ಬೆಂಗಳೂರು:
ಬೈಕ್ ಅಡ್ಡಗಟ್ಟಿ ನಂತರ ಚಾಕು ತೋರಿಸಿ ದರೋಡೆ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬನಶಂಕರಿ ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸಂತೋಷ್ ಹಾಗೂ ರಾಜೇಶ್ ಬಂಧಿತ ಆರೋಪಿಗಳು. ಈ ಇಬ್ಬರು ರಾತ್ರಿ ವೇಳೆ ಒಂಟಿಯಾಗಿ ಹೋಗುವ ಬೈಕ್ ಸವಾರರನ್ನು ಅಡ್ಡಗಟ್ಟಿ ಚಾಕು ತೋರಿಸಿ ಬೈಕ್ ನಲ್ಲಿ ಕಿಡ್ನ್ಯಾಪ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಅಗಸ್ಟ್ 14ರ ರಾತ್ರಿ ಹೊಸೂರಿನಿಂದ ಬೈಕಿನಲ್ಲಿ ಬರುತ್ತಿದ್ದ ಭರಣಿಯೇಂದ್ರನ್ನನ್ನು ಈ ಇಬ್ಬರು ಆರೋಪಿಗಳು ಕದಿರೇನಹಳ್ಳಿ ಬಳಿ ಅಡ್ಡಗಟ್ಟಿದ್ದಾರೆ. ನಂತರ ಚಾಕು ತೋರಿಸಿ ಜೇಬಿನಲ್ಲಿದ್ದ 8,500 ನಗದು ಮತ್ತು ವಿವೊ ಮೊಬೈಲ್ ಅನ್ನು ಕಿತ್ತುಕೊಂಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಆತನನ್ನು ಬೈಕಿನಲ್ಲೇ ಅಪಹರಣ ಮಾಡಿ ಎಟಿಎಂಗೆ ಕರೆದೊಯ್ದ 20 ಸಾವಿರ ಡ್ರಾ ಮಾಡಿಸಿಕೊಂಡು ಎಸ್ಕೇಪ್ ಆಗಿದ್ದಾರೆ.
ಬಂಧಿತ ಆರೋಪಿಗಳ ಪೈಕಿ ಸಂತೋಷ್ ಕೆಲ ದಿನಗಳ ಹಿಂದೆ ಜೈಲಿನಿಂದ ಹೊರ ಬಂದಿದ್ದ ಎಂದು ಪೊಲೀಸರು ಹೇಳಿದ್ದಾರೆ.
