ತುಮಕೂರು
ನಗರದಲ್ಲಿ ನಡೆದಿರುವ ಸ್ಮಾರ್ಟ್‍ಸಿಟಿ ಯೋಜನೆಯ ಅವೈಜ್ಞಾನಿಕ ಕಾಮಗಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮೇಯರ್ ಫರೀದಾ ಬೇಗಂ, ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಸಾರ್ವಜನಿಕರ ದೂರಿನ ಮೇರೆಗೆ ಬುಧವಾರ ಬಿ.ಹೆಚ್.ರಸ್ತೆಯಲ್ಲಿ ನಡೆದಿರುವ ಸ್ಮಾರ್ಟ್ ಸಿಟಿ ಕಾಮಗಾರಿ ಪರಿಶೀಲನೆಗೆ ಆಗಮಿಸಿದ ಮೇಯರ್, ಅಲ್ಲಿನ ಅವ್ಯವಸ್ಥೆ ವಿರುದ್ಧ ಕಿಡಿಕಾರಿ ಕೆಲಸ ನಿಲ್ಲಿಸಲು ಸೂಚಿಸಿದರು. ಬಿ.ಹೆಚ್.ರಸ್ತೆಗೆ ಮೊದಲಿದ್ದ ಸರ್ವೀಸ್ ರಸ್ತೆ ಕಿತ್ತು ಆ ಜಾಗದಲ್ಲಿ ವಾಹನಗಳ ಪಾರ್ಕಿಂಗ್ ಜಾಗ ಸಿದ್ಧ ಮಾಡಲು ಟೈಲ್ಸ್ ಹಾಕಲಾಗುತ್ತಿತ್ತು. ಈ ವಾರ್ಡಿನ ಪಾಲಿಕೆ ಸದಸ್ಯ ಇನಾಯತ್ ಉಲ್ಲಾ ಖಾನ್ ಕೂಡಾ ಸಿಟ್ಟಿನಿಂದ ಹಾಕಿರುವ ಟೈಲ್ಸ್ ತೆಗೆಯುವಂತೆ ಹೇಳಿದರು.
ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಡಾ.ರಂಗಸ್ವಾಮಿಯವರಿಗೆ ಫೋನ್ ಮಾಡಿದ ಮೇಯರ್, ಇಲ್ಲಿನ ಅವ್ಯವಸ್ಥೆ ಬಗ್ಗೆ ಅವರನ್ನು ತರಾಟೆ ತೆಗೆದುಕೊಂಡರು. ಯಾವ ದೃಷ್ಠಿಯಲ್ಲಿ ನೀವು ಯೋಜನೆಗಳನ್ನು ತಯಾರಿಸಿ, ಕಾಮಗಾರಿ ಮಾಡಿಸುತ್ತಿದ್ದೀರಿ, ವಾಹನ ದಟ್ಟಣೆ ಹೆಚ್ಚಾಗಿರುವ ಬಿ.ಹೆಚ್.ರಸ್ತೆಗೆ ಸರ್ವೀಸ್ ರಸ್ತೆ ಅಗತ್ಯವೆಂದು ಹಿಂದೆ ಯೋಜನೆ ಮಾಡಿ ರಸ್ತೆ ಮಾಡಲಾಗಿತ್ತು. ಈಗ ಸರ್ವೀಸ್ ರಸ್ತೆ ತೆರವು ಮಾಡಿರುವ ಬಗ್ಗೆ ಸಾರ್ವಜನಿಕರ ವಿರೋಧವಿದೆ. ಇಲ್ಲಿ ಸರ್ವೀಸ್ ಉಳಿಸಬೇಕು ಎಂದು ಹೇಳಿದರು.
ಈ ವೇಳೆ ಅಧಿಕಾರಿ, ಸ್ಥಳಕ್ಕೆ ಹೋಗುವ ಮೊದಲು ನಮಗೆ ಮಾಹಿತಿ ನೀಡಬೇಕಾಗಿತ್ತು ಮೇಡಂ ಎಂದು ಹೇಳಿದರೇನೋ, ಅಷ್ಟಕ್ಕೆ ಸಿಟ್ಟಾದ ಮೇಯರ್, ಸ್ಥಳಪರಿಶೀಲನೆಗೆ ಹೋಗುವಾಗ ನಿಮಗೆ ಮಾಹಿತಿ ನೀಡುವ ಅಗತ್ಯವಿಲ್ಲ, ನಾಗರಿಕರಿಂದ ದೂರು ಬಂದಾಗ ಅದನ್ನು ಗೌರವಿಸಿ ಸ್ಥಳ ಪರಿಶೀಲನೆಗೆ ಹೋಗುವುದು ನನ್ನ ಜವಾಬ್ದಾರಿ ಎಂದು ಸಿಟ್ಟಿಗೆದ್ದರು.
ಕಾಮಗಾರಿ ನಡೆಯುವ ಸ್ಥಳದಲ್ಲಿ ಯಾವ ಇಂಜಿನಿಯರೂ ಇಲ್ಲ, ಕೆಲಸಗಾರರು ಹೇಗೆ ಕೆಲಸ ಮಾಡುತ್ತಿದ್ದಾರೆ, ಅದರ ಗುಣಮಟ್ಟವೇನು ಎಂದು ಪರಶೀಲನೆ ಮಾಡುವವರೂ ಇಲ್ಲಿ ದಿಕ್ಕಿಲ್ಲ. ಈ ಬಗ್ಗೆ ಸ್ಮಾರ್ಟ್ ಸಿಟಿ ಚೇರ್ಮನ್‍ಗೆ ದೂರು ನೀಡುತ್ತೇನೆ ಎಂದರು.ಸ್ವಲ್ಪ ಹೊತ್ತಿಗೆ ಸ್ಮಾರ್ಟ್ ಲಿಮಿಟೆಡ್‍ನ ಕಾರ್ಯಪಾಲಕ ಇಂಜಿನಿಯರ್ ಬಸುರಾಜುಗೌಡ ಸ್ಥಳಕ್ಕೆ ದೌಡಾಯಿಸಿ ಬಂದು ಮೇಯರ್‍ಗೆ ವಿವರ ನೀಡುವ ಪ್ರಯತ್ನ ಮಾಡಿದರು. ಸ್ಮಾರ್ಟ್ ಸಿಟಿ ಯೋಜನೆಯ ನಿಯಮಾನುಸಾರ ಈ ರಸ್ತೆಯ ಯೋಜನೆ ಸಿದ್ಧಪಡಿಸಿ ಕಾಮಗಾರಿ ಮಾಡಲಾಗುತ್ತಿದೆ ಎಂದರು.
ಸರ್ವೀಸ್ ರಸ್ತೆ ತೆರವು ಮಾಡಿ, ಅರ್ಧ ರಸ್ತೆವರೆಗೆ ಪಾರ್ಕಿಂಗ್ ಜಾಗ ಸಿದ್ಧ ಮಾಡುತ್ತಿದ್ದೀರಿ, ಮುಂದೆ ವಾಹನ ಸಾಂದ್ರತೆ ಹೆಚ್ಚಾದಾಗ ನಗರ ಪಾಲಿಕೆಯಿಂದ ಈ ಜಾಗ ತೆರವು ಮಾಡುವ ಪರಿಸ್ಥಿತಿ ಬರುತ್ತದೆ. ಸ್ಥಳೀಯ ಪರಿಸ್ಥಿತಿ, ಸಾರ್ವಜನಿಕರ ಅನುಕೂಲ ಆಧರಿಸಿ ಯೋಜನೆಗಳನ್ನು ರೂಪಿಸಬೇಕು, ನೀವು ಬೇಕಾಬಿಟ್ಟಿ ಕಾಮಗಾರಿ ನಡೆಸುತ್ತಿದ್ದೀರಿ, ಈ ಬಗ್ಗೆ ತಾವು ಸಭೆಯಲ್ಲಿ ಮಾತನಾಡುತ್ತೇನೆ ಎಂದು ಹೇಳಿದರು.ಮೇಯರ್ ಇದ್ದಾಗ ಕೆಲಸ ಸ್ಥಗಿತಗೊಳಿಸದ್ದ ಸಿಬ್ಬಂದಿ, ಅವರು ಹೋದ ನಂತರ ಕಾಮಗಾರಿ ಮುಂದುವರೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ