ್ತದೆ ಎಂದರು.ಎಸ್.ಎಲ್.ಬೈರಪ್ಪ ದೊಡ್ಡ ಸಾಹಿತಿಯೇ. ಅವರಿಗೆ ಸರಸ್ವತಿ ಸಮ್ಮಾನ್ ಪ್ರಶಸ್ತಿಯೂ ಸಿಕ್ಕಿದೆ. ಸಾರಸ್ವತ ಲೋಕವನ್ನು ಬೈರಪ್ಪ ತುಂಬಿದ್ದಾರೆ. ತಾವು ಸಹ ಸಾಹಿತಿಯೇ. ರಾಜತಾಂತ್ರಿಕ ವಿಷಯಗಳನ್ನು ಒಳಗೊಂಡಂತೆ ರಾಜಕಾರಣದ ಬಗ್ಗೆ 8 ಪುಸ್ತಕಗಳಲ್ಲಿ ಸಾಕಷ್ಟು ಬರೆದಿದ್ದೇನೆಹೀಗಾಗಿ ಸಾಹಿತ್ಯ ಕೋಟ ಅಡಿ ತಮಗೆ ಮೇಲ್ಮನೆಗೆ ಸ್ಥಾನ ಸಿಕ್ಕಿದೆ. ಏನೂ ತಿಳಿಯದೆ ತಮ್ಮನ್ನು ಆಯ್ಕೆ ಮಾಡಲು ಎಜಿ ಏನೂ ದಡ್ಡರಲ್ಲ. ಸರ್ಕಾರ ತಿಳುವಳಿಕೆಯಿಂದ ತಮ್ಮನ್ನು ನಾಮನಿರ್ದೇಶನ ಮಾಡಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap