ಮಧುಗಿರಿ
ಅಧಿಕಾರವಿರಲಿ, ಇಲ್ಲದಿರಲಿ, ಉಸಿರಿರುವ ತನಕ ರೈತರ ಒಳತಿಗಾಗಿ ಕೆಲಸ ಕಾರ್ಯಗಳನ್ನು ಮಾಡುವೆ. ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಸಹಕಾರ ಸಂಘಗಳನ್ನು ಆರಂಭಿಸಲಾಗುವುದು ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್. ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಗುಂಡಗಲ್ಲು ಗ್ರಾಮದಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರೆವೇರಿಸಿ ಅವರು ಮಾತನಾಡಿದರು. ನಾನು ಶಾಸಕನಾಗಿದ್ದಾಗ ಜನರು ತೋರುತ್ತಿದ್ದ ಪ್ರೀತಿ ವಿಶ್ವಾಸ ಇಂದೂ ಸಹ ಹಾಗೆಯೆ ಉಳಿದುಕೊಂಡಿದೆ. ನಾನು ಅಧಿಕಾರದ ಹಿಂದೆ ಹೋದವನಲ್ಲ, ಅದೇ ಅಧಿಕಾರದ ಲಾಭವನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುತ್ತೇನೆ. ಮಧುಗಿರಿಯಲ್ಲಿ 39 ಗ್ರಾಮ ಪಂಚಾಯಿತಿಗಳಿದ್ದರೂ ಕೂಡ ಕೇವಲ 26 ಸೊಸೈಟಿಗಳಿವೆ. ತಾಲ್ಲೂಕಿಗೆ ಉಳಿದ 16 ಮತ್ತು ಇಡೀ ಜಿಲ್ಲೆಯಲ್ಲಿ 120 ಸೊಸೈಟಿಗಳನ್ನು ಪ್ರಾರಂಭಿಸಲಾಗುವುದು.
ನನಗೆ ಅಧಿಕಾರವಿರಲಿ-ಇಲ್ಲದಿರಲಿ, ಹಾಗೆಯೆ ಚುನಾವಣೆಯಲ್ಲಿ ಜನರು ಓಟಾಕಲಿ ಬಿಡಲಿ, ನನ್ನಲ್ಲಿ ಉಸಿರಿರುವತನಕ ರೈತರ ಒಳತಿಗಾಗಿ ಮತ್ತು ಅವರು ಆರ್ಥಿಕವಾಗಿ ಸದೃಢರಾಗಬೇಕೆಂಬ ಉದ್ದೇಶದಿಂದ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ರೈತರು ನಮಗಾಗಿ ಬೇಸಾಯಕ್ಕೆ ಬಂಡವಾಳ ಹಾಕುತ್ತಾರೆಯೆ ಹೊರತು ಅವರಿಗಾಗಿ ಅಲ್ಲ. ರೈತ ಬಂಡವಾಳ ಹಾಕಿ ಬೆಳೆ ಬೆಳೆಯದಿದ್ದರೆ ಇಂದು ನಾವೆಲ್ಲಾ ಹಸಿವಿನಿಂದ ಬಳಲಬೇಕಾಗಿತ್ತು. ರೈತ ಈ ಹೊತ್ತು ಬೆಳೆ ತೆಗೆಯಲು ಸಾಲ ಮಾಡಿ ಬಂಡವಾಳ ಹಾಕುತ್ತಾನೆ.
ಆದರೆ ಅದು ಮಳೆ ಕೊರೆತೆಯೊ, ರೋಗದಿಂದನೋ ಅಥವಾ ಪ್ರಕೃತಿ ವಿಕೋಪದಿಂದಲೋ ಬೆಳೆ ನಷ್ಟವಾದರೆ, ಅವರು ಹಾಕಿರುವ ಬಂಡವಾಳ ನಷ್ಟವಾಗಿ ಸಾಲಗಾರನಾಗುತ್ತಾನೆ. ಆದ್ದರಿಂದ ರೈತನಿಗೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಉತ್ಪಾದನೆ ಮಾಡುವಂತ ತಾಂತ್ರಿಕತೆ ಒದಗಿಸಬೇಕು. ಅವನು ಉತ್ಪಾದಿಸುವ ಬೆಳೆಗೆ ನಷ್ಟವಾಗದ ರೀತಿಯಲ್ಲಿ ಬೆಂಬಲ ಬೆಲೆ ನಿಗದಿ ಮಾಡಿದಾಗ ಮಾತ್ರ ನಾವು ರೈತನಿಗೆ ನ್ಯಾಯ ಒದಗಿಸಿದಂತಾಗುತ್ತದೆ.
ಕೊರೊನಾದಿಂದ ಬೆಂಗಳೂರು ಮತ್ತು ಇತರೆ ಪಟ್ಟಣಗಳಿಂದ ಬಂದಂತಹ ಯುವಕರು, ಇಂದು ತಮ್ಮ ತಮ್ಮ ಗ್ರಾಮಗಳಲ್ಲಿ ಬೇಸಾಯಕ್ಕಿಳಿದು ಭೂಮಿಯನ್ನು ಹಸಿರು ಮಾಡಿದ್ದಾರೆ. ಅವರನ್ನು ಬೇಜಾರು ಮಾಡದಂತೆ ಆ ಭಗವಂತೆ ಕರುಣೆ ತೋರಿಸಿ ಎರಡು ಹದ ಮಳೆ ಸುರಿಸಬೇಕು. ಸಿದ್ದರಾಮಯ್ಯರವರ ಕಾಲಾವಧಿಯಲ್ಲಿ ಅನ್ನಭಾಗ್ಯ ಯೋಜನೆ ಜಾರಿ ಮಾಡಿದ್ದರ ಫಲ ಇಂದು, ಈ ಭಾಗದಲ್ಲಿ ಬರಗಾಲ ಹಾಗೂ ಕೊರೊನಾ ಸಂಕಷ್ಟದಲ್ಲೂ ಕೂಡ ಯಾರೊಬ್ಬರೂ ಹಸಿವಿನಿಂದ ಬಳಲಲಿಲ್ಲ. ಆದ್ದರಿಂದ ಕಷ್ಟದಲ್ಲಿ ಸಹಾಯ ಮಾಡಿದ ಮತ್ತು ಉತ್ತಮ ಕಾರ್ಯ ಮಾಡಿದವರನ್ನು ಜನರು ಯಾಹೊತ್ತೂ ಮರೆಯಬಾರದು. ಕೊವಿಡ್ ಮುಗಿದ ನಂತರ ಮುಂದಿನ ದಿನಗಳಲ್ಲಿ ಪ್ರತಿಯೊಂದು ಗ್ರಾಮ ಪಂಚಾಯತಿಗೂ ಭೇಟಿ ನೀಡಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಮುದ್ದೇನಹಳ್ಳಿಯ ತಾ.ಪಂ ಸದಸ್ಯ ಎಂ.ಎನ್. ಮಲ್ಲಿಕಾರ್ಜುನಯ್ಯನವರ ಮನೆಗೆ ಕೆಎನ್‍ಆರ್ ಭೇಟಿ ನೀಡಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು.ಡಿಸಿಸಿ ಬ್ಯಾಂಕ್ ಮೇಲ್ವೀಚಾರಕ ಎನ್.ರಾಮಕೃಷ್ಣ, ಸೀತಾರಾಮ್, ವಿ.ಎಸ್.ಎಸ್.ಎನ್. ಅಧ್ಯಕ್ಷ ರಾಧಾಕೃಷ್ಣರೆಡ್ಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ರಾಧಾಕೃಷ್ಣರೆಡ್ಡಿ, ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರವೀಣ್ ಕುಮಾರ್, ಜೆ.ಡಿ.ವೆಂಕಟೇಶ್, ರಾಜ್ಯ ಸಹಕಾರಿ ಮಹಾ ಮಂಡಲದ ಅಧ್ಯಕ್ಷ ಗಂಗಣ್ಣ, ಮುಖಂಡರಾದ ಆದಿನಾರಾಯಣರೆಡ್ಡಿ, ಪಿ.ಸಿ. ಕೃಷ್ಣ ರೆಡ್ಡಿ, ರಾಘವೇಂದ್ರರೆಡ್ಡಿ, ಜಯರಾಮರೆಡ್ಡಿ, ತಿಮ್ಮಾರೆಡ್ಡಿ, ದಾಸರೆಡ್ಡಿ, ಫ್ರ್ರೂಟ್ ಕೃಷ್ಣ, ಗಂಗಪ್ಪ, ಹೆಚ್.ಎನ್.ಬಾಲಕೃಷ್ಣ, ಶಿವಯ್ಯ, ಶಾಮೀರ್, ವೆಂಕಟಾಚಲಪತಿ, ಕಾಂತರಾಜು, ಜಿ.ಬಿ. ಜಗನ್ನಾಥ್, ಜಿಪಂ ಮಾಜಿ ಸದಸ್ಯ ಎಸ್.ಡಿ.ಕೃಷ್ಣಪ್ಪ, ವಕೀಲರಾದ ಪಿ.ಸಿ.ಕೃಷ್ಣರೆಡ್ಡಿ, ಹೆಚ್.ಟಿ.ತಿಮ್ಮರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಮರಿಯಣ್ಣ, ಭಾಸ್ಕರ್, ವಿವೇಕಾನಂದ, ಚಂದ್ರಣ್ಣ, ಮಾದವಿ, ಮಂಜುನಾಥ್ ಹಾಗೂ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
