ಡಿ.ಜೆ ಹಳ್ಳಿ ಪ್ರಕರಣಕ್ಕೂ ಫೋನ್ ಟ್ಯಾಪಿಂಗ್‍ಗೂ ಸಂಬಂಧವಿಲ್ಲ : ಡಿ.ಕೆ.ಸುರೇಶ್

ಬೆಂಗಳೂರು

    ಡಿ.ಜೆ ಹಳ್ಳಿ ಪ್ರಕರಣಕ್ಕೂ ಫೋನ್ ಟ್ಯಾಪಿಂಗ್‍ಗೂ ಸಂಬಂಧವಿಲ್ಲ. ಕಾಂಗ್ರೆಸ್ ನಾಯಕರ ಫೋನ್ ಟ್ಯಾಪಿಂಗ್ ಆರೋಪವಲ್ಲ, ಅದು ಸತ್ಯ ಎಂದು ಸಂಸದ ಡಿ.ಕೆ.ಸುರೇಶ್ ಸ್ಪಷ್ಟಪಡಿಸಿದ್ದಾರೆ.

    ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಡಿ.ಜೆ ಹಳ್ಳಿ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆಸುತ್ತಿದ್ದಾರೆ. ವಾಸ್ತವಾಂಶವೇ ಬೇರೆಯಿದೆ. ಬಿಬಿಎಂಪಿ ಚುನಾವಣೆ ಎದುರಾಗುತ್ತಿದೆ. ಅದಕ್ಕಾಗಿ ಇಲ್ಲಿನ ಬಿಜೆಪಿ ನಾಯಕರು ಚುನಾವಣಾ ರಾಜಕೀಯ ಮಾಡುತ್ತಿದ್ದಾರೆ. ಅದಕ್ಕಾಗಿ ಪೊಲೀಸರ ಮೇಲೆ ಒತ್ತಡ ತರುತ್ತಿದ್ದಾರೆ. ಬಿಜೆಪಿಯವರು ಸಾವಿನ ಮೇಲೆ ಹೆಣದ ರಾಜಕೀಯ ಮಾಡಿದವರು. ಇದೀಗ ಡಿ.ಜೆ.ಹಳ್ಳಿ ಪ್ರಕರಣವನ್ನು ಚುನಾವಣೆಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ಆರೋಪಿಸಿದರು.

    ಡಿಜೆ ಹಳ್ಳಿ ಪ್ರಕರಣದಲ್ಲಿ ಗುಪ್ತಚರ ಇಲಾಖೆಯ ವೈಫಲ್ಯವಿದೆ. ವೈಫಲ್ಯವನ್ನು ಮುಚ್ಚಿ ಹಾಕಲು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಡಿ.ಜೆ.ಹಳ್ಳಿ ಗಲಭೆಗೆ ಗುಪ್ತಚರ ವೈಫಲ್ಯವೇ ಕಾರಣ ಎಂಬುದನ್ನು ಸರ್ಕಾರ ಒಪ್ಪಿಕೊಳ್ಳಬೇಕು ಎಂದು ಡಿ.ಕೆ.ಸುರೇಶ್ ಒತ್ತಾಯಿಸಿದರು.

    ಕಳೆದ 15 ದಿನಗಳಿಂದ ಸಹೋದರ ಡಿ.ಕೆ.ಶಿವಕುಮಾರ್ ಮೊಬೈಲ್ ಕರೆಯಲ್ಲಿ ಅಡೆಚಣೆಗಳೆದುರಾಗುತ್ತಿವೆ. ಈ ಬಗ್ಗೆ ಕೆಲವರು ದೂರು ಕೊಡುವಂತೆ ಸಲಹೆ ನೀಡಿದ್ದರು. ಅದರಂತೆ ಶಿವಕುಮಾರ್ ದೂರು ಕೊಟ್ಟಿದ್ದಾರೆ. ದೂರವಾಣಿ ಕದ್ದಾಲಿಕೆಯಲ್ಲಿ ಬಿಜೆಪಿಯವರು ಪರಿಣಿತರು. ಬೇರೆಯವರ ಮೇಲೆ ಆರೋಪ ಹೊರಿಸಿ ತಪ್ಪಿಸಿಕೊಳ್ಳುವುದರಲ್ಲಿ ಇವರು ನಿಸ್ಸೀಮರು. ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರ ದೂರವಾಣಿ ಕದ್ದಾಲಿಕೆ ವಿಚಾರವನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

    ವ್ಯಕ್ತಿಸ್ವಾತಂತ್ರ್ಯ ಹಗರಣ ಮಾಡಲು ಅವಕಾಶವಿಲ್ಲ. ಇದರ ಬಗ್ಗೆ ಸರ್ಕಾರ ಗಂಭಿರವಾಗಿ ಪರಿಗಣಿಸಬೇಕು. ಗೃಹ ಸಚಿವರು ಲಘುವಾಗಿ ಮಾತನಾಡಬಾರದು. ತಮ್ಮ ದೂರಿನ ಬಗ್ಗೆ ರಾಜ್ಯ ಸರ್ಕಾರ ಮೊದಲು ಪರಿಗಣಿಸಬೇಕು. ಇಲ್ಲದಿದ್ದಲ್ಲಿ ಕೇಂದ್ರಕ್ಕೆ ಪತ್ರ ಬರೆಯುವುದಾಗಿ ಸುರೇಶ್ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link