ಸರ್ಕಾರಿ ಶಾಲೆಗಳ ಮೂಲಸೌಕರ್ಯಕ್ಕಾಗಿ ಯೋಜನೆ ರೂಪಿಸಿ : ಸಂಸದ

ಚಿತ್ರದುರ್ಗ:

    ಡಿಎಂಎಫ್ ಅನುದಾನದ ಮಾರ್ಗಸೂಚಿ ಪ್ರಕಾರ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಸರ್ಕಾರದ ಅನುದಾನದ, ಡಿಎಂಎಫ್, ನಬಾರ್ಡ್ ಅನುದಾನ ಸೇರಿದಂತೆ ಎಲ್ಲ ಯೋಜನೆಗಳನ್ನು ಸೇರಿಸಿ, ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಉತ್ತಮ ಯೋಜನೆ ರೂಪಿಸಬೇಕು ಎಂದು ಸಂಸದ ಎ.ನಾರಾಯಣಸ್ವಾಮಿ ಸೂಚನೆ ನೀಡಿದರು.

    ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೇಂದ್ರ ಪುರಸ್ಕøತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಹಾಗಾಗಿ ಶಾಲೆಗಳಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಸರ್ಕಾರದ ಅನುದಾನ, ಡಿಎಂಎಫ್, ನಬಾರ್ಡ್, ಜಿಲ್ಲಾ ಪಂಚಾಯಿತಿ ನರೇಗಾ ಯೋಜನೆ ಸೇರಿದಂತೆ ಸರ್ಕಾರದ ಎಲ್ಲ ಯೋಜನೆಗಳನ್ನು ಒಟ್ಟಿಗೆ ಸೇರಿ ಶಾಲೆಗಳ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸಬೇಕು. ಯೋಜನೆಗಳನ್ನು ಪ್ರತ್ಯೇಕಗೊಳಿಸಿದರೆ ಗುತ್ತಿಗೆದಾರರರಿಗೆ ಅನುಕೂಲವಾಗುತ್ತದೆ. ಹಾಗಾಗಿ ಎಲ್ಲ ಯೋಜನೆಗಳನ್ನು ಒಟ್ಟಿಗೆ ಸೇರಿಸಬೇಕು ಎಂದು ತಾಕೀತು ಮಾಡಿದರು.

    ಸರ್ಕಾರಿ ಶಾಲೆಗಳ ಮಕ್ಕಳು ಶಿಥಿಲಾವಸ್ಥೆಯಲ್ಲಿರುವ ಕೊಠಡಿಯ, ಭಯದ ವಾತಾವರಣದಲ್ಲಿ ಪಾಠ ಕೇಳುವ ಸ್ಥಿತಿಯಿದೆ. ಅನೇಕ ಶಾಲೆಗಳ ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ. ಈ ನಿಟ್ಟಿನಲ್ಲಿ ಜಿಲ್ಲೆಗೆ ಅಗತ್ಯವಿರುವ 1156 ಸರ್ಕಾರಿ ಶಾಲೆಗಳ ಕೊಠಡಿಗಳ ನಿರ್ಮಾಣಕ್ಕೆ ಯೋಜನೆ ರೂಪಿಸಬೇಕು. ನರೇಗಾ ಯೋಜನೆಯಡಿಯಲ್ಲಿ ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ನಿರ್ಮಾಣಕ್ಕೆ ಅದ್ಯತೆ ನೀಡಬೇಕು ಎಂದು ತಿಳಿಸಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಡಿಡಿಪಿಐ ಕೆ.ರವಿಶಂಕರ್ ರೆಡ್ಡಿ, ಜಿಲ್ಲೆಗೆ ಅಗತ್ಯವಿರುವ 1156 ಸರ್ಕಾರಿ ಶಾಲೆಗಳ ಕೊಠಡಿಗಳ ನಿರ್ಮಾಣಕ್ಕಾಗಿ ಈಗಾಗಲೇ ಯೋಜನೆ ರೂಪಿಸಲಾಗಿದೆ. ಸರ್ಕಾರಿ ಶಾಲೆಗಳ ಕಾಂಪೌಂಡ್ ನಿರ್ಮಾಣಕ್ಕಾಗಿ ನರೇಗಾ ಯೋಜನೆಯಡಿಯಲ್ಲಿ ಜಿಲ್ಲೆಗೆ 92 ಲಕ್ಷ ಅನುದಾನ ಮೀಸಲಿರಿಸಲಾಗಿದ್ದು, ಈಗಾಗಲೇ 40 ಲಕ್ಷ ಬಿಡುಗಡೆಯಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

    ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು ಮಾತನಾಡಿ, ಜಿಲ್ಲೆಯಲ್ಲಿ ಶಿಥಿಲಾವಸ್ಥೆ ತಲುಪಿರುವ ಸರ್ಕಾರಿ ಶಾಲೆಗಳ ಕೊಠಡಿಗಳ ವಿವರವನ್ನು ತಾಲ್ಲೂಕುವಾರು ಪಟ್ಟಿ ಮಾಡಿ ವರದಿ ನೀಡುವಂತೆ ಡಿಡಿಪಿಐ ಕೆ. ರವಿಶಂಕರ್ ರೆಡ್ಡಿ ಅವರಿಗೆ ಸೂಚಿಸಿದರು.
ಶುದ್ಧ ಕುಡಿಯುವ ನೀರು ಕೊಡಿ: ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಏಜೆನ್ಸಿಯವರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ನಿರ್ವಹಣೆ ಕೊರತೆಯಿಂದಾಗಿ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಜಿಲ್ಲೆಯಲ್ಲಿ 1062 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಬಹಳಷ್ಟು ಆರ್‍ಓ ಘಟಕಗಳು ರಿಪೇರಿ ಹಂತದಲ್ಲಿವೆ. ಇದರಿಂದ ಜನರಿಗೆ ತೊಂದರೆಯಾಗಿದ್ದು, ಜಿಲ್ಲೆಯಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳ ಸುಸ್ಥಿತಿಯ ಬಗ್ಗೆ ಖುದ್ದು ಪರಿಶೀಲನೆ ನಡೆಸಬೇಕು. ಜನರಿಗೆ ಶುದ್ಧ ಕುಡಿಯುವ ನೀರು ಕೊಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒಗೆ ಸಂಸದರು ಸೂಚನೆ ನೀಡಿದರು. ಕಳೆದ ಬಾರಿಯ ಸಭೆಯಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಕುರಿತು ನಿರ್ದೇಶನ ನೀಡಲಾಗಿದ್ದರೂ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಸಂಸದರು ಬೇಸರ ವ್ಯಕ್ತಪಡಿಸಿದರು.

    ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿ: ದೇವರಾಜು ಅರಸು ಅಭಿವೃದ್ಧಿ ನಿಗಮ, ಅಂಬೇಡ್ಕರ್, ಭೋವಿ, ತಾಂಡ ಹಾಗೂ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಸುಮಾರು 13 ಸಾವಿರ ಗಂಗಾ ಕಲ್ಯಾಣ (ಕೊಳವೆ ಬಾವಿ) ಯೋಜನೆಯ ಫಲಾನುಭವಿಗಳು ನರೇಗಾದ ಮೂಲಕ ಕೃಷಿ, ರೇಷ್ಮೆ, ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಕೃಷಿ ಚಟುವಟಿಕೆಯಲ್ಲಿ ಸ್ವಾವಲಂಬನೆ ಸಾಧಿಸಲು ಅನುಕೂಲವಾಗುವಂತೆ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ರೂಪಿಸುವಂತೆ ಅಧಿಕಾರಿಗಳಿಗೆ ಸಂಸದರು ತಾಕೀತು ಮಾಡಿದರು.

    ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳು ಬೇರೆ ಬೇರೆ ಇಲಾಖೆಯಲ್ಲಿ ಯಾವ ಸೌಲಭ್ಯ ಪಡೆದಿದ್ದಾರೆ. ಯಾವ ಬೆಳೆ ಬೆಳೆದಿದ್ದಾರೆ, ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಯ ಅಧಿಕಾರಿಗಳು ರೈತರ ಪಟ್ಟಿ ತಯಾರಿಸಿ, ಸಮಗ್ರ ವರದಿ ನೀಡುವಂತೆ ಸೂಚನೆ ನೀಡಿದರು.

    ಸಹಜ ಹೆರಿಗೆ ಪ್ರಮಾಣ ಹೆಚ್ಚಾಗಲಿ: ಜಿಲ್ಲೆಯ ಸಾರ್ವಜನಿಕ ಹಾಗೂ ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚಾಗಿ ಶಸ್ತ್ರ ಚಿಕಿತ್ಸೆಯ ಮೂಲಕ ಹೆರಿಗೆಗಳಾಗುತ್ತಿವೆ. ಶಸ್ತ್ರ ಚಿಕಿತ್ಸೆಯ ಹೆರಿಗೆ ಪ್ರಮಾಣ ಕಡಿಮೆ ಮಾಡಿ ಸಹಜ ಹೆರಿಗೆ ಪ್ರಮಾಣ ಹೆಚ್ಚಾಗುವಂತೆ ಕ್ರಮವಹಿಸಬೇಕು ಎಂದು ಸಂಸದರು ಡಿಎಚ್‍ಒ ಡಾ.ಫಾಲಾಕ್ಷಗೆ ಸೂಚನೆ ನೀಡಿದರು.

   ಇದಕ್ಕೆ ದನಿಗೂಡಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಬಹಳಷ್ಟು ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆಗಳಾಗುತ್ತಿವೆ ಎಂದು ಗಂಭೀರ ಆರೋಪ ಮಾಡಿದರು. ಗರ್ಭೀಣಿಯರಿಗೆ ವೈದ್ಯಾಧಿಕಾರಿಗಳು ಮಾನಸಿಕವಾಗಿ ಧೈರ್ಯ ತುಂಬಬೇಕು ಎಂದು ಸಲಹೆ ನೀಡಿದರು.

   ಜಿಲ್ಲೆಯಲ್ಲಿ 32 ಅಂಬುಲೆನ್ಸ್‍ಗಳಿದ್ದು, ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ 5 ಅಂಬುಲೆನ್ಸ್‍ಗಳು ಕೋವಿಡ್‍ಗಾಗಿ ಬಳಕೆಯಾಗುತ್ತಿವೆ. ನಾನ್ ಕೋವಿಡ್ ರೋಗಿಗಳಿಗೆ ಅಂಬುಲೆನ್ಸ್‍ಗಳ ಸಮಸ್ಯೆಯಾಗುತ್ತಿದೆ. ಮೂರು ಅಂಬುಲೆನ್ಸ್ ಖರೀದಿಗಾಗಿ ಮಂಜೂರಾಗಿದ್ದ 60 ಲಕ್ಷ ಅನುದಾನವೂ ಲ್ಯಾಪ್ಸ್ ಆಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ನಾನ್ ಕೋವಿಡ್ ರೋಗಿಗಳಿಗೆ ಅಂಬುಲೆನ್ಸ್‍ಗಳ ಕೊರತೆಯಾಗಿದೆ. ಇದರಿಂದ ಖಾಸಗಿ ಅಂಬುಲೆನ್ಸ್ ಅವರು ಡಿಮ್ಯಾಂಡ್ ಮಾಡುತ್ತಾರೆ ಎಂದು ಆರೋಪಿಸಿದರು.

   ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಎ.ನಾರಾಯಣಸ್ವಾಮಿ, ಐಸಿಯು ಮಾದರಿಯಲ್ಲಿ ವೆಂಟಿಲೇಟರ್, ಆಕ್ಸಿಜನ್ ಸೇರಿದಂತೆ ಎರಡು ಅಂಬುಲೆನ್ಸ್‍ಗಳು ಇರಬೇಕು ಎಂದು ಸಂಸದರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

   ವೈರಾಣುಗಳು ಬಾಧಿಸದಂತೆ ದೇಹವನ್ನು ಕಾಪಾಡಲು ರೋಗ ನಿರೋಧಕ ಶಕ್ತಿ ಬಹಳ ಮುಖ್ಯವಾಗಿದ್ದು. ಈ ನಿಟ್ಟಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಲುವಾಗಿ ಜಿಲ್ಲಾ ಆಯುಷ್ ಇಲಾಖೆಯಿಂದ ಜಿಲ್ಲೆಯ ಅಧಿಕಾರಿಗಳಿಗೆ ಹಾಗೂ ಕೊರೊನಾ ವಾರಿಯರ್ಸ್‍ಗಳಿಗೆ ಇಲಾಖೆ ವತಿಯಿಂದ ಆಯುಷ್ ಔಷಧಿಗಳನ್ನು ವಿತರಿಸಲಾಗಿದೆ. ಹೆಚ್ಚುವರಿಯಾಗಿ ಔಷಧಿಗಳನ್ನು ಖರೀದಿಸಲು ಜಿಲ್ಲಾ ಪಂಚಾಯತ್ ಜಿಲ್ಲಾ ವಲಯ ಯೋಜನೆಯಿಂದ ರೂ. 32 ಲಕ್ಷ ಅನುದಾನಕ್ಕೆ ಅನುಮೋದನೆಯಾಗಿದ್ದು, ಔಷಧಿಗಳನ್ನು ವಿತರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಕೆ.ಎಲ್. ವಿಶ್ವನಾಥ್ ಸಭೆಗೆ ಮಾಹಿತಿ ನೀಡಿದರು.

   ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಹರಾಜು, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಟಿ.ಯೋಗೇಶ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap