ಬೆಂಗಳೂರು:
ಸರ್ಕಾರಕ್ಕೆ ಒಂದು ವರ್ಷ ಮುಗಿದಿದೆ, ಸಾಧನೆ ಬಿಚ್ಚಿಟ್ಟಿದ್ದಾರೆ. ಎಲ್ಲಾ ಮಂತ್ರಿಗಳನ್ನೂ ಅವರು ಪರಿಚಯ ಮಾಡಿಸಿದ್ದಾರೆ. ಯಡಿಯೂರಪ್ಪನವರ ಆಟ ಪ್ರಥಮ ಒಂದು ತಿಂಗಳು ಮಂತ್ರಿ ಮಂಡಲ ಇರದೆ ತಿಕ್ಕಾಟ, ಎರಡನೇ ತಿಂಗಳು ಪರದಾಟ, ಮೂರನೇ ತಿಂಗಳು ದೊಂಬರಾಟ. 11 ತಿಂಗಳಿಗೆ ಲೂಟಿ ಆಟ ನಡೆಸಿದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಿವಿಗೆ ಇಂಪಾದ ಮಾತುಗಳನ್ನು ಆಡಿದ್ದಾರೆ. ನುಡಿದಂತೆ ಯಾವುದನ್ನೂ ಜನರಿಗೆ ತಲುಪಿಸಿಲ್ಲ, ಸುಳ್ಳಿನ ಸರಮಾಲೆ ಕೊಟ್ಟರು. ನೆರೆ ಪರಿಹಾರ ಕೊಡಲು ಈವರೆಗೂ ಸಾಧ್ಯವಾಗಿಲ್ಲ, ಮನೆ ಕಟ್ಟಿಕೊಡುತ್ತೇನೆ ಎಂದು ಸುಳ್ಳು ಹೇಳಿದರು. 33 ಸಾವಿರ ಕೋಟಿ ರೂ. ಪ್ರವಾಹ ನಷ್ಟದ ಮಾಹಿತಿ ನೀಡಿದರು. ಕೇಂದ್ರದಿಂದ 1,800 ಕೋಟಿ ಮಾತ್ರ ಬಂತು. ಮಧ್ಯಂತರ ಪರಿಹಾರ 5 ಸಾವಿರ ಕೋಟಿ ಮನವಿ ಮಾಡಿದರು. ಆದರೆ, ಯಾವುದೇ ಪರಿಹಾರ ಬರಲಿಲ್ಲ ಎಂದು ಸರ್ಕಾರವನ್ನು ಟೀಕಿಸಿದರು.
ಕೋವಿಡ್ ವಿಚಾರದಲ್ಲೂ 2,000 ಕೋಟಿ ಲೂಟಿ ಮಾಡಿದ್ದಾರೆ. 1,600 ಕೋಟಿ ಘೋಷಣೆ ಮಾಡಿದ್ದಾರಲ್ಲ, ಯಾರ್ಯಾರಿಗೆ ಕೊಟ್ಟಿದ್ದಾರೆ ಅನ್ನೋದನ್ನು ಪಟ್ಟಿ ಕೊಡಲಿ. ಸಹಾಯಧನ ಕೊಟ್ಟ ಫಲಾನುಭವಿಗಳ ಪಟ್ಟಿ ಕೊಡಿ. ಕೋವಿಡ್ ನಿಂದ ಸತ್ತ ಮೇಲೆ ಪರಿಹಾರ ಕೊಡುತ್ತಿರಾ(?) ಎಂದು ಪ್ರಶ್ನೆ ಮಾಡಿದರು.
ಈ ದೇಶದ ಪ್ರಧಾನಿ 10 ಪರ್ಸೆಂಟ್ ಸರ್ಕಾರ ಎಂದಿದ್ದರು. ಈಗ ನಿಮ್ಮ ಸರ್ಕಾರ ಎಷ್ಟು ಪರ್ಸೆಂಟ್ ಹೋಗಿದೆ ಲೆಕ್ಕ ಇದೆಯಾ(?) ಕೋವಿಡ್ ಖರೀದಿಯಲ್ಲಿ 209-300 ಪರ್ಸೆಂಟ್ ಹಣ ಹೊಡೆದಿದ್ದಾರೆ. ನಮ್ಮ ಮೇಲೂ ತನಿಖೆ ಮಾಡಿ. ನಿಮ್ಮ ಸರ್ಕಾರದ ಅವ್ಯವಹಾರದ ವಿರುದ್ಧ ತನಿಖೆ ಮಾಡಿ. ಕೊರೊನಾ ವಿಚಾರದಲ್ಲಿ ನಡೆದ ಭ್ರಷ್ಟಾಚಾರದ ತನಿಖೆ ಆಗಲಿ. ನಿಮ್ಮ ಗುತ್ತಿಗೆದಾರರನ್ನ ಕರೆದು ಕೇಳಿ. ಎಷ್ಟು ಪರ್ಸೆಂಟ್ ಕಮಿಷನ್ ಹೊಡೆದಿದ್ದಾರೆ ಎಂದು ತಿಳಿಯುತ್ತದೆ. ಜಾಹೀರಾತಿನಲ್ಲಿ 10 ಸಾವಿರ ಬೆಡ್ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಆದರೆ, ಅಧಿಕಾರಿಗಳು ಕೇವಲ 6,500 ಬೆಡ್ ಎಂದು ಮಾಹಿತಿ ನೀಡುತ್ತಾರೆ. ವೃದ್ಯಾಪ್ಯ ಹಾಗೂ ವಿಧವೆ ವೇತನಕ್ಕೆ ತಡೆ. ಇದು ನಿಮ್ಮ ಒಂದು ವರ್ಷದ ಸಾಧನೆ(!) ಎಂದು ಡಿಕೆಶಿ ಅವರು ಬಿಎಸ್ವೈ ನೇತೃತ್ವದ ಸರ್ಕಾರವನ್ನು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರ ಇದೆ. ಕೇಂದ್ರದಿಂದ ಯಾವ ಕೊಡುಗೆ ಬಂದಿದೆ ತೋರಿಸಿ, ಭ್ರಷ್ಟಾಚಾರದ ಕುರಿತು ನಾವು ಸತ್ಯಾಂಶ ತಿಳಿಸಿದ್ದೇವೆ. ಐದು ಜನ ಮಂತ್ರಿಗಳಿಂದ ಉತ್ತರ ಕೊಟ್ಟರು. ನಿಮ್ಮ ಗುತ್ತಿಗೆದಾರರು ನಮಗೆ ಪರಿಚಯ ಇಲ್ಲವೇ(?) ನಿಮ್ಮ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೆಡಿಕಲ್ ಕಿಟ್ ಖರೀದಿ ದುಬಾರಿ ಬಗ್ಗೆ ಒಪ್ಪಿಕೊಂಡಿದೆ ಸರ್ಕಾರ. ಆವಾಗ ದುಬಾರಿ ಇತ್ತು, ಈಗ ಕಡಿಮೆ ಆಗಿದೆ. ಇದು ಎಲ್ಲಾದರೂ ಉಂಟೇ(?) ಬೇರೆ ರಾಜ್ಯಗಳಲ್ಲಿ ಖರೀದಿ ಮಾಡಿರುವುದು ಎಲ್ಲಿಂದ ಹಾಗಾದ್ರೆ(?) ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ