ಹುಳಿಯಾರು
ಹುಳಿಯಾರು ಪಟ್ಟಣದಲ್ಲಿ ಕೊರೊನಾ ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದು ಮತ್ತೆ ಮೂವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಇಲ್ಲಿನ ಖಾಸಗಿ ಗೋಲ್ಡ್ ಲೋನ್ ಶಾಖೆಯ 38 ವರ್ಷದ ವ್ಯವಸ್ಥಾಪಕ ಹಾಗೂ ಆಜಾದ್ ನಗರದ 55 ವರ್ಷದ ವ್ಯಕ್ತಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಅಲ್ಲದೆ ಖಾಸಗಿ ಹಣಕಾಸು ಸಂಸ್ಥೆಯ ಮೂವರು ಸಿಬ್ಬಂದಿಗೆ ಸೋಂಕು ತಗುಲಿದೆ.
ಐಐಎಫ್ಎಲ್ ಮ್ಯಾನೇಜರ್ ವಾರದಿಂದಲೂ ಜ್ವರದಿಂದ ಬಳಲುತ್ತಿದ್ದು ರಜೆ ಹಾಕಿ ತಮ್ಮೂರಿಗೆ ತೆರಳಿ ಕೊರೊನಾ ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ಬಂದಿತ್ತು. ಪರಿಣಾಮ ಮತ್ತೆ ಕೆಲಸಕ್ಕೆ ಹೋಗಲು ಹುಳಿಯಾರಿಗೆ ಬಂದಾಗ ಮತ್ತೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 108 ಆಂಬ್ಯುಲೆನ್ಸ್ನಲ್ಲಿ ಚಿಕ್ಕನಾಯಕನಹಳ್ಳಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ನಂತರ ಕೋವಿಡ್ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿದೆ.
ಇನ್ನು ಆಜಾದ್ನಗರದ 55 ವರ್ಷದ ನಿವಾಸಿಗೆ ವಾರದ ಹಿಂದೆ ಕೊರೊನಾ ಸೋಂಕು ದೃಢವಾಗಿತ್ತು. ಹಾಗಾಗಿ ತುಮಕೂರು ಕೋವಿಡ್ ಕೇಂದ್ರಕ್ಕೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೋವಿಡ್ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ. ಮೃತ ದೇಹವನ್ನು ಹುಳಿಯಾರಿಗೆ ಕಳುಹಿಸಿಕೊಟ್ಟ ಹಿನ್ನೆಲೆಯಲ್ಲಿ ಇಲ್ಲಿನ ಖಬರಸ್ಥಾನದಲ್ಲಿ ಕೋವಿಡ್ ಸ್ವಯಂ ಸೇವಕರ ಸಹಕಾರದಿಂದ ಅಂತ್ಯ ಕ್ರಿಯೆ ನೆರವೇರಿಸಲಾಯಿತು.
ಇನ್ನೂ ತೊರೆಸೂರಗೊಂಡನಹಳ್ಳಿ ರಸ್ತೆಯಲ್ಲಿರುವ ಖಾಸಗಿ ಹಣಕಾಸು ಕಂಪನಿಯ ಮೂರು ಮಂದಿಗೆ ಕೊರೊನಾ ದೃಢಪಟ್ಟಿದೆ. ಇಲ್ಲಿಗೆ ತುರುವೇಕೆರೆಯಿಂದ ಕೊರೊನಾ ಪಾಸಿಟಿವ್ ಬಂದಿದ್ದ ಸಿಬ್ಬಂದಿಯೊಬ್ಬರು ಬಂದೋಗಿದ್ದರು. ಇವರ ಸಂಪರ್ಕದಿಂದ ಈ ಮೂವರಿಗೆ ಸೋಂಕು ತಗುಲಿರುವ ಸಾಧ್ಯತೆಯಿಂದ ಹುಳಿಯಾರು ಸರ್ಕಾರಿ ಆಸ್ಪತ್ರೆಯಲ್ಲಿ ರ್ಯಾಪಿಡ್ ಟೆಸ್ಟ್ ಮಾಡಲಾಗಿ ಮೂವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಪರಿಣಾಮ ಇವರ ಹಣಕಾಸು ಕಛೇರಿಯಿದ್ದ ಕಟ್ಟಡವನ್ನು ಸೀಲ್ಡೌನ್ ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ