ನೋಡಲ್ ಅಧಿಕಾರಿ ಎಚ್.ಎಂ. ಗಂಗಾಧರಯ್ಯನವರ ಅಂತ್ಯ ಸಂಸ್ಕಾರ

ತುರುವೇಕೆರೆ

    ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಬಿಬಿಎಂಪಿ ಆರಂಭಿಸಿರುವ ಕೊವಿಡ್ ಆರೈಕೆ ಕೇಂದ್ರದ ನೋಡಲ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರೊಬೇಷನರಿ ಉಪವಿಭಾಗಾಧಿಕಾರಿ ಎಚ್.ಎಂ. ಗಂಗಾಧರಯ್ಯನವರ (45) ಅಂತ್ಯ ಸಂಸ್ಕಾರವು ತಾಲ್ಲೂಕಿನ ದಂಡಿನಶಿವರ ಹೋಬಳಿಯ ಡಿ.ಹೊಸಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಭಾನುವಾರ ನೆರವೇರಿತು.

    ಅಂತಾರಾಷ್ಟ್ರೀಯ ವಸ್ತು ಪ್ರದರ್ಶನದಲ್ಲಿ ತೆರೆಯಲಾಗಿರುವ ಕೋವಿಡ್ ಕೇಂದ್ರದ ನೋಡೆಲ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಶನಿವಾರ ಸಂಜೆ 4 ರ ಸಮಯದಲ್ಲಿ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೆ ಅವರ ಸ್ನೇಹಿತರು ಹತ್ತಿರದ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಇವರು ಪತ್ನಿ ಮಮತ, ಒಬ್ಬ ಪುತ್ರ ಕುಶಾಲ್, ಇಬ್ಬರು ಪುತ್ರಿಯರು ಮತ್ತು ತಂದೆ ಹೊನ್ನಪ್ಪ ಅವರನ್ನು ಅಗಲಿದ್ದಾರೆ.

     ಭಾನುವಾರ ಬೆಳಗ್ಗೆ ಅವರ ಹುಟ್ಟೂರು ದಂಡಿನಶಿವರ ಹೋಬಳಿಯ ಡಿ.ಹೊಸಹಳ್ಳಿ ಗ್ರಾಮದಲ್ಲಿ ಮೃತರ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ತಾಲ್ಲೂಕು ಆಡಳಿತದ ವತಿಯಿಂದ ಕಲ್ಪಿಸಿ ಕೊಡಲಾಗಿತ್ತು. ಕೊವಿಡ್ 19 ಹಿನ್ನೆಲೆ ಜನರು ಹೆಚ್ಚು ಗುಂಪಾಗಿ ಸೇರದಂತೆ ಸಾರ್ವಜನಿಕರು ಸರತಿ ಸಾಲಿನಲ್ಲಿ ಹಾಗೂ ವ್ಯಕ್ತಿಗತ ಅಂತರದೊಂದಿಗೆ ಬಂದು ಪಾರ್ಥೀವ ಶರೀರದ ದರ್ಶನ ಪಡೆದರು. ತಾಲ್ಲೂಕಿನ ಮೂಲೆ ಮೂಲೆಯಿಂದ ಜನರು, ಜನಪ್ರತಿನಿಧಿಗಳು, ಮುಖಂಡರುಗಳು, ಅಧಿಕಾರಿಗಳು ದರ್ಶನ ಪಡೆದರು.

    ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಶಾಸಕ ಮಸಾಲಜಯರಾಂ, ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್, ಎಸ್.ಪಿ.ವಂಶಿಕೃಷ್ಣ, ಮೃತರ ಪತ್ನಿ, ಮಕ್ಕಳು ಹಾಗೂ ಹಾಗೂ ಸಂಬಂಧಿಕರಿಗೆ ಸಾಂತ್ವನ ಹೇಳಿದರು.
ಮಧ್ಯಾಹ್ನ 12 ಗಂಟೆ ನಂತರ ಮೃತ ಎಚ್.ಎಂ.ಗಂಗಾಧರಯ್ಯ ಶರೀರಕ್ಕೆ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಸರ್ಕಾರಿ ಗೌರವ ಸಲ್ಲಿಸಿದರು. ನಂತರ ಎಲ್ಲ ಗಣ್ಯರು, ಅಧಿಕಾರಿಗಳು ಮೌನ ಆಚರಿಸಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಸೇನೆಯಲ್ಲಿ ಎರ್‍ಫೋರ್ಸ್ ಉದ್ಯೋಗಿಯಾಗಿದ್ದರು:

      ಮೃತ ಎಚ್.ಎಂ.ಗಂಗಾಧರಯ ರೈತ ಕುಟುಂಬದ ಹಿನ್ನೆಲೆಯಿಂದ ಬಂದವರಾಗಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಅಮ್ಮಸಂದ್ರದ ಮೈಸೆಂಕೋ ಶಾಲೆಯಲ್ಲಿ ಮುಗಿಸಿ, ಡಿಪ್ಲೋಮಾ ಪದವಿಯನ್ನು ತುಮಕೂರಿನಲ್ಲಿ ಪಡೆದರು. ಇದಾದ ಮೇಲೆ 1996ರಲ್ಲಿ ಇಂಡಿಯನ್ ಏರ್‍ಫೋರ್ಸ್‍ಗೆ ನೇಮಕವಾಗಿ 20 ವರ್ಷ ಸೇವೆ ಸಲ್ಲಿಸಿ 2016 ರಲ್ಲಿ ಸೇವೆ ಪೂರ್ಣಗೊಳಿಸಿ, ನಂತರ 2 ವರ್ಷ ಉಪನ್ಯಾಸಕರಾಗಿ, 2 ವರ್ಷ ವಿಧಾನಸೌಧದಲ್ಲಿ ಎಫ್‍ಡಿಎ ಅಲ್ಲದೆ ಸಬ್‍ರಿಜಿಸ್ಟ್ರಾರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ದೂರ ಶಿಕ್ಷಣದ ಮೂಲಕ ಬಿ.ಎ, ಎಂ.ಎ, ಎನ್‍ಇಟಿ ಪದವಿ ಪಡೆದರು. 2017 ರಲ್ಲಿ ಕೆಎಎಸ್ ಪರೀಕ್ಷೆ ತೆಗೆದುಕೊಂಡು ಯಾವುದೇ ತರಬೇತಿಗೂ ಹೋಗದೆ

     2019ರಲ್ಲಿ ಉತ್ತಿರ್ಣರಾಗಿ, ಪ್ರೊಬೇಷನರಿ ಉಪವಿಭಾಗಾಧಿಕಾರಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪರಿಹಾರಕ್ಕೆ ಒತ್ತಾಯ: ಪ್ರತಿಭಾವಂತ, ದಕ್ಷ ಅಧಿಕಾರಿ ಎಚ್.ಎಂ.ಗಂಗಾಧರಯ್ಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ, ಮೃತರ ಕುಟುಂಬಕ್ಕೆ ಈಗಾಗಲೆ 25 ಲಕ್ಷ ರೂ. ಪರಿಹಾರವನ್ನು ಸರ್ಕಾರ ಘೋಷಿಸಿದ್ದು, 1 ಕೋಟಿ ರೂ. ಪರಿಹಾರ ಹಾಗೂ ಅವರ ಕುಟುಂಬಕ್ಕೆ ಸರ್ಕಾರಿ ನೌಕರಿ ನೀಡಬೇಕೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸುವುದಾಗಿ ಶಾಸಕ ಮಸಾಲಜಯರಾಂ ತಿಳಿಸಿದರು.ಅಂತ್ಯ ಕ್ರಿಯೆ ವೇಳೆ ಎಸ್‍ಪಿ ಡಾ.ವಂಶಿಕೃಷ್ಣ, ತಿಪಟೂರು ಉಪವಿಭಾಗಾಧಿಕಾರಿ ಕೆ.ಆರ್.ನಂದಿನಿ, ತಹಸೀಲ್ದಾರ್ ಆರ್.ನಯಿಂಉನ್ನೀಸಾ, ಸಿಪಿಐ ಲೋಕೇಶ್, ಎಎಸ್‍ಐ ಶಿವಲಿಂಗಯ್ಯ ಸೇರಿದಂತೆ ಜನಪ್ರತಿನಿಧಿಗಳು, ಮುಖಂಡರುಗಳು ಮತ್ತು ಅಧಿಕಾರಿಗಳು ಸೇರಿದಂತೆ ಬಂಧುಗಳು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link