ತುಮಕೂರು : ನಗರದಲ್ಲಿ ಸಾವಿರ ಗಡಿಯಲ್ಲಿ ಸೋಂಕು

ತುಮಕೂರು

     ಕೊರೊನಾ ಸೋಂಕು ಜಿಲ್ಲೆಯಲ್ಲಿ ಮೂರು ಸಾವಿರ ಸಂಖ್ಯೆ ಮೀರಿ ಏರಿಕೆಯಾಗಿದೆ. ಇದರಲ್ಲಿ ತುಮಕೂರು ನಗರದಲ್ಲಿ ಸೋಂಕಿತರು ಹಾಗೂ ಸೋಂಕಿನಿಂದ ಮೃತರಾದವರ ಸಂಖ್ಯೆ ಇತರೆಲ್ಲಾ ತಾಲ್ಲೂಕುಗಳಿಗಿಂಥಾ ಅಧಿಕವಾಗಿ ಏರಿಕೆಯಾಗುತ್ತಿದೆ.ಪ್ರಸ್ತುತ ತುಮಕೂರು ನಗರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಸಾವಿರದ ಗಡಿಯಲ್ಲಿದೆ. ಈ ಬುಧವಾರದವರೆಗೆ ತುಮಕೂರು ನಗರದಲ್ಲಿ ಕೊರೊನಾ ಪಾಸಿಟೀವ್ 991 ಜನರಿಗೆ ಖಚಿತವಾಗಿದೆ. ಇಷ್ಟೇ ಅಲ್ಲದೆ, ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆಯೂ ಆಘಾತಕಾರಿಯಾಗಿದೆ.

   ಈವರೆಗೆ ಜಿಲ್ಲೆಯಲ್ಲಿ ಸೋಂಕಿನಿಂದ 89 ಜನ ಮೃತರಾದರೆ, ಇವರಲ್ಲಿ ತುಮಕೂರು ನಗರದ 58 ಜನ ಸೇರಿದ್ದಾರೆ. ದಿನೇದಿನೆ ಸೋಂಕಿತರು, ಮರಣ ಹೊಂದುವವರ ಸಂಖ್ಯೆಯೂ ಗಣನೀಯವಾಗಿ ಏರುತ್ತಿದೆ.ಸಾಲದಕ್ಕೆ ಶುಕ್ರವಾರದ ವರದಿಯಂತೆ ನಗರದ 166 ಜನರಲ್ಲಿ ಸೋಂಕು ಸಕ್ರಿಯವಾಗಿದೆ. ಇಷ್ಟರ ಮಧ್ಯೆ, ಸೋಂಕು ಖಚಿತವಾಗಿದ್ದ 767 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

    ಆದರೆ, ನಗರದಲ್ಲಿ ಸೋಂಕು ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿಲ್ಲ, ಪ್ರತಿದಿನ 30ರಿಂದ 40 ಕೇಸುಗಳು ವರದಿಯಾಗುತ್ತಲೇ ಇವೆ, ಹಾಗೇ ಸಾವಿನ ಪ್ರಕರಣಗಳೂ ಹೆಚ್ಚುತ್ತಿವೆ. ಶುಕ್ರವಾರದ ವೇಳೆಗೆ ನಗರದಲ್ಲಿ 991 ಪಾಸಿಟೀವ್ ಪ್ರಕರಣಗಳಿವೆ. ಸೋಂಕು ಪ್ರಕರಣಗಳು ಪತ್ತೆಯಾದ ನಗರದ ವಿವಿಧ ಬಡಾವಣೆಗಳ ಮನೆ, ಕಚೇರಿಗಳು ಸೇರಿ 495 ಕಂಟೈನ್‍ಮೆಂಟ್ ವಲಯ ಗುರುತಿಸಿ, ಸೀಲ್‍ಡೌನ್ ಮಾಡಲಾಗಿದೆ.

    ಪಾಸಿಟೀವ್ ವರದಿ ಖಚಿತವಾಗ ವ್ಯಕ್ತಿಯ ನಿವಾಸ, ಕಚೇರಿಯನ್ನು ಕಂಟೈನ್‍ಮೆಂಟ್ ವಲಯವಾಗಿ ಪರಿವರ್ತಿಸಿ ಆ ವ್ಯಕ್ತಿ ಇತರರು ಸಂರ್ಪಕ್ಕೆ ಬಾರದಂತೆ ತಡೆಯಲಾಗುತ್ತದೆ. ಸೋಂಕಿತ ವ್ಯಕ್ತಿ ತಮ್ಮ ಮನೆಯಲ್ಲೇ ಕ್ವಾರಂಟೈನ್ ಆಗಬಹುದೆ ಅಥವಾ ಕೋವಿಡ್ ಕೇರ್ ಸೆಂಟರ್‍ಗೆ ದಾಖಲಿಸಿ ಚಿಕಿತ್ಸೆ ನೀಡಬೇಕೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಶಿಫಾರಸ್ಸು ಮಾಡುತ್ತಾರೆ. ಯಾವುದೇ ರೋಗಲಕ್ಷಣಗಳಿಲ್ಲದೆ ಸೋಂಕು ತಗುಲಿದ್ದವರು ಮನೆಯಲ್ಲೇ ಕ್ವಾರಂಟೈನ್ ಆಗಬಹುದು. ಆದರೆ, ಬಿಪಿ, ಶುಗರ್, ಅಸ್ತಮ, ಜ್ವರ, ಉಸಿರಾಟದ ತೊಂದರೆ ಮತ್ತಿತರ ಸಮಸ್ಯೆ ಇರುವವರು, ಗರ್ಭಿಣಿ, ಬಾಣಂತಿಯರಿಗೆ ಪಾಸಿಟೀವ್ ಖಚಿತವಾದರೆ ಅವರನ್ನು ಆಸ್ಪತ್ರೆಯಲ್ಲಿ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಬೇಕಾಗುತ್ತದೆ.

     ಪಾಸಿಟೀವ್ ಪ್ರಕರಣ ವರದಿಯಾದರೆ, ಆವ್ಯಕ್ತಿ ವಾಸಿಸುವ ಮನೆಯನ್ನು 14 ದಿನಗಳವರೆಗೆ ಕಂಟೈನ್‍ಮೆಂಟ್ ಮಾಡಲಾಗುತ್ತದೆ, ಈ ಮಧ್ಯೆ, ಅವರ ಕುಟುಂಬದ ಇತರೆ ಸದಸ್ಯರಿಗೆ ಸೋಂಕು ತಗುಲಿದರೆ ಕಂಟೈನ್‍ಮೆಂಟ್ ಅವಧಿಯನ್ನು ಅಲ್ಲಿಂದ 14 ದಿನಗಳವರೆಗೆ ವಿಸ್ತರಿಸಲಾಗುತ್ತದೆ. ತುಮಕೂರು ನಗರದಲ್ಲಿ ಇದೂವರೆಗೆ 495 ಕಂಟೈನ್‍ಮೆಂಟ್ ವಯಲ ಗುರುತಿಸಲಾಗಿದೆ ಎಂದು ನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ನಾಗೇಶ್‍ಕುಮಾರ್ ಹೇಳಿದರು.

      ಕಂಟೈನ್‍ಮೆಂಟ್ ವಲಯ ವ್ಯಾಪ್ತಿಯ ಮನೆಗಳಲ್ಲಿ ನಗರಪಾಲಿಕೆಯಿಂದ ಸ್ಯಾನಿಟೈಸರ್ ಸಿಂಪರಣೆ, ಸ್ವಚ್ಚತಾ ಕಾರ್ಯ, ನೀರು ಸರಬರಾಜು ಮಾಡಲಾಗುತ್ತದೆ. ಆ ಕುಟುಂಬಕ್ಕೆ ಬೇಕಾದ ದಿನಬಳಕೆ ಪದಾರ್ಥವನ್ನು ಅವರೇ ಖರೀದಿಸಬೇಕು, ಪಾಲಿಕೆಯಿಂದ ವಿತರಣೆ ಮಾಡಲು ಅವಕಾಶವಿಲ್ಲ ಎಂದು ಹೇಳಿದರು.

    ಆರಂಭದಲ್ಲಿ ಇದ್ದಂತೆ ಯಾರಿಗೇ ಸೋಂಕು ದೃಢಪಟ್ಟರೆ ಆ ವ್ಯಕ್ತಿ ವಾಸಿಸುವ ಕೇಂದ್ರದ ಸುತ್ತಮುತ್ತಲ ಪ್ರದೇಶವನ್ನು ಕಂಟೈನ್‍ಮೆಂಟ್ ಮಾಡಲಾಗುತ್ತಿತ್ತು. ಈಗ ಸೋಂಕಿತರ ಮನೆ, ಕಚೇರಿ ಮಾತ್ರ ಸೀಲ್‍ಡೌನ್ ಮಾಡಲಾಗುತ್ತದೆ. ನಗರದ ವ್ಯಾಪ್ತಿಯಲ್ಲಿ ಕಂಟೈನ್‍ಮೆಂಟ್ ಮಾಡುವ ಕಾರ್ಯವನ್ನು ನಗರ ಪಾಲಿಕೆಯ ಇಂಜಿನಿಯರಿಂಗ್ ವಿಭಾಗದಿಂದ ಮಾಡಲಾಗುತ್ತದೆ. ಹಿಂದೆ, ಜಿಲ್ಲಾಡಳಿತ ಖರೀದಿ ಮಾಡಿದ್ದ ಜಂಕ್‍ಶೀಟ್, ಮತ್ತಿತರ ವಸ್ತುಗಳನ್ನು ಮರು ಬಳಕೆ ಮಾಡಲಾಗುತ್ತಿದೆ, ಹೊಸದಾಗಿ ಖರೀದಿ ಮಾಡುತ್ತಿಲ್ಲ. ಸೀಲ್‍ಡೌನ್ ಅವಧಿ ಮುಗಿದ ನಂತರ ಅದೇ ವಸ್ತುಗಳನ್ನು ಇನ್ನೊಂದು ಕಡೆ ಬಳಸಲಾಗುತ್ತದೆ ಎಂದು ಡಾ.ನಾಗೇಶ್‍ಕುಮಾರ್ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link