ಚಿತ್ರದುರ್ಗ
ತುರುವನೂರಿಗೆ ಮಂಜೂರಾಗಿದ್ದ ಪ್ರಥಮ ದರ್ಜೆ ಕಾಲೇಜನ್ನು ಬೆಳಗಾವಿಯ ನಿಪ್ಪಾಣಿಗೆ ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿ ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಮುಂದೆ ಅವಿರತ ಧರಣಿ ಸತ್ಯಾಗ್ರಹ.ಇಂದು ಮೂರನೇ ದಿನಕ್ಕೆ ಕಾಲಿಟ್ಟಿದ್ದು, ತೀವ್ರ ಸ್ವರೂಪ ಪಡೆಯುತ್ತಿದೆ.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಪ್ರಾರಂಭವಾಗಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು ವಿವಿಧ ಸಂಘ ಸಂಸ್ಥೆಗಳು, ಕಾಲೇಜಿನ ಹಳೆಯ ವಿದ್ಯಾರ್ಥಿಗಳು ,ಮಹಿಳಾ ಸಂಘಟನೆಗಳು ಮತ್ತು ಸಾಹಿತಿಗಳು ಧರಣಿಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದ್ದಾರೆ. ದಿನದಿಂದ ದಿನಕ್ಕೆ ಕಾವೇರುತ್ತಿರುವ ಧರಣಿ ಸತ್ಯಾಗ್ರಹಕ್ಕೆ ವಿವಿಧ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಕ್ಷೇತ್ರದ ಶಿಕ್ಷಣ ವಿಷಯದಲ್ಲಿ ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳು ಹಾಗೂ ಕೆಲವು ನಾಯಕರು ದುರುದ್ದೇಶ ದಿಂದ ಕಾಲೇಜು ಸ್ಥಳಾಂತರ ಮಾಡಿದ್ದು, ಕ್ಷೇತ್ರದ ಅಭಿವೃದ್ಧಿ ಹಾಗೂ ಶೈಕ್ಷಣಿಕ ರಂಗಕ್ಕೆ ಮಲತಾಯಿ ಧೋರಣೆ ಅನುಸರಿಸಿತ್ತಿದೆ. ಈ ಕೂಡಲೇ ರಾಜ್ಯ ಸರ್ಕಾರ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಸ್ಥಳಾಂತರ ಅದೇಶವನ್ನು ಹಿಂಪಡೆಯುವಂತೆ ಆಗ್ರಹ ವ್ಯಕ್ತಪಡಿಸಲಾಗಿದ್ದು, ಅದೇಶವನ್ನು ಹಿಂಪಡೆಯದಿದ್ದಲ್ಲಿಉಗ್ರ ಹೋರಾಟ ನಡೆಸುವುದಾಗಿ ಎಚ್ಚರ ನೀಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ.ಟಿ. ರಘುಮೂರ್ತಿ ಕ್ಷೇತ್ರದ ತುರುವನೂರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯ ಮಂತ್ರಿಯಾಗಿದ್ದಾಗ ಮಂಜೂರಾಗಿದ್ದ ಪ್ರಥಮ ದರ್ಜೆ ಕಾಲೇಜನ್ನು ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಸ್ಥಳಾಂತರಿಸಿರುವುದು ಸರಿಯಲ್ಲ.ಗ್ರಾಮೀಣ ಭಾಗವಾಗಿರುವ ತುರುವನೂರು ಹಾಗೂ ಸುತ್ತಮುತ್ತಲಿನ ಗ್ರಾಮೀಣ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಈ ಕಾಲೇಜು ಅನುಕೂಲವಾಗಿತ್ತು. ಈ ಭಾಗದಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಹೆಚ್ಚಾಗಿ ಇರುವುದರಿಂದ ಆ ಸಮುದಾಯದ ವಿದ್ಯಾರ್ಥಿಗಳಿಗೆ ಅನ್ಯಾಯವಾದಂತೆ ಆಗುತ್ತದೆ. ಸುಮಾರು ಮೂವತ್ತುರಿಂದ ನಲವತ್ತು ಕೀಮೀ ದೂರದ ನಗರಕ್ಕೆ ಹೋಗಲು ಕಷ್ಟವಾಗುತ್ತದೆ.
ಸುತ್ತಮುತ್ತಲಿನ ಗ್ರಾಮೀಣ ಪ್ರದೇಶವಷ್ಟೇ ಅಲ್ಲದೆ ಚಳ್ಳಕೆರೆ, ಮೊಳಕಾಲ್ಮೂರು ಮತ್ತು ಜಗಳೂರಿನಿಂದ ವಿದ್ಯಾರ್ಥಿಗಳು ಬಂದು ಈ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು.ಪ್ರಸ್ತುತ ಈಗಿನ ಬಿಜೆಪಿ ಸರ್ಕಾರ ಏಕಾಏಕಿ ಕಾಲೇಜನ್ನು ಬೆಳಗಾವಿಯ ನಿಪ್ಪಾಣಿಗೆ ಸ್ಥಳಾಂತರ ಮಾಡುವ ಮೂಲಕ ಇಲ್ಲಿನ ಮಕ್ಕಳ ಭವಿಷ್ಯಕ್ಕೆ ಕುತ್ತು ತರುತ್ತಿದೆ ಎಂದು ದೂರಿದರು.
ಗ್ರಾಮೀಣ ಮಕ್ಕಳು ಅದರಲ್ಲೂ ಹೆಣ್ಣುಮಕ್ಕಳು ದೂರದ ಚಿತ್ರದುರ್ಗಕ್ಕೆ ಸೇರಿಸಿ ಓದಿಸುವುದು ಹಳ್ಳಿ ಜನರಿಗೆ ಕಷ್ಟವಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಸರಿಯಾದ ಕಾಲೇಜ್ ಇಲ್ಲದೆ ಅದೆಷ್ಟೋ ಮಕ್ಕಳು ಕಾಲೇಜ್ ತೊರೆಯುವಂತಾಗಿದೆ. ಈ ಸಮಸ್ಯೆಗಳನ್ನು ಹೋಗಲಾಡಿಸಲು ಕಳೆದ ಕೆಲವು ವರ್ಷಗಳ ಹಿಂದೆ ಕಾಲೇಜು ಅನ್ನು ತುರುವನೂರಿಗೆ ಮುಂಜೂರಾಗಿತ್ತು.ಈಗ ರಾಜಕೀಯ ದುರುದ್ದೇಶದಿಂದ ಇಲ್ಲಿನ ಕಾಲೇಜು ಅನ್ನು ಬೇರೆಡೆಗೆ ಸ್ಥಳಾಂತರಿಸುವುದು ಸರಿಯಲ್ಲ. ರಾಜ್ಯ ಸರ್ಕಾರ ಚಳ್ಳಕೆರೆ ಕ್ಷೇತ್ರ ಕ್ಕೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದ್ದು, ಈ ಕೂಡಲೇ ದ್ವೇಷ ರಾಜಕಾರಣವನ್ನು ತೊರೆದು ಮುಂಜೂರಾದ ಕಾಲೇಜು ಅನ್ನು ಇಲ್ಲಿ ಉಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರತಿಭಟನೆ ಈಗ ಆರಂಭವಾಗಿದ್ದು, ಸರ್ಕಾರ ತನ್ನ ನಿರ್ಧಾರ ಬದಲಾಯಿಸುವವರೆಗೂ ನಮ್ಮ ಪ್ರತಿಭಟನೆಯನ್ನು ನಿರಂತರವಾಗಿ ಮುಂದುವರೆಸುತ್ತೇವೆ. ನಮ್ಮನ್ನು ಜೈಲಿಗಟ್ಟಿದರೂ ಸರಿ. ಧರಣಿ ನಿಲ್ಲಿಸುವುದಿಲ್ಲ ಎಂದರು.
ಸರ್ಕಾರಿ ಕಲಾ ಕಾಲೇಜು ನಿವೃತ್ತ ಪ್ರಾಂಶುಪಾಲರಾದ ಪ್ರೊ.ಸಿ.ಕೆ.ಮಹೇಶ್ವರಪ್ಪ ಧರಣಿಯನ್ನುದ್ದೇಶಿಸಿ ಮಾತನಾಡುತ್ತ ಶತ ಶತಮಾನಗಳಿಂದಲೂ ಶೋಷಣೆ ಅನುಭವಿಸಿಕೊಂಡು ಶಿಕ್ಷಣದಿಂದ ವಂಚಿರಾಗುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಜನಾಂಗದವರಿಗೆ ಶಿಕ್ಷಣ ಮೂಲಭೂತ ಹಕ್ಕಾಗಬೇಕು ಎನ್ನುವುದು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ರವರ ಕನಸಾಗಿತ್ತು. ಆದರೆ ಈಗಿನ ಕೋಮುವಾದಿ ರಾಜ್ಯ ಬಿಜೆಪಿ.ಸರ್ಕಾರ ಸಿದ್ದರಾಮ್ಯನವರು ತುರುವನೂರಿಗೆ ಮಂಜೂರು ಮಾಡಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ನಿಪ್ಪಾಣಿಗೆ ವರ್ಗಾಯಿಸಿರುವುದು ನಿಜಕ್ಕೂ ತುರುವನೂರು ಭಾಗದ ಹತ್ತಾರು ಹಳ್ಳಿಯ ಪ್ರತಿಭಾವಂತ ಮಕ್ಕಳಿಗೆ ಎಸಗಿರುವ ಬಹುದೊಡ್ಡ ದ್ರೋಹ. ಯಾವುದೇ ಕಾರಣಕ್ಕು ತುರುವನೂರಿನಿಂದ ಕಾಲೇಜು ಸ್ಥಳಾಂತರಗೊಳ್ಳಲು ಬಿಡುವುದಿಲ್ಲ. ಶಾಸಕರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುತ್ತೇವೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ನಿವೃತ್ತ ಪ್ರೊ.ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಮಾತನಾಡಿ ಅಕ್ಷರ ಕ್ರಾಂತಿಯಾದಾಗ ಮಾತ್ರ ನಿಜವಾಗಿಯೂ ಪ್ರಜಾಪ್ರಭುತ್ವದಡಿ ಎಲ್ಲರಿಗೂ ಸಾಮಾಜಿಕ ನ್ಯಾಯ ದೊರಕಿದಂತಾಗುವುದರಲ್ಲಿ ಅನುಮಾನವಿಲ್ಲ. ಯಾವುದೋ ದುರುದ್ದೇಶವಿಟ್ಟುಕೊಂಡು ತುರುವನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ನಿಪ್ಪಾಣಿಗೆ ವರ್ಗಾಯಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಬಿಟ್ಟು ಉನ್ನತ ಶಿಕ್ಷಣದ ಮುಖೇನ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯವನ್ನು ಉನ್ನತೀಕರಣಗೊಳಿಸುವತ್ತ ಮುಂದಾಗಲಿ ಎಂದು ಒತ್ತಾಯಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯೆ ಜಯಮ್ಮ ಬಾಲರಾಜ್ ಮಾತನಾಡಿ ವಿಶೇಷವಾಗಿ ಗ್ರಾಮೀಣ ಭಾಗದ ಮಕ್ಕಳಿಗೆ ಪದವಿ ಶಿಕ್ಷಣ ಅತ್ಯಮೂಲ್ಯವಾದುದು. ಶಿಕ್ಷಣದಿಂದ ಮಾತ್ರ ಸರ್ವಾಂಗೀಣ ಅಭಿವೃದ್ದಿ ಸಾಧ್ಯ. ಯಾವ ಕಾರಣಕ್ಕಾಗಿ ರಾಜ್ಯ ಬಿಜೆಪಿ.ಸರ್ಕಾರ ತುರುವನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ನಿಪ್ಪಾಣಿಗೆ ಸ್ಥಳಾಂತರಿಸುತ್ತಿದೆ ಎನ್ನುವುದೇ ಗೊತ್ತಾಗುತ್ತಿಲ್ಲ. ಶಾಸಕರ ಹೋರಾಟಕ್ಕೆ ಸದಾ ನಮ್ಮ ಬೆಂಬಲವಿದೆ ಎಂದು ಧೈರ್ಯ ತುಂಬಿದರು.ಪ್ರೊ.ಟಿ.ವಿ.ಸುರೇಶ್ಗುಪ್ತ, ಡಾ.ಸಿ.ಶಿವಲಿಂಗಪ್ಪ, ಪ್ರೊ.ಹೆಚ್.ಲಿಂಗಪ್ಪ, ಜೆ.ಯಾದವರೆಡ್ಡಿ, ಪ್ರೊ.ಟಿ.ಹೆಚ್. ಕೃಷ್ಣಮೂರ್ತಿ, ಪ್ರೊ.ಕೆ.ರಾಮರಾಮ್ ಧರಣಿಯಲ್ಲಿ ಭಾಗವಹಿಸಿ ಶಾಸಕ ಟಿ.ರಘುಮೂರ್ತಿಗೆ ಬೆಂಬಲಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಸಂಪತ್, ಕೆ.ಪಿ.ಸಿ.ಸಿ.ಪರಿಶಿಷ್ಟ ಜಾತಿ ವಿಭಾಗದ ಸದಸ್ಯ ಮಲ್ಲೇಶ್, ಜಿ.ಪಂ.ಸದಸ್ಯ ಬಿ.ಪಿ.ಪ್ರಕಾಶ್ಮೂರ್ತಿ, ಲೇಖಕ ಹೆಚ್.ಆನಂದಕುಮಾರ್, ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಸೇರಿದಂತೆ ತುರುವನೂರು ಹೋಬಳಿಯ ವಿದ್ಯಾರ್ಥಿಗಳುವಿವಿಧ ಸಂಘ ಸಂಸ್ಥೆಗಳು, ಸಾಹಿತಿಗಳು ಕಾರ್ಯನಿರತ ಪತ್ರಕರ್ತ ಸಂಘ ಸೇರಿದಂತೆ ಧರಣಿಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








