ಕೊರಟಗೆರೆ
ಪುರಾತನ ಕಾಲದ ಕೆರೆ-ಕಟ್ಟೆಗಳ ಪುನಶ್ಚೇತನ ಮತ್ತು ಹಳ್ಳಗಳಿಗೆ ಅಡ್ಡಲಾಗಿ ಚೆಕ್‍ಡ್ಯಾಂ ಕಂ ಬ್ರಿಡ್ಜ್ ನಿರ್ಮಾಣದಿಂದ ಅಂತರ್ಜಲ ಅಭಿವೃದ್ದಿಯಾಗಿ ನೀರಾವರಿಗೆ ಅನುಕೂಲ ಆಗಲಿದೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ತಿಳಿಸಿದರು.ಅವರು ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿ ಬುಕ್ಕಾಪಟ್ಟಣ ಮತ್ತು ವಡ್ಡಗೆರೆ ಗ್ರಾಪಂ ವ್ಯಾಪ್ತಿಯ ಚೆಕ್ ಡ್ಯಾಂ ಕಂ ಬ್ರಿಡ್ಜ್ ಮತ್ತು ಪಶು ಆಸ್ಪತ್ರೆಯ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಬಯಲುಸೀಮೆ ಪ್ರದೇಶವಾದ ಕೊರಟಗೆರೆ ಕ್ಷೇತ್ರದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಈಗಾಗಲೆ ಕೆರೆಗಳ ಪುನಶ್ಚೇತನ ಮತ್ತು ಚೆಕ್‍ಡ್ಯಾಂ ನಿರ್ಮಾಣಕ್ಕೆ ಅನುದಾನ ತಂದಿದ್ದೇನೆ. ನೀರಾವರಿ ಯೋಜನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ಹೆಚ್ಚಿನ ಆದ್ಯತೆ ನೀಡುವ ಮೂಲಕ ರೈತರ ನೆರವಿಗೆ ಬರಬೇಕಾಗಿದೆ ಎಂದು ಆಗ್ರಹಿಸಿದರು.
ಕೊರಟಗೆರೆ ಕ್ಷೇತ್ರದ ಮೂಲಕ ಹಾದು ಹೋಗುವ ಸುವರ್ಣಮುಖಿ ಮತ್ತು ಜಯಮಂಗಲಿ ನದಿಗಳಿಗೆ ಸಂಪರ್ಕ ಕಲ್ಪಿಸುವ ಕಿರು ಹಳ್ಳಗಳಿಗೆ ಅಡ್ಡಲಾಗಿ ಈಗಾಗಲೆ ಹತ್ತಾರು ಚೆಕ್ ಡ್ಯಾಂ ಕಂ ಬ್ರಿಡ್ಜ್ ಕಾಮಗಾರಿ ನಡೆಯುತ್ತಿವೆ. ಅಂತರ್ಜಲ ಅಭಿವೃದ್ದಿಗೆ ರೈತರು ನಿಗದಿ ಪಡಿಸುವ ಸ್ಥಳದಲ್ಲಿಯೇ ಕಾಮಗಾರಿ ನಡೆಸಲು ಈಗಾಗಲೇ ಸೂಚಿಸಿದ್ದೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯೆ ಅಕ್ಕಮಹಾದೇವಿ, ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ತಾಪಂ ಅಧ್ಯಕ್ಷ ಟಿ.ಸಿ.ರಾಮಯ್ಯ, ಉಪಾಧ್ಯಕ್ಷ ವೆಂಕಟಪ್ಪ, ಸ್ಥಾಯಿ ಸಮಿತಿ ಅಧಕ್ಷೆ ಶ್ಯಾಮಲ, ಬುಕ್ಕಾಪಟ್ಟಣ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ, ತಹಸೀಲ್ದಾರ್ ಗೋವಿಂದರಾಜು, ಇಓ ಶಿವಪ್ರಕಾಶ್, ಸಿಪಿಐ ನದಾಫ್, ಸಣ್ಣ ನೀರಾವರಿ ಎಇಇ ರಮೇಶ್, ಮುಖಂಡರಾದ ರವಿಕುಮಾರ್, ರಂಗರಾಜು, ಕಿರಣ್, ಶಿವರಾಮ್, ಅರವಿಂದ್ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








