ಕೊಡಗು :
ಜಿಲ್ಲೆಯಲ್ಲಿ ಎಡೆ ಬಿಡದೇ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಡಿಕೇರಿ- ಕುಶಾಲನಗರ ರಸ್ತೆಯ ಮೇಲೆ ನೀರು ಬಂದಿದ್ದು, ಈ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಆಗಿದೆ.
ಕುಶಾಲನಗರದ ತಾವರೆಕೆರೆ ಬಳಿ ಮಡಿಕೇರಿ – ಕುಶಾಲನಗರ ರಸ್ತೆಯ ಮೇಲೆ ನೀರು ಹರಿಯುತ್ತಿರುವ ಪರಿಣಾಮ, ರಸ್ತೆ ಕಾಣದಂತೆ ಆಗಿ, ಮಡಿಕೇರಿ – ಕುಶಾಲನಗರ ರಸ್ತೆ ಸಂಚಾರ ಕಡಿತಗೊಂಡಿದೆ.
ಭಾರೀ ಮಳೆಯಿಂದಾಗಿ ನದಿ, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿರುವುದರಿಂದ, ಅನೇಕ ಕಡೆಯಲ್ಲಿ ಸೇತುವೆ, ರಸ್ತೆಗಳು ಮುಳುಗಡೆಗೊಂಡಿವೆ.
ಇನ್ನೂ ಮಡಿಕೇರಿ – ವಿರಾಜಪೇಟೆಯ ನಡುವೆ ಭೇತ್ರಿ ಸೇತುವೆ ಭಾರಿ ಮಳೆಯಿಂದಾಗಿ ಮುಳುಗಡೆಯ ಸ್ಥಿತಿಯನ್ನು ತಲುಪಿದೆ. ಮತ್ತೊಂದೆಡೆ ಬಿಳಿಗೇರಿ ಸೇತುವೆ ಕೊಚ್ಚಿಹೋಗಿದ್ದು, ಬಿಳಿಗೇರಿ-ಹಾಕತ್ತೂರು ನಡೆವು ಸಂಪರ್ಕ ಕಡಿತಗೊಂಡಿದೆ. ಅಲ್ಲದೇ ಮಡಿಕೇರಿ – ವಿರಾಜಪೇಟೆ ಸಂಪರ್ಕ ಕೂಡ ಬಂದ್ ಆಗಿದೆ.
ಇತ್ತ ರಾಷ್ಟ್ರೀಯ ಹೆದ್ದಾರಿ 275ರ ಜೋಡುಪಾಲ ಬಳಿ ಹೆದ್ದಾರಿಯ ಒಂದು ಬದಿ ಕುಸಿತಗೊಂಡಿದೆ. ಹೀಗಾಗಿ ಲಘುವಾಹನಗಳ ಸಂಚಾರ ಮಾತ್ರವೇ ಒಡಾಡುವಂತೆ ಆಗಿದೆ. ಬೃಹತ್ ವಾಹನಗಳ ಸಂಚಾರ ಮಡಿಕೇರಿ – ಮಂಗಳೂರು ಮಾರ್ಗವಾಗಿ ಸ್ಥಗಿತಗೊಂಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ