ತುಮಕೂರು
ಜಿಲ್ಲೆಯ 10 ತಾಲ್ಲೂಕುಗಳಲ್ಲಿ ತುಮಕೂರನ್ನು ಹೊರತುಪಡಿಸಿದರೆ ಕುಣಿಗಲ್ ಹಾಗೂ ಪಾವಗಡ ತಾಲ್ಲೂಕಿನಲ್ಲಿಯೆ ಅತಿ ಹೆಚ್ಚು ಕೊರೊನಾ ಪ್ರಕರಣಗಳು ಕಂಡು ಬರುತ್ತಿವೆ.
ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಶಿರಾ ಮತ್ತು ತುಮಕೂರಿನಲ್ಲಿ ಹೆಚ್ಚು ಸೋಂಕು ಪ್ರಕರಣಗಳಿದ್ದವು. ಕೆಲವೆ ಸೀಮಿತ ಕೋವಿಡ್ ಪ್ರಕರಣಗಳಿದ್ದರೂ ಸಹ ಇಡೀ ಜಿಲ್ಲೆಯನ್ನು ವ್ಯಾಪಿಸಿರಲಿಲ್ಲ. ಕ್ರಮೇಣ ಹೊರಗಿನಿಂದ ಸಂಪರ್ಕಿತರು ಜಿಲ್ಲೆಗೆ ಆಗಮಿಸುವುದು ಹೆಚ್ಚಾದಂತೆ ತಾಲ್ಲೂಕುಗಳಿಗೂ ಸೋಂಕು ವ್ಯಾಪಿಸುತ್ತಾ ಹೋಯಿತು. ಬೆಂಗಳೂರು, ಮುಂಬೈ, ದೆಹಲಿ, ಮಹಾರಾಷ್ಟ್ರ ಹೀಗೆ ವಿವಿಧ ಪ್ರದೇಶಗಳಿಂದ ಇಲ್ಲಿಗೆ ಆಗಮಿಸುತ್ತಿರುವವರ ಸಂಖ್ಯೆ ಹೆಚ್ಚಾದಂತೆಲ್ಲಾ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಮೇ ತಿಂಗಳ ವೇಳೆಗೆ ಇಡೀ ಜಿಲ್ಲೆಯನ್ನು ವ್ಯಾಪಿಸಿಬಿಟ್ಟಿತು.
ಇದೀಗ ತಾಲ್ಲೂಕು ಕೇಂದ್ರಗಳಿಗೆ ಮಾತ್ರವೆ ಕೊರೊನಾ ವೈರಸ್ ಸೀಮಿತವಾಗಿಲ್ಲ. ಹಳ್ಳಿ ಹಳ್ಳಿಗಳಿಗೂ ಬಾಧಿಸತೊಡಗಿದೆ. ಅಷ್ಟೆ ಅಲ್ಲ, ಅಲ್ಲಲ್ಲಿ ಸಾವು ನೋವುಗಳು ಸಂಭವಿಸುತ್ತಿವೆ. ಇಡೀ ಕರ್ನಾಟಕದಲ್ಲಿ ಮೂರು ತಿಂಗಳ ಹಿಂದೆ ಶಿರಾ ಹೆಸರುವಾಸಿಯಾಗಿತ್ತು. ಈಗ ಶಿರಾದಲ್ಲಿ ಪ್ರಕರಣಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿವೆ. ಕಡಿಮೆ ಇದ್ದ ತಾಲ್ಲೂಕುಗಳಲ್ಲಿ ಹೆಚ್ಚಳವಾಗುತ್ತದೆ.
ತುಮಕೂರು ತಾಲ್ಲೂಕಿನಲ್ಲಿ ಸೋಮವಾರದವರೆಗೆ 829 ಸೋಂಕು ಪ್ರಕರಣಗಳು ಕಂಡುಬಂದಿದ್ದು, 10 ತಾಲ್ಲೂಕುಗಳ ಪೈಕಿ ಮೊದಲ ಸ್ಥಾನದಲ್ಲಿದೆ. ತುಮಕೂರು ನಗರದಲ್ಲಿಯೆ ಅತಿ ಹೆಚ್ಚು ಪ್ರಕರಣಗಳು ಪ್ರತಿದಿನ ವರದಿಯಾಗುತ್ತಿವೆ. ಇದು ಬಿಟ್ಟರೆ ನಂತರದ ಸ್ಥಾನವನ್ನು ಕುಣಿಗಲ್ ಪಡೆದುಕೊಂಡಿದೆ. 195 ಪ್ರಕರಣಗಳು ಅಲ್ಲಿದ್ದು, ಇವುಗಳಲ್ಲಿ 100 ಸಕ್ರಿಯ ಪ್ರಕರಣಗಳನ್ನು ಗುರುತಿಸಲಾಗಿದೆ. 92 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕುಣಿಗಲ್ ತಾಲ್ಲೂಕಿನಲ್ಲಿ ಸೋಮವಾರದವರೆಗೆ ಮರಣಿಸಿರುವವರ ಸಂಖ್ಯೆ 3.
ಕುಣಿಗಲ್ ಬಿಟ್ಟರೆ ನಂತರದ ಸ್ಥಾನದಲ್ಲಿ ಪಾವಗಡ ಇದ್ದು, 157 ಒಟ್ಟು ಸೋಂಕು ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ 91 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, 65 ಸಕ್ರಿಯ ಪ್ರಕರಣಗಳು ಇವೆ. ಆದರೆ ಇಲ್ಲಿ ಮರಣ ಹೊಂದಿರುವವರ ಸಂಖ್ಯೆ 1 ಮಾತ್ರ. ಕಳೆದ ಒಂದು ತಿಂಗಳಿನಿಂದ ಪಾವಗಡ ಮತ್ತು ಕುಣಿಗಲ್ ತಾಲ್ಲೂಕುಗಳಲ್ಲಿ ಸೋಂಕು ಪ್ರಕರಣಗಳು ಹೆಚ್ಚುತ್ತಲೆ ಸಾಗಿವೆ.
ಮೇಲ್ಕಂಡ ಎರಡೂ ತಾಲ್ಲೂಕುಗಳು ತುಮಕೂರು ಜಿಲ್ಲೆಗೆ ಸೇರಿವೆಯಾದರೂ ರಾಜಕೀಯವಾಗಿ ಪ್ರತ್ಯೇಕವಾಗಿಯೇ ಗುರುತಿಸಿಕೊಂಡಿವೆ. ಪಾವಗಡ ತಾಲ್ಲೂಕು ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ, ಕುಣಿಗಲ್ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಸೇರ್ಪಡೆಯಾಗಿವೆ. ಈ ಎರಡೂ ಸಹ ಗಡಿ ಭಾಗದ ಪ್ರದೇಶಗಳೆ ಆಗಿವೆ. ಪಾವಗಡವಂತೂ ಹಲವು ಸೌಲಭ್ಯಗಳಿಂದ, ನೀರಾವರಿಯಿಂದ ವಂಚಿತವಾಗಿರುವ ಪ್ರದೇಶ.
ಕುಣಿಗಲ್ ತಾಲ್ಲೂಕಿನಲ್ಲಿ ಜು. 31 ರಂದು 6 ಪ್ರಕರಣ, ಆ.1 ರಂದು 8, 2 ರಂದು 13, 3 ರಂದು 12 ಪ್ರಕರಣಗಳು, ಪಾವಗಡದಲ್ಲಿ ಜು. 31 ರಂದು 8, ಆ.1 ರಂದು 10, 2 ರಂದು 7 ಪ್ರಕರಣ, 3 ನೆ ತಾರೀಖು 4 ಪ್ರಕರಣಗಳು ವರದಿಯಾಗಿದ್ದವು. ದಿನ ಬಿಟ್ಟು ದಿನ ಸೋಂಕು ಪ್ರಕರಣದಲ್ಲಿ ಏರಿಳಿಕೆಯಾಗುತ್ತಿದ್ದು, ಒಂದೊಂದು ತಾಲ್ಲೂಕಿನಲ್ಲಿಯೂ ಒಂದೊಂದು ದಿನ ಏರಿಳಿತ ಕಂಡುಬರುತ್ತಿದೆ. ಇಡೀ ಜಿಲ್ಲೆಯಲ್ಲಿ ಈವರೆಗೆ ಸಾವಿನ ಪ್ರಕರಣ ವರದಿಯಾಗದೆ ಇರುವ ತಾಲ್ಲೂಕೆಂದರೆ ತುರುವೇಕೆರೆ ಮಾತ್ರ.
ಮಧುಗಿರಿ ತಾಲ್ಲೂಕಿನಲ್ಲಿಯೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಲೆ ಇವೆ. ಸೋಮವಾರದವರೆಗೆ ಮಧುಗಿರಿ ತಾಲ್ಲೂಕಿನಲ್ಲಿ ಒಟ್ಟು 141 ಸೋಂಕಿತ ಪ್ರಕರಣಗಳು ಕಂಡುಬಂದಿದ್ದು, ಅವರಲ್ಲಿ 97 ಮಂದಿ ಬಿಡುಗಡೆ ಹೊಂದಿದ್ದಾರೆ. ಇಬ್ಬರು ಮರಣ ಹೊಂದಿದ್ದಾರೆ. ಸಕ್ರಿಯ 42 ಪ್ರಕರಣಗಳು ಮಾತ್ರವೆ ಇರುವುದು ಒಂದು ರೀತಿಯಲ್ಲಿ ಸಮಾಧಾನ ತರುವ ಅಂಶ.
ತಿಪಟೂರು ತಾಲ್ಲೂಕು ಶಿರಾವನ್ನು ಹಿಂದಿಕ್ಕಿ ಮುನ್ನಡೆದಿದೆ. ಶಿರಾದಲ್ಲಿ 52 ಸಕ್ರಿಯ ಪ್ರಕರಣಗಳಿದ್ದರೆ, ತಿಪಟೂರಿನಲ್ಲಿ 86 ಸಕ್ರಿಯ ಪ್ರಕರಣಗಳು ಇವೆ. ಆದರೆ ಮರಣ ಹೊಂದಿರುವವರ ಸಂಖ್ಯೆಯಲ್ಲಿ ಶಿರಾ ಮುಂದಿದ್ದು, ಅಲ್ಲಿ ಮೂರು ಮಂದಿ ಮೃತಪಟ್ಟಿರುತ್ತಾರೆ. ತಿಪಟೂರಿನಲ್ಲಿ ಒಬ್ಬರು ಮರಣ ಹೊಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ