ಅಂಬಾಲಾ
ಫ್ರಾನ್ಸ್ ನಿಂದ ಬುಧವಾರ ಐದು ರಫೇಲ್ ಯುದ್ಧ ವಿಮಾನಗಳು ಹರ್ಯಾಣದ ಅಂಬಾಲಾದಲ್ಲಿರುವ ವಾಯುನೆಲೆಗೆ ಬಂದಿಳಿಯಲು ಕ್ಷಣಗಣನೆ ಆರಂಭವಾಗಿದ್ದು ಈ ಸಂದರ್ಭದಲ್ಲಿ ತೀವ್ರ ಭದ್ರತೆ ಏರ್ಪಡಿಸಲಾಗಿದೆ.ಯುದ್ಧ ವಿಮಾನ ಬಂದಿಳಿಯುವ ಸಂದರ್ಭದಲ್ಲಿ ಮತ್ತು ಬಂದಿಳಿದ ಮೇಲೆ ವಾಯುನೆಲೆಯ ಮತ್ತು ಅದರ ಅಕ್ಕಪಕ್ಕದ ಪ್ರದೇಶಗಳ ಫೋಟೋ ಮತ್ತು ವಿಡಿಯೊಗಳನ್ನು ತೆಗೆಯುವುದನ್ನು ನಿಷೇಧಿಸಲಾಗಿದೆ. ಅಂಬಾಲಾ ವಾಯುನೆಲೆಯ ಸುತ್ತಮುತ್ತ 3 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಜನರು ಖಾಸಗಿ ಡ್ರೋನ್ ಗಳನ್ನು ಹಾರಿಸುವುದಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದೆ.
ಭದ್ರತೆಯ ಕ್ರಮವಾಗಿ ನಿನ್ನೆಯಿಂದ ಅಂಬಾಲಾದಲ್ಲಿ ಸೆಕ್ಷನ್ 144ನ್ನು ಜಾರಿಗೆ ತರಲಾಗಿದ್ದು, ನಾಲ್ಕು ಮತ್ತು ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ವಾಯುನೆಲೆ ಸುತ್ತಮುತ್ತ, ಧುಲ್ಕೊಟ್, ಬಲ್ದೇವ್ ನಗರ್, ಗರ್ನಾಲಾ ಮತ್ತು ಪಂಜ್ ಖೊರಾದಲ್ಲಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಶೋಕ್ ಶರ್ಮ ತಿಳಿಸಿದ್ದಾರೆ.
ರಫೇಲ್ ಯುದ್ಧ ವಿಮಾನವನ್ನು ಸ್ವಾಗತಿಸಲು ಅಂಬಾಲಾದ ಜನರು ಉತ್ಸಾಹಭರಿತರಾಗಿದ್ದಾರೆ. ಇಂದು ಸಾಯಂಕಾಲ 7ರಿಂದ 7.30ರೊಳಗೆ ಅಂಬಾಲಾದ ಜನರು ಮೊಂಬತ್ತಿ ಹಚ್ಚಿ ರಫೇಲ್ ಯುದ್ಧ ವಿಮಾನವನ್ನು ಸ್ವಾಗತಿಸಲಿದ್ದಾರೆ ಎಂದು ಅಂಬಾಲಾ ನಗರದ ಬಿಜೆಪಿ ಶಾಸಕ ಅಸೀಮ್ ಗೊಯಲ್ ತಿಳಿಸಿದ್ದಾರೆ.
ನಿನ್ನೆ ಫ್ರಾನ್ಸ್ ನಿಂದ ಹೊರಟಿರುವ ರಫೇಲ್ ಯುದ್ಧ ವಿಮಾನ 7 ಸಾವಿರ ಕಿಲೋ ಮೀಟರ್ ಹಾರಾಟ ಮಾಡಿ ಆಕಾಶದಲ್ಲಿಯೇ ಇಂಧನವನ್ನು ತುಂಬಿಕೊಂಡು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ತಂಗಿ ಇಂದು ಭಾರತದ ಹರ್ಯಾಣದಲ್ಲಿರುವ ಅಂಬಾಲಾ ವಾಯುನೆಲೆಗೆ ಬಂದಿಳಿಯಲಿದೆ. ವಿಮಾನದಲ್ಲಿ ಮೂರು ಸಿಂಗಲ್ ಸೀಟರ್ ಮತ್ತು ಎರಡು ಅವಳಿ ಸೀಟುಗಳಿರುತ್ತದೆ.ಫ್ರಾನ್ಸ್ ನಿಂದ ಹೊರಟ ಯುದ್ಧ ವಿಮಾನಕ್ಕೆ ಆಕಾಶದಲ್ಲಿ ಮಧ್ಯೆ ಇಂಧನ ತುಂಬಿಸುವ ಫೋಟೋವನ್ನು ಭಾರತೀಯ ವಾಯುಪಡೆ ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿತ್ತು.
ಭಾರತೀಯ ವಾಯುಪಡೆಯ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲು ಅತ್ಯಾಧುನಿಕ 36 ರಫೇಲ್ ಯುದ್ಧ ವಿಮಾನ ಖರೀದಿಗೆ ಭಾರತ 2016ರಲ್ಲಿ 59 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಇಂದು ಆಗಮಿಸುವ ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆಗೆ ಸೇರಿಸುವ ಕಾರ್ಯಕ್ರಮ ನಂತರ ಮಾಡಿದರೂ ಸಹ ಸರ್ಕಾರದ ದಾಖಲೆ ಪ್ರಕಾರ ಇಂದು ಸೇರ್ಪಡೆಯಾಗುತ್ತದೆ.
ಅಂಬಾಲಾ ವಾಯುನೆಲೆಯನ್ನು 1948ರಲ್ಲಿ ನಿರ್ಮಾಣ ಮಾಡಲಾಗಿತ್ತು. ಹರ್ಯಾಣ ರಾಜ್ಯದ ಅಂಬಾಲಾ ನಗರದ ಪೂರ್ವ ಭಾಗದಲ್ಲಿ ಈ ವಾಯುನೆಲೆಯಿದೆ. ಮಿಲಿಟರಿ ಮತ್ತು ಸರ್ಕಾರದ ವಿಮಾನಗಳಿಗೆ ಈ ವಾಯುನೆಲೆಯನ್ನು ಬಳಸಿಕೊಳ್ಳಲಾಗುತ್ತದೆ. ರಫೇಲ್ ಯುದ್ಧ ವಿಮಾನ ನಿಲುಗಡೆಗೆ ಈ ವಾಯುನೆಲೆಯಲ್ಲಿ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲಾಗಿದೆ.ಜಾಗ್ವೌರ್ ಯುದ್ಧ ವಿಮಾನದ ಎರಡು ಸ್ಕ್ವಾಡ್ರನ್ ಗಳು ಮತ್ತು ಮಿಗ್-21 ಬಿಸೊನ್ ನ ಒಂದು ಸ್ಕ್ವಾಡ್ರನ್ ಗಳು ಈ ವಾಯುನೆಲೆಯಲ್ಲಿದೆ. ಏರ್ ಫೋರ್ಸ್ ಮಾರ್ಶಲ್ ಅರ್ಜನ್ ಸಿಂಗ್ ಈ ವಾಯುನೆಲೆಗೆ ಮೊದಲ ಕಮಾಂಡರ್ ಆಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ